ಮಂಗಳೂರು(ಅ.31):  ನಗರದ ಫಳ್ನೀರ್‌ ಬಳಿ ತಿಂಡಿ ವಿಚಾರದಲ್ಲಿ ಯುವಕರ ತಂಡವೊಂದು ಹೋಟೆಲ್‌ ಸಿಬ್ಬಂದಿ ಜತೆ ಕಿತ್ತಾಡಿಕೊಂಡು ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಹೊಟೇಲ್‌ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. 

ಫಳ್ನೀರ್‌ನ ಎಂಎಫ್‌ಸಿ ಹೊಟೇಲ್‌ ಮತ್ತು ಫಿಶ್‌ ಮಾರ್ಟ್‌ಗೆ ಸಂಜೆ ಯುವಕ ತಂಡ ಗ್ರಾಹಕರಾಗಿ ಆಗಮಿಸಿತ್ತು. ಅಲ್ಲಿ ಸಮೋಸ ಕೇಳಿದ ತಂಡದ ಇಬ್ಬರು ಹೊಟೇಲ್‌ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದರು. ಆಗ ನಡೆದ ಕಾದಾಟ ವೇಳೆ ಹೊಟೇಲ್‌ನ ಕಿಟಕಿ ಗಾಜು, ಪೀಠೋಪಕರಣ ಧ್ವಂಸಗೊಳಿಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. 

‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌..!

ಈ ವೇಳೆ ಅವರನ್ನು ಹಿಡಿಯಲೆತ್ನಿಸಿದ ಹೊಟೇಲ್‌ ಸಿಬ್ಬಂದಿ ಮೇಲೆ ಆರೋಪಿಗಳು ಎರಡು ಸುತ್ತು ಗುಂಡು ಹಾರಿಸಿದ್ದು, ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳೀಯರು ಸೇರಿ ಇಬ್ಬರು ಆರೋಪಿಗಳನ್ನು ಹಿಡಿದಿದ್ದು, ಇನ್ನಿಬ್ಬರು ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ.