ಐದು ವರ್ಷಗಳಲ್ಲಿ ಗದ್ದಲ, ಗಲಾಟೆ ಇಲ್ಲದಂತೆ ನಿರ್ವಹಣೆ ಚಿಕ್ಕಂದವಾಡಿ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ

ಹೊಳಲ್ಕೆರೆ (ಅ.24) ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಆದರೆ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ, ಗಲಾಟೆ, ಗದ್ದಲ, ಕೇಸು ಇಲ್ಲದಂತೆ ಜನ ನೆಮ್ಮದಿಯಿಂದಿರುವಂತೆ ನೋಡಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇನೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಎಂ ಚಂದ್ರಪ್ಪ

ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ 1.40 ಕೋಟಿ ರು. ವೆಚ್ಚದ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ 493 ಹಳ್ಳಿಗಳಲ್ಲಿ ಜನರ ಸಮಸ್ಯೆ, ತೊಂದರೆ, ತಾಪತ್ರಯಗಳನ್ನು ಹುಡುಕಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ಕುಡಿಯುವ ನೀರಿನ ತೊಂದರೆಗೆ ಶಾಶ್ವತ ಪರಿಹಾರ, ಕೆರೆ ಕಟ್ಟೆ, ಚೆಕ್‌ಡ್ಯಾಂ, ಶಾಲೆ, ರಸ್ತೆಗಳ ನಿರ್ಮಾಣ ಮಾಡಿಸಿದ್ದೇನೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಮಸ್ಯೆಯಾಗಬಾರದೆಂದು ಜೋಗ್‌ಫಾಲ್ಸ್‌ನಿಂದ ನೇರವಾಗಿ ವಿದ್ಯುತ್‌ ತರುವ ಕೆಲಸ ಆರಂಭಗೊಂಡಿದೆ ಎಂದರು.

ವಿವಿಸಾಗರದಿಂದ ಪೈಪ್‌ಲೈನ್‌:

ಚಿಕ್ಕಜಾಜೂರಿನಿಂದ ಚಿಕ್ಕಂದವಾಡಿ ರೈಲ್ವೆಗೇಟ್‌ವರೆಗೆ ಸಿಸಿ ರಸ್ತೆಗೆ 9.75 ಕೋಟಿ ರು ಅನುದಾನ ಒದಗಿಸಲಾಗಿದೆ. ಮೂರು ವರ್ಷಗಳ ಹಿಂದೆ ಚಿಕ್ಕಂದವಾಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಅಭಾವವಿತ್ತು. ಶಾಂತಿಸಾಗರದಿಂದ ನೀರು ತರಲು ಪೈಪ್‌ಲೈನ್‌ ಕೆಲಸ ಆರಂಭಿಸಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಬಳಿ ಮಾತನಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಕ್ಷೇತ್ರದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಅದಕ್ಕಾಗಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಆರಂಭಗೊಂಡಿದೆ. 367 ಕೋಟಿ ರು. ಬಿಡುಗಡೆಯಾಗಿದ್ದು, ತಾಳ್ಯ ಬಳಿಯಿರುವ ಗುಡ್ಡದ ಮೇಲೆ 70 ಕೋಟಿ ರು.ವೆಚ್ಚದಲ್ಲಿ ಫಿಲ್ಟರ್‌ ಅಳವಡಿಕೆ ಕೆಲಸ ಶುರುವಾಗಿದೆ ಎಂದು ತಿಳಿಸಿದರು.

ಪ್ರತಿ ಊರಿನಲ್ಲಿ ನೀರಿನ ಟ್ಯಾಂಕ್‌ ಕಟ್ಟಲು ಹಣ ನೀಡಲಾಗಿದೆ. ಪಂಡರಹಳ್ಳಿ, ಮಧುರೆ, ಬೆಂಕಿಕೆರೆಯಿಂದ ಹೈಟೆನ್‌್ಷನ್‌ ಲೈನ್‌ ತಂದು 30 ಮೆ.ವಾ ವಿದ್ಯುತ್‌ ಇದ್ದುದನ್ನು 70 ಮೆ.ವಾ ಗೆ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಕರೆಂಟ್‌ ಸಮಸ್ಯೆ ಇಲ್ಲದಂತಾಗುತ್ತದೆ. ಎರಡುವರೆ ಕೋಟಿ ರು.ವೆಚ್ಚದಲ್ಲಿ ದೊಡ್ಡ ಡ್ಯಾಂ ಕಟ್ಟಿರುವುದರಿಂದ ಕಾಟಯ್ಯನಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಹೊಳಲ್ಕೆರೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಭದ್ರಾಪ್ರಾಜೆಕ್ಟ್ನಿಂದ ಪೈಪ್‌ಲೈನ್‌ ಹಾಕಿಸುತ್ತೇನೆ ಎಂದರು.

ಬ್ರಿಟಿಷರ ಕಾಲದ ಹಳೆ ಶಾಲಾ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಕ್ಷೇತ್ರದಲ್ಲಿ ಜನರು ಯಾವುದೇ ತೊಂದರೆಯಿಲ್ಲದೆ ನೆಮ್ಮದಿಯಿಂದ ಇರಬೇಕೆನ್ನುವುದು ನನ್ನ ಉದ್ದೇಶ. ಹಾಗಾಗಿ ದಿನದ 24 ಗಂಟೆಯೂ ್ಮ ಸೇವೆಗೆ ಸಿದ್ದ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್‌.ರತ್ನಮ್ಮ, ಸದಸ್ಯರುಗಳಾದ ತಿಪ್ಪೇರುದ್ರಮ್ಮ, ಆನಂದಪ್ಪ, ಗುರುಸ್ವಾಮಿ, ಕುಬೇರಪ್ಪ, ಪವಿತ್ರ ಅಜ್ಜಯ್ಯ, ಜಗದೀಶ್‌, ಎಚ್‌.ಆನಂದಪ್ಪ, ನಾಗರಾಜ್‌, ಸಿ.ವಿ.ಶಶಿಧರ್‌, ಪ್ರಥಮ ದರ್ಜೆ ಗುತ್ತಿಗೆದಾರ ರಾಜಶೇಖರ್‌, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜನೋಪಯೋಗಿ ಕೆಲಸ ಮಾಡೋದು ರಾಜಕಾರಣದ ಮೂಲ ಗುರಿ; ಶಾಸಕ ಎಂ.ಚಂದ್ರಪ್ಪ