ಉತ್ತರ ಕನ್ನಡ: ಮೀನುಗಾರಿಕೆಗೆ ಕಾರ್ಮಿಕರ ಸಮಸ್ಯೆ, ಪರಿಹಾರ ನೀಡಲು ಸರ್ಕಾರಕ್ಕೆ ಮನವಿ

ಮೀನುಗಾರಿಕೆಗೆ ತೆರಳಲು ಬೋಟುಗಳ ಮಾಲೀಕರು ಸಾಲ ಮಾಡಿ ಬೋಟು, ಬಲೆಗಳ ರಿಪೇರಿ ಮಾಡಿಕೊಂಡಿರುತ್ತಾರೆ. ಇದೀಗ ಕಾರ್ಮಿಕರು ಆಗಮಿಸದಿರುವುದರಿಂದ ಬಂದರಿನಲ್ಲೇ ಬೋಟುಗಳನ್ನ ನಿಲ್ಲಿಸುವಂತಾಗಿದ್ದು, ಮೀನುಗಾರರು ನಷ್ಟ ಅನುಭವಿಸಬೇಕಿದೆ. 

Fishermen Request to the Government for Compensation in Uttara Kannada grg

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಆ.12): ಪ್ರತಿ ವರ್ಷ ಮಳೆಗಾಲದ 2 ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಅವಧಿ ಮುಗಿಯುತ್ತಿದ್ದಂತೇ ಆಳ ಸಮುದ್ರದತ್ತ ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ಬೋಟುಗಳು ಈ ಬಾರಿ ಮೀನುಗಾರಿಕೆ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. 

ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲಿ ಟ್ರಾಲರ್ ಹಾಗೂ ಪರ್ಸೀನ್ ಸೇರಿ ಸುಮಾರು 150ಕ್ಕೂ ಅಧಿಕ ಬೋಟುಗಳಿಗೆ ಓರಿಸ್ಸಾ, ಉತ್ತರಪ್ರದೇಶ, ಜಾರ್ಖಂಡ್ ಸೇರಿದಂತೆ ಉತ್ತರ ಭಾರತದಿಂದ ಕಾರ್ಮಿಕರು ಆಗಮಿಸುತ್ತಿದ್ದರು. ಜೂನ್, ಜುಲೈ ತಿಂಗಳಲ್ಲಿ ಮೀನುಗಾರಿಕೆ ನಿಷೇಧದ ವೇಳೆ ಊರಿಗೆ ತೆರಳುವ ಕಾರ್ಮಿಕರು ಮೀನುಗಾರಿಕೆ ಆರಂಭಕ್ಕೆ ಮುನ್ನ ಕೆಲಸಕ್ಕೆ ವಾಪಸ್ಸಾಗುತ್ತಿದ್ದರು. ಆದರೆ, ಈ ಬಾರಿ ಅಗಸ್ಟ್ ಪ್ರಾರಂಭವಾದರೂ ಓರಿಸ್ಸಾ ಭಾಗದ ಸಾಕಷ್ಟು ಕಾರ್ಮಿಕರು ಕೆಲಸಕ್ಕೆ ಆಗಮಿಸಿಲ್ಲ. ಇದರಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟುಗಳು ಕಾರ್ಮಿಕರೇ ಇಲ್ಲದೇ ಬಂದರಿನಲ್ಲೇ ನಿಂತುಕೊಳ್ಳುವಂತಾಗಿದೆ. 

ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಆಕಾಂಕ್ಷಿಗಳ‌ ಪಟ್ಟಿ ಆರಂಭ, ಮತ್ತೆ ಕಮಲ ಅರಳಿಸಲು ಪ್ಲಾನ್‌..!

ಇನ್ನು ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ 10 ರಿಂದ 35 ಮಂದಿ ಕಾರ್ಮಿಕರ ಅವಶ್ಯಕತೆ ಇರುತ್ತದೆ. ಅದರಲ್ಲೂ ಟ್ರಾಲ್ ಬೋಟುಗಳು ವಾರಗಳ ಕಾಲ ಸಮುದ್ರದಲ್ಲೇ ಮೀನುಗಾರಿಕೆ ನಡೆಸಿಕೊಂಡು ದೂರದವರೆಗೆ ತೆರಳುವುದರಿಂದ ಬಲೆ ಹಾಕಲು ಮತ್ತು ಮೀನುಗಳು ಬಿದ್ದಾಗ ಬಲೆಗಳನ್ನು ಮೇಲಕ್ಕೆತ್ತಲು ಹೆಚ್ಚಿನ ಕಾರ್ಮಿಕರು ಇರಲೇಬೇಕಾಗುತ್ತದೆ. ಹೀಗಾಗಿ ಕಾರ್ಮಿಕರಿಲ್ಲದೇ ಮೀನುಗಾರಿಕೆ ನಡೆಸುವುದು ಸಾಧ್ಯವಿಲ್ಲದ್ದರಿಂದ ಬಹುತೇಕ ಬೋಟುಗಳು ಮೀನುಗಾರಿಕೆಗೆ ತೆರಳಿಲ್ಲ. 

ಮೀನುಗಾರಿಕೆಗೆ ತೆರಳಲು ಬೋಟುಗಳ ಮಾಲೀಕರು ಸಾಲ ಮಾಡಿ ಬೋಟು, ಬಲೆಗಳ ರಿಪೇರಿ ಮಾಡಿಕೊಂಡಿರುತ್ತಾರೆ. ಇದೀಗ ಕಾರ್ಮಿಕರು ಆಗಮಿಸದಿರುವುದರಿಂದ ಬಂದರಿನಲ್ಲೇ ಬೋಟುಗಳನ್ನ ನಿಲ್ಲಿಸುವಂತಾಗಿದ್ದು, ಮೀನುಗಾರರು ನಷ್ಟ ಅನುಭವಿಸಬೇಕಿದೆ. ಸರ್ಕಾರ ರೈತರಿಗೆ ಸಂಕಷ್ಟದಲ್ಲಿ ಪರಿಹಾರ ನೀಡುವಂತೆ ಮೀನುಗಾರಿಕೆ ನಂಬಿಕೊಂಡವರಿಗೂ ನೆರವು ನೀಡಿದಲ್ಲಿ ಕೊಂಚ ಅನುಕೂಲವಾಗಲಿದೆ ಅನ್ನೋದು ಮೀನುಗಾರರ ಅಭಿಪ್ರಾಯ.

Latest Videos
Follow Us:
Download App:
  • android
  • ios