Asianet Suvarna News Asianet Suvarna News

ಫಲಕ ಬಿಡಿ, ರಸ್ತೆ ಗುಂಡಿ ನೋಡಿ: ಕನ್ನಡ ಬಗ್ಗೆ ಎಫ್‌ಕೆಸಿಸಿಐ ಉಡಾಫೆ!

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರಡಿಸಿರುವ ಆದೇಶದ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಉಡಾಫೆ ಪ್ರದರ್ಶನ ಮಾಡಿದೆ.

FKCCI Neglects Over Kannada
Author
Bengaluru, First Published Dec 8, 2019, 8:10 AM IST

ಬೆಂಗಳೂರು [ಡಿ.08]:  ತನ್ನ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರಡಿಸಿರುವ ಆದೇಶದ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಉಡಾಫೆ ಪ್ರದರ್ಶನ ಮಾಡಿದೆ.

ಕನ್ನಡ ನಾಮಫಲಕಕ್ಕಿಂತ ರಸ್ತೆ ಗುಂಡಿ, ಕಸ, ಸಂಚಾರ ದಟ್ಟಣೆಯಂತಹ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಗಮನ ಕೊಡಲಿ ಎಂದಿದೆ. ಜತೆಗೆ, ಕನ್ನಡ ನಾಮಫಲಕದಂತಹ ವಿಷಯವಿಟ್ಟುಕೊಂಡು ನಮಗೆ (ಉದ್ಯಮಿಗಳಿಗೆ) ಕಿರುಕುಳ ನೀಡಬೇಡಿ ಎನ್ನುವ ಧಾಷ್ಟ್ರ್ಯ ಮೆರೆದಿದೆ.

ಕನ್ನಡ ನಾಮಫಲಕ ಕಡ್ಡಾಯಗೊಳಿಸಿದ ಬಿಬಿಎಂಪಿ ಆದೇಶದ ವಿರುದ್ಧ ಮೇಯರ್‌ ಗೌತಮ್‌ಕುಮಾರ್‌ ಅವರಿಗೆ ಇತ್ತೀಚೆಗೆ ಪತ್ರ ಬರೆದಿರುವ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌ ಜನಾರ್ದನ್‌ ಅವರು, ನ.1ರಿಂದ ಒಂದು ತಿಂಗಳೊಳಗೆ ನಾಮಫಲಕ ಅಳವಡಿಸಬೇಕೆಂಬ ಬಿಬಿಎಂಪಿ ಆದೇಶ ಪಾಲನೆ ಕಷ್ಟ. ಹೀಗಾಗಿ ಏಪ್ರಿಲ್‌ವರೆಗೂ ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ.

ಜತೆಗೆ, ರಸ್ತೆ ಗುಂಡಿ ಸಮಸ್ಯೆಯೂ ಸೇರಿದಂತೆ ಬಿಬಿಎಂಪಿ ನಿಭಾಯಿಸಬೇಕಿರುವ ಸಮಸ್ಯೆಗಳ ಪಟ್ಟಿಮಾಡಿ ಕನ್ನಡ ನಾಮಫಲಕದ ವಿಚಾರಕ್ಕಿಂತ ಮೊದಲು ಈ ಸಮಸ್ಯೆ ಪರಿಹರಿಸುವತ್ತ ಗಮನಹರಿಸಿ ಎಂಬ ಉಚಿತ ಸಲಹೆಯನ್ನು ನೀಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಸಹಕರಿಸಬೇಕಾಗಿದ್ದ ಎಫ್‌ಕೆಸಿಸಿಐ ನಾಮಫಲಕ ಅಳವಡಿಕೆಯೇ ಕಿರುಕುಳ ಎಂದು ಬಿಂಬಿಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ಎಫ್‌ಕೆಸಿಸಿಐ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದು, ಕನ್ನಡ ನಾಡಿನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿರುವ ಉದ್ಯಮಿಗಳು ಸ್ವಯಂ ಪ್ರೇರಿತವಾಗಿ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳಬೇಕಾಗಿತ್ತು. ಇದೀಗ ಬಿಬಿಎಂಪಿ ಎಚ್ಚರಿಸಿದರೆ ಪ್ರತ್ಯುತ್ತರ ನೀಡಿ ಅವಹೇಳನ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿವೆ.

ಬಿಬಿಎಂಪಿಯೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅವರಿಗೆ (ಎಫ್‌ಕೆಸಿಸಿಐ) ಮುಂದಿನ ಏಪ್ರಿಲ್‌ವರೆಗೆ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಕೂಡಲೇ ನಾಮಫಲಕ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪರವಾನಗಿಯನ್ನು ರದ್ದುಪಡಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದೆ.

ಸಮಸ್ಯೆಗಳ ಬಗ್ಗೆ ನೋಡಿ..:

ನಾಮಫಲಕ ವಿಚಾರವಾಗಿ ಮೇಯರ್‌ ಗೌತಮ್‌ಕುಮಾರ್‌ಗೆ ಬರೆದಿರುವ ಪತ್ರದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ್‌, ನ.1ರಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ತರುವಂತೆ ತಾವು ಸೂಚಿಸಿದ್ದೀರಿ. ಆದರೆ, ಈಗಾಗಲೇ ನಗರದಲ್ಲಿ ಬಹಳಷ್ಟುಸಮಸ್ಯೆಗಳು ತಾಂಡವವಾಡುತ್ತಿವೆ. ಅವುಗಳ ಕಡೆ ಗಮನಹರಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿಮಾಡಿರುವ ಅವರು, ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆಯಿಂದ ಅಪಘಾತಗಳು, ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಸಂಚಾರ ದಟ್ಟಣೆಯಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಗಂಟೆಗಟ್ಟಲೆ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಡಾಂಬರು ಹಾಕಿದರೂ ಒಂದು ವಾರದಲ್ಲೇ ರಸ್ತೆ ಕಿತ್ತು ಹೋಗುತ್ತಿದೆ. ಮಳೆ ಬಂದರೆ ಡಾಂಬರು ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಅಷ್ಟೊಂದು ಚೆನ್ನಾಗಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ.

ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವುದಕ್ಕೆ ನಮ್ಮ ಸಂಸ್ಥೆಯು ಸ್ವಾಗತಿಸುತ್ತದೆ. ನಮ್ಮ ಸಂಸ್ಥೆಯಲ್ಲಿ ಕನ್ನಡ ಉಪಯೋಗ ಮಾಡುತ್ತಿದ್ದೇವೆ. ಆದರೆ, ಈಗಾಗಲೇ ವ್ಯಾಪಾರಿಗಳು, ಉದ್ಯಮಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವೇಳೆ ನಾಮಫಲಕದ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ವ್ಯಾಪಾರಿಗಳಿಗೆ ಹಾಗೂ ಉದ್ದಿಮೆದಾರರಿಗೆ ಕಿರುಕುಳ ನೀಡಬೇಡಿ ಎಂದೂ ಹೇಳಿದ್ದಾರೆ.

10 ಲಕ್ಷ ಕೈಗಾರಿಕೋದ್ಯಮಿಗಳು ಹಾಗೂ 20 ಲಕ್ಷ ವ್ಯಾಪಾರಿಗಳು ಇದ್ದಾರೆ. ಹೀಗಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳಲು 2020ರ ಏಪ್ರಿಲ್‌ 30 ರವರೆಗೆ ಕಾಲಾವಕಾಶ ನೀಡಬೇಕು ಎಂದು ಪತ್ರದಲ್ಲಿ ಕೇಳಿದ್ದಾರೆ.

ಏನಿದು ವಿವಾದ?:

ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ದಿನದ ಒಳಗಾಗಿ ನಗರ ವ್ಯಾಪ್ತಿಯ ಮಾಲ್‌, ಹೋಟೆಲ್‌, ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ಶೇ.60ರಷ್ಟುಕನ್ನಡ ಭಾಷೆಯ ನಾಮಫಲಕ ಪ್ರದರ್ಶನ ಕಡ್ಡಾಯಗೊಳಿಸಬೇಕೆಂದು ಸೂಚಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಕಳೆದ ಅಕ್ಟೋಬರ್‌ 19ರಂದು ಆದೇಶ ಹೊರಡಿಸಿದ್ದರು.

ಇದರಂತೆ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ನೀಡಲಾದ 47,406 ಉದ್ದಿಮೆಗಳ ಪೈಕಿ ಈವರೆಗೆ 22,474 ಉದ್ದಿಮೆ ಮಳಿಗೆಗಳ ನಾಮಫಲಕಗಳನ್ನು ಪರಿಶೀಲನೆ ಮಾಡಿದ್ದರು. 22 ಸಾವಿರ ಉದ್ದಿಮೆದಾರರಿಗೆ ನೋಟಿಸ್‌ ಜಾರಿ ಮಾಡಿ 15 ದಿನದಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಸೂಚಿಸಿದ್ದರು. ಒಂದು ವೇಳೆ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳದಿದ್ದರೆ ಉದ್ದಿಮೆ ಪರವಾನಗಿ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಇದರ ನಡುವೆ ಡಿ.5ರಂದು ಮೇಯರ್‌ ಗೌತಮ್‌ ಕುಮಾರ್‌ಗೆ ಪತ್ರ ಬರೆದಿರುವ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌, ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಅಸಡ್ಡೆ ವ್ಯಕ್ತಪಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ನಾಮಫಲಕ ಅಳವಡಿಸಿಕೊಳ್ಳುವುದಕ್ಕೆ ಯಾವುದೇ ಕಾರಣಕ್ಕೂ ಏಪ್ರಿಲ್‌ವರೆಗೆ ಕಾಲಾವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಕಾಲಮಿತಿ ಒಳಗೆ ಕನ್ನಡ ನಾಮಫಲಕ ಅಳವಡಿಕೆ ಮಾಡಿಕೊಳ್ಳದ ಉದ್ದಿಮೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು.

- ಬಿ.ಎಚ್‌. ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಬೆಂಗಳೂರು ನಗರದಲ್ಲಿ ಕನ್ನಡ ಭಾಷಾ ಬಳಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ನಿಯಮ ರೂಪಿಸಿ ಆದೇಶಿಸಿದೆ. ಇದರಲ್ಲಿ ಉದ್ದಿಮೆಗಳಿಗೆ ಕಿರುಕುಳ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

- ಡಾ.ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗ

Follow Us:
Download App:
  • android
  • ios