Asianet Suvarna News Asianet Suvarna News

ಯಕ್ಷಗಾನದ ಪ್ರಥಮ ಪಠ್ಯ ಪುಸ್ತಕ ಮಾರುಕಟ್ಟೆಗೆ..!

ಕರಾವಳಿಯ ಗಂಡು ಕಲೆ ಯಕ್ಷಗಾನದ ಕುರಿತಾದ ಪಠದಯಪುಸ್ತಕ ಇದೇ ಮೊದಲಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಪಠ್ಯಪುಸ್ತಕದ ಆಧಾರದಲ್ಲಿ ಖಾಸಗಿಯಾಗಿ ಗುರುಮುಖೇನ ಯಕ್ಷಗಾನ ಮುಮ್ಮೇಳ ಕಲಿಯಬಹುದು. ನಂತರ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್‌ ಪರೀಕ್ಷೆ ಬರೆದು ಸರ್ಟಿಫಿಕೇಟ್‌ ಪಡೆದುಕೊಳ್ಳಬಹುದಾಗಿದೆ.

first Textbook about yakshagana released to market
Author
Bangalore, First Published Sep 29, 2019, 9:50 AM IST

ಮಂಗಳೂರು(ಸೆ. 29): ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಮಹತ್ವಾಕಾಂಕ್ಷಿ ‘ಯಕ್ಷ ಶಿಕ್ಷಣ’ ಯೋಜನೆಯಡಿ ಕರಾವಳಿ ಯಕ್ಷಗಾನ ಚರಿತ್ರೆಯ ಪ್ರಥಮ ಯಕ್ಷಗಾನ ಪಠ್ಯಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ ಎಂದು ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಡಾ.ಸುಂದರ ಕೇನಾಜೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಪಠ್ಯಪುಸ್ತಕದ ಆಧಾರದಲ್ಲಿ ಖಾಸಗಿಯಾಗಿ ಗುರುಮುಖೇನ ಯಕ್ಷಗಾನ ಮುಮ್ಮೇಳ ಕಲಿಯಬಹುದು. ನಂತರ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್‌ ಪರೀಕ್ಷೆ ಬರೆದು ಸರ್ಟಿಫಿಕೇಟ್‌ ಪಡೆದುಕೊಳ್ಳಬಹುದು ಎಂದವರು ತಿಳಿಸಿದ್ದಾರೆ.

ಮೂಲ್ಕಿ ಬಪ್ಪನಾಡು ದೇವಳಕ್ಕೆ ಸಚಿವ ಶ್ರೀರಾಮುಲು ಭೇಟಿ

ಜೂನಿಯರ್‌ ಪರೀಕ್ಷೆ ಬರೆಯಲು ಕನಿಷ್ಠ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಸೀನಿಯರ್‌ ಪಠ್ಯ ಆ ಹೊತ್ತಿಗೆ ಮುದ್ರಣಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಕೂಡ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ನಂತರ ವಿದ್ವತ್‌ ಎರಡು ಹಂತಗಳಲ್ಲಿ ನಡೆಯಲಿದೆ. ಇದಕ್ಕೆ ಪಠ್ಯವಸ್ತುವಿನಿಂದ ಹಿಡಿದು ಪುಸ್ತಕ ರಚನೆ ಹಾಗೂ ಇತರ ಕಾರ್ಯಗಳು ನಡೆಯಬೇಕಾಗಿದೆ ಎಂದು ಡಾ. ಕೇನಾಜೆ ತಿಳಿಸಿದ್ದಾರೆ.

ಮಾರುಕಟ್ಟೆಗೆ ಬಂದಿರುವ ಪ್ರಾಥಮಿಕ ವಿಭಾಗದ ಈ ಪಠ್ಯಪುಸ್ತಕ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದ ಕಲಿಕಾ ವಿಷಯಗಳನ್ನು ಒಳಗೊಂಡಿದೆ. ಒಟ್ಟು ನಾಲ್ಕು ಪ್ರಮುಖ ಅಧ್ಯಾಯಗಳಲ್ಲಿ ಮತ್ತೆ ಘಟಕಗಳನ್ನು ವಿಭಾಗಿಸಿ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ರೂಪಿಸಲಾಗಿದೆ. ತೆಂಕು ಮತ್ತು ಬಡಗಿನ ಸಮಾನ ಅಂಶಗಳನ್ನು ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪ್ರತ್ಯೇಕ ಘಟಕಗಳಲ್ಲಿ ವಿವರಣೆ ನೀಡಲಾಗಿದೆ. ಅಧ್ಯಾಯ ಒಂದರಲ್ಲಿ ಯಕ್ಷಗಾನದ ಸ್ವರೂಪಕ್ಕೆ ಸಂಬಂಧಿಸಿದಂತೆ ಯಕ್ಷಗಾನದ ಪರಿಚಯ, ಅದರ ಅಂಗಗಳು ಮತ್ತು ಇತಿಹಾಸವನ್ನು ವಿವರಿಸಲಾಗಿದೆ. ಅಧ್ಯಾಯ ಎರಡರಲ್ಲಿ ಯಕ್ಷಗಾನದ ರಂಗಸ್ಥಳ ಹಾಗೂ ವೇಷಭೂಷಣಗಳ ಬಗ್ಗೆ ತಿಳಿಸುತ್ತಾ ಚೌಕಿ ಮತ್ತು ರಂಗಸ್ಥಳ, ಬಣ್ಣಗಾರಿಕೆ, ವೇಷಭೂಷಣಗಳ ಬಗ್ಗೆ ತಿಳಿಸಲಾಗಿದೆ ಎಂದಿದ್ದಾರೆ.

ನಮ್‌ ಕಡೆ ಮಾತ್ ಕೇಳಿದ್ರೆ ಎದೆ ಹೊಡ್ಕೋತೀರಿ: ಉಡುಪಿಯಲ್ಲಿ ಶ್ರೀರಾಮುಲು ಹಾಸ್ಯ ಚಟಾಕಿ

ಅಧ್ಯಾಯ ಮೂರರಲ್ಲಿ ಯಕ್ಷಗಾನ ಪ್ರಸಂಗಗಳು ಮತ್ತು ಅರ್ಥಗಾರಿಕೆಯ ಬಗ್ಗೆ ವಿವರಿಸಲಾಗಿದೆ. ಇಲ್ಲಿ ಮತ್ತೆ ಮೂರು ಘಟಕಗಳನ್ನು ಮಾಡಲಾಗಿದ್ದು ಯಕ್ಷಗಾನ ಪ್ರಸಂಗಗಳು, ಅರ್ಥಗಾರಿಕೆ ಮತ್ತು ಸಂಭಾಷಣೆ, ಅಭ್ಯಾಸಕ್ಕಾಗಿ ಕೆಲವು ಪ್ರಸಂಗಗಳನ್ನು ನೀಡಲಾಗಿದೆ. ಕೊನೆಯ ಹಾಗೂ ಹೆಚ್ಚು ಪ್ರಾಯೋಗಿಕ ಅಧ್ಯಾಯ ಯಕ್ಷಗಾನ ಶಿಕ್ಷಣ. ಇಲ್ಲಿ ಆರು ಘಟಕಗಳನ್ನು ರಚಿಸಲಾಗಿದೆ. ಅದರಲ್ಲಿ ಲಯ, ಕಾಲ, ತಾಳಗಳ ಪರಿಕಲ್ಪನೆ, ತೆಂಕುತಿಟ್ಟು ತಾಳಗಳು ಮತ್ತು ಹೆಜ್ಜೆಗಾರಿಕೆ, ತೆಂಕುತಿಟ್ಟಿನ ರಂಗಕ್ರಮಗಳು, ಬಡಗುತಿಟ್ಟಿನ ತಾಳಗಳು ಮತ್ತು ಹೆಜ್ಜೆಗಾರಿಕೆ, ಬಡಗುತಿಟ್ಟಿನ ರಂಗಕ್ರಮಗಳು, ಅಭಿನಯ ಮತ್ತು ರಂಗ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪಠ್ಯ ಪುಸ್ತಕಕ್ಕಾಗಿ ಆಸಕ್ತರು ಸರ್ಕಾರಿ ಮುದ್ರಣಾಲಯ ಬೆಂಗಳೂರು 080-22213474, ಮೈಸೂರು 0821-2540684, ಧಾರವಾಡ 0836-2748145 ಗೆ ಸಂಪರ್ಕಿಸಬಹುದು ಎಂದು ಡಾ.ಸುಂದರ ಕೇನಾಜೆ ವಿವರ ನೀಡಿದರು. ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್‌, ಸದಸ್ಯರಾದ ಪ್ರಕಾಶ್‌ ಮೂಡಿತ್ತಾಯ, ಸುಜಿಯಿಂದ್ರ ಹಂದೆ ಇದ್ದರು.

Follow Us:
Download App:
  • android
  • ios