Uttara Kannada: ಕಾರವಾರದಲ್ಲಿ ಗಮನ ಸೆಳೆದ ಮೀನು ಹಿಡಿಯುವ ಸ್ಪರ್ಧೆ
* ಸ್ಪರ್ಧೆ ಭಾಗವಹಿಸಿದ್ದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು
* ಯುವ ಮೀನುಗಾರರ ಸಂಘರ್ಷ ಸಮಿತಿಯಿಂದ ಸ್ಪರ್ಧೆ ಆಯೋಜನೆ
* ಖುದ್ದು ಗಾಳ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಿಸಿ ಮುಗಿಲನ್
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಏ.19): ಕೆರೆಯಲ್ಲಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸುವುದು ಸಾಮಾನ್ಯ. ಬಲೆ, ಕೂಣಿ ಮೂಲಕ ಕೆರೆಯಲ್ಲಿ ಬೆಳೆಸಲಾದ ಮೀನುಗಳನ್ನು ಬೇಟೆಯಾಡಲಾಗುತ್ತದೆ. ಆದ್ರೆ, ಇಲ್ಲೊಂದು ಕಡೆ ಇದೇ ಮೊದಲ ಬಾರಿಗೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಸ್ಪರ್ಧಾಳುಗಳು ತಮ್ಮದೇ ಶೈಲಿಯಲ್ಲಿ ಗಾಳ ಹಾಕುವ ಕಲೆಯನ್ನ ಪ್ರದರ್ಶಿಸಿದರು.
ಉತ್ತರ ಕನ್ನಡ(Uttara Kananda) ಜಿಲ್ಲೆಯ ಕಾರವಾರದ(Karwar) ಬೈತ್‌ಖೋಲಾದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೈತ್‌ಖೋಲಾದ ಮೀನುಗಾರಿಕಾ ಬಂದರು ಪ್ರದೇಶದಲ್ಲಿರುವ ಅಲೆತಡೆಗೋಡೆ ಬಳಿ ಯುವ ಮೀನುಗಾರರ ಸಂಘರ್ಷ ಸಮಿತಿ ಈ ಸ್ಪರ್ಧೆಯನ್ನ ಆಯೋಜಿಸಿತ್ತು.
'ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರ ಸ್ಪರ್ಧೆ'
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಖುದ್ದು ಗಾಳ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಆಧುನಿಕ ಮಾದರಿಯ ಆ್ಯಂಗ್ಲಿಂಗ್ ಹಾಗೂ ಸಾಂಪ್ರದಾಯಿಕ ಮಾದರಿಯ ಕೈಗಾಳ ಹಾಕುವ ವಿಧಾನದಲ್ಲೂ ಸಹ ಜಿಲ್ಲಾಧಿಕಾರಿ ಗಾಳ ಹಾಕಿ ಮೀನು ಹಿಡಿಯಲು ಯತ್ನಿಸಿದರು. ಗಾಳ ಹಾಕುವುದು ಸಾಂಪ್ರದಾಯಿಕವಾಗಿ ಮೀನು ಹಿಡಿಯುವ ಒಂದು ಪದ್ದತಿಯಾಗಿದ್ದು ಸಾಕಷ್ಟು ಮಂದಿ ಇದನ್ನು ಹವ್ಯಾಸವಾಗಿಯೂ ಮಾಡಿಕೊಂಡು ಬರುತ್ತಾರೆ. ಹೀಗಾಗಿ ಈ ಗಾಳ ಹಾಕುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಸ್ಪರ್ಧೆ ಆಯೋಜಿಸಿರುವುದು ಒಂದು ಹೊಸ ಪ್ರಯತ್ನವಾಗಿದೆ. ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಸಹ ಇದರಲ್ಲಿ ಪಾಲ್ಗೊಳ್ಳುವಂತಾಗಲೀ ಎಂದು ಜಿಲ್ಲಾಧಿಕಾರಿ ಶುಭ ಕೋರಿದರು. ಅಲ್ಲದೇ, ಮುಂದಿನ ಬಾರಿ ಜಿಲ್ಲಾಡಳಿತವೂ ಸಹಾಯ ಮಾಡುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ವಿಡಿಯೋ ಕಾಲ್‌ನಲ್ಲಿ ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..!
ಇನ್ನು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಗೆ(Fish Catching Competition) ಉತ್ತರ ಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೇ ಹುಬ್ಬಳ್ಳಿ(Hubballi) ಸೇರಿ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ರೇಡಿಯಂ ಹಾಗೂ ಕೈ ಗಾಳ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೆಲವರು ಸಣ್ಣಪುಟ್ಟ ಮೀನುಗಳನ್ನು ಹಿಡಿದು ಖುಷಿ ಪಟ್ರೆ, ಇನ್ನೂ ಕೆಲವರು ಸುಮಾರು 2 ಕೆ.ಜಿಗೂ ಹೆಚ್ಚು ತೂಕದ ಬೃಹತ್ ಮೀನುಗಳನ್ನು(Fish) ಹಿಡಿಯುವಲ್ಲಿ ಸಫಲರಾದರು. ಸ್ಪರ್ಧೆಯಲ್ಲಿ ಅತೀ ಹೆಚ್ಚು ಮೀನು ಹಿಡಿದವರನ್ನು ವಿಜೇತರೆಂದು ಘೋಷಣೆ ಮಾಡಲಾಯಿತು. ಹೆಚ್ಚು ತೂಕದ ಮೀನು ಹಿಡಿದವರಿಗೂ ಪ್ರತ್ಯೇಕ ಪ್ರಶಸ್ತಿಯನ್ನು ನೀಡಲಾಯಿತು. ಇತ್ತೀಚೆಗೆ ಗಾಳ ಹಾಕಿ ಮೀನು ಹಿಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವೇ ಕೆಲವು ಮಂದಿ ಮಾತ್ರ ಹವ್ಯಾಸಕ್ಕಾಗಿ ಗಾಳದಲ್ಲಿ ಮೀನು ಹಿಡಿಯುತ್ತಾರೆ. ಆದರೆ, ಈ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಸ್ಪರ್ಧೆಯಿಂದ ನಿಜಕ್ಕೂ ಖುಷಿಯಾಗಿದೆ. ಎಲ್ಲೋ ಮೊಬೈಲ್ ಹಿಡಿದು ಕಾಲ ಹರಣ ಮಾಡುತ್ತಿದ್ದ ನಮಗೆ ಈ ರೀತಿ ಗಾಳ ಹಾಕಿ ಮೀನು ಹಿಡಿಯಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಅಂತಾರೇ ಸ್ಪರ್ಧಾಳುಗಳು.
ಒಟ್ಟಿನಲ್ಲಿ ವಿವಿಧ ರೀತಿಯಲ್ಲಿ ಕಾಲಹರಣ ಮಾಡುತ್ತಿದ್ದ ಯುವಜನರಿಗಾಗಿ ಗಾಳ ಹಾಕಿ ಮೀನು ಹಿಡಿಯುವ ವಿಭಿನ್ನ ಸ್ಪರ್ಧೆ ಆಯೋಜನೆ ಮಾಡಿರುವುದು ಎಲ್ಲರ ಗಮನ ಸೆಳೆದಿದ್ದಂತೂ ಸತ್ಯ. ಸ್ಪರ್ಧಾಳುಗಳ ಪೈಕಿ ಒಂದಷ್ಟು ಮಂದಿ ಹೆಚ್ಚು ಮೀನು ಹಿಡಿದು ಖುಷಿ ಪಟ್ರೆ, ಇನ್ನೂ ಕೆಲವರು ಉತ್ತಮ ರೀತಿಯಲ್ಲಿ ಬೀಚ್(Beach) ಬಳಿ ಟೈಂ ಪಾಸ್ ಮಾಡಿ ಸಮಯ ಕಳೆದಿದ್ದಾರೆ.