ಫೆ. 24ರಂದು ಮೀನುಗಾರಿಕೆ ಬಂದ್
24ರಂದು ಜಿಲ್ಲಾದ್ಯಂತ ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ| ಕೇರಳದ ಕಾಸರಕೋಡದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧ| ತೀವ್ರ ವಿರೋಧದ ನಡುವೆಯೂ, ಹೈದರಾಬಾದ್ ಮೂಲದ ಖಾಸಗಿ ಕಂಪನಿಗೆ ನೀಡಿದ ಬಂದರು ನಿರ್ಮಾಣ ಕಾಮಗಾರಿ|
ಹೊನ್ನಾವರ(ಫೆ.22): ತಾಲೂಕಿನ ಕಾಸರಕೋಡ ಟೊಂಕದಲ್ಲಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ವಾಣಿಜ್ಯ ಬಂದರು ನಿರ್ಮಾಣ ಆಗುತ್ತಿರುವುದನ್ನು ವಿರೋಧಿಸಿ ಫೆ. 24ರಂದು ಉಕ ಮೀನುಗಾರರು ಜಿಲ್ಲೆಯಾದ್ಯಂತ ಮೀನುಗಾರಿಕೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದಾರೆ.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಜಂಟಿ ಕಾರ್ಯದರ್ಶಿ ಅಜೀತ ತಾಂಡೇಲ್ ಪತ್ರಿಕಾ ಪ್ರಕಟಣೆ ನೀಡಿ, ಅಂದು ಬೆಳಗ್ಗೆ 10 ಗಂಟೆಗೆ ಹೊನ್ನಾವರದಲ್ಲಿ ಪ್ರತಿಭಟನೆ ನಡೆಯಲಿದೆ. ಬಳಿಕ ಇಡೀ ದಿನ ಮೀನುಗಾರಿಗೆ ಸ್ಥಗಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಭಿವೃದ್ಧಿಯ ನೆಪದಲ್ಲಿ ಸ್ಥಳೀಯ ಪರಿಸರಕ್ಕೆ, ಜನರ ಆರೋಗ್ಯಕ್ಕೆ, ಮೀನುಗಾರಿಕೆಗೆ, ಮೀನುಗಾರರ ವೃತ್ತಿ ಬದುಕಿಗೆ, ಮೀನಿನ ಸಂತತಿ ಮತ್ತು ಜೀವವೈವಿಧ್ಯತೆಗೆ ಮಾರಕವಾಗಬಲ್ಲ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ನಮ್ಮ ಸಂಘಟನೆಯ ರಾಜ್ಯ ಪದಾಧಿಕಾರಿಗಳ ನಿಯೋಗವು ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನು ಭೇಟಿ ಮಾಡಿ ಸರ್ಕಾರದ ಗಮನ ಸೆಳೆದಿದೆ. ಸ್ಥಳೀಯ ಹೋರಾಟ ಸಮಿತಿಯು ತಾಲೂಕು/ಜಿಲ್ಲಾ ಆಡಳಿತದ ಮೂಲಕ ಮತ್ತು ಜನಪ್ರತಿನಿಧಿಗಳ ಮೂಲಕವೂ ಸಹ ಸಾಕಷ್ಟುಬಾರಿ ಸರ್ಕಾರದ ಗಮನ ಸೆಳೆದಿದೆ. ಆದರೂ ಸರ್ಕಾರ ಈವರೆಗೆ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತೀವ್ರ ವಿರೋಧದ ನಡುವೆಯೂ, ಹೈದರಾಬಾದ್ ಮೂಲದ ಖಾಸಗಿ ಕಂಪನಿಗೆ ಬಂದರು ನಿರ್ಮಾಣ ಕಾಮಗಾರಿ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಉತ್ತರ ಕನ್ನಡಕ್ಕೆ ಮತ್ತೆ ವಕ್ಕರಿಸಿ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!
ಇತ್ತೀಚೆಗೆ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಚೌಧರಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ಬಂದರು ನಿರ್ಮಾಣ ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮೀನಮೇಷ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವಲ್ಲಿನ ಜನಪ್ರತಿನಿಧಿಗಳ ವೈಫಲ್ಯವೇ ಸ್ಥಳೀಯರನ್ನು ಹೋರಾಟಕ್ಕೆ ಇಳಿಯುವಂತೆ ಮಾಡಿದೆ ಎಂದಿದ್ದಾರೆ.
ಮೀನುಗಾರರ ವೃತ್ತಿಯೇ ತ್ಯಾಗ, ಧೈರ್ಯದ ಪ್ರತೀಕವಾದದ್ದು. ಅವರ ಸಹನೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ರೀತಿಯ ಪ್ರಯತ್ನವನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ 24ರಂದು ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಯನ್ನು ಬಂದ್ ಮಾಡಿ ಹೊನ್ನಾವರದಲ್ಲಿ ಆಯೋಜಿಸಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದೇವೆ. ಬಂದರು ಯೋಜನೆಯನ್ನು ಸರ್ಕಾರ ಕೈಬಿಡುವ ವರೆಗೂ ಸ್ಥಳೀಯರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ನಮ್ಮ ಸಂಘಟನೆ ಬಂದಿದೆ. ಅಗತ್ಯ ಬಿದ್ದರೆ ಈ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಿ ಹೋರಾಟ ಸಮಿತಿಗೆ ಬೆಂಬಲವಾಗಿ ನಿಲ್ಲುತ್ತೇವೆ. 24ರ ಪ್ರತಿಭಟನೆಯಲ್ಲಿ ನಮ್ಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಯು.ಆರ್. ಸಭಾಪತಿ, ರಾಜ್ಯ ಸಂಘಟನೆಯ ಅಧ್ಯಕ್ಷರು, ಕಾರ್ಯಾಧ್ಯಕ್ಷರೂ ಸಹಿತ ನಾವೆಲ್ಲರೂ ಪಾಲ್ಗೊಳ್ಳುವದಾಗಿ ತಿಳಿಸಿದ್ದಾರೆ.