ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದ ಬಳಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬವೊಂದು ಅಪಘಾತಕ್ಕೀಡಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ (ಜು.1): ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಜೀವಹಾನಿಯಾಗಿರುವ ದುಃಖದ ಘಟನೆ ನಡೆದಿದೆ. ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬದ ಮೇಲೆ ಸಂಭವಿಸಿದ ಈ ದುರ್ಘಟನೆ ತೀವ್ರ ಆಘಾತ ತಂದಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಘಟನೆ ವಿವರ:
ದೊಡ್ಡಬಳ್ಳಾಪುರ–ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಮೇಶ್ವರ ಬೆಟ್ಟದ ದೇವಾಲಯಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ರಸ್ತೆಪಕ್ಕದಲ್ಲಿದ್ದ ಅಡ್ಡವಸ್ತುವಿಗೆ ಡಿಕ್ಕಿಯಾಗಿ ಪಲ್ಟಿಯಾಗಿ ಭೀಕರ ಅವಘಡ ಸಂಭವಿಸಿದೆ. ಕಾರಿನಲ್ಲಿ ಒಟ್ಟು 8 ಜನರು ಪ್ರಯಾಣಿಸುತ್ತಿದ್ದರು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ರಸ್ತೆ ಬದಿಯ ಜಮೀನಿಗೆ ಹೋಗಿ ಬಿದ್ದಿದೆ. ಇದರ ಪರಿಣಾಮವಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿದ್ದು, ಇನ್ನು ಒಂದು ವ್ಯಕ್ತಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರ ವಿವರ:
- ಕಾಳಪ್ಪ (65)
- ಡಿ.ಎಂ. ಈಶ್ವರಪ್ಪ (70)
- ಗೋಪಿ (50)
- ಮೂರ್ತಿ (50) – ಡ್ರೈವರ್
- ಪುರುಷೋತ್ತಮ್ (65)
ಈ ಎಲ್ಲರೂ ದೊಡ್ಡಬಳ್ಳಾಪುರದ ದೇವರಾಜನಗರ ಹಾಗೂ ಕರೇನಹಳ್ಳಿ ಪ್ರದೇಶದ ನಿವಾಸಿಗಳಾಗಿದ್ದರು.
ಗಂಭೀರ ಗಾಯಗೊಂಡವರು: ಶ್ರೀನಿವಾಸ್ ಹಾಗೂ ನಾರಾಯಣ ಇವರಿಬ್ಬರನ್ನು ತೀವ್ರ ಗಾಯಗಳೊಂದಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಾಣಾಪಾಯದಿಂದ ಉಳಿಸಲು ಹರಸಾಹಸಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಹೆದ್ದಾರಿಯ ಮೇಲೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತು.
ಪೊಲೀಸರ ತನಿಖೆ ಪ್ರಾರಂಭ: ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ.
