ಬೆಂಗಳೂರು(ಫೆ.19): ಇತ್ತೀಚೆಗೆ ಟ್ರೀ ಪಾರ್ಕ್ ನಿರ್ಮಾಣ ಸಂಬಂಧ ವಿವಾದಕ್ಕೆ ಸಿಲುಕಿದ್ದ ತುರಹಳ್ಳಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಬನಶಂಕರಿ 6ನೇ ಹಂತದಿಂದ ಅರಣ್ಯ ಪ್ರವೇಶಿಸುವ ಭಾಗದಲ್ಲಿ ಅಗ್ನಿಯ ಜ್ವಾಲೆ ಕಾಣಿಸಿಕೊಂಡಿದ್ದು, ನಾಗರಭಾವಿಯಿಂದ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿನ ನಂದಿಸುವ ಮೂಲಕ ಹೆಚ್ಚಿನ ಹಾನಿ ತಡೆಗಟ್ಟಿದ್ದಾರೆ. 30 ಎಕರೆಯಷ್ಟು ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ಅಲ್ಲಗಳೆದಿದ್ದು, ಅತ್ಯಲ್ಪ ಹಾನಿಯಾಗಿದೆ ಅಷ್ಟೆಎಂದು ಸ್ಪಷ್ಟಪಡಿಸಿದ್ದಾರೆ.

5-6 ಸಾಲು ಬೆಂಕಿ:

ಗುರುವಾರ ರಾತ್ರಿ 7ರಿಂದ 8ರ ಸಮಯದಲ್ಲಿ ಬನಶಂಕರಿ 6ನೇ ಹಂತದಿಂದ ಅರಣ್ಯವನ್ನು ಪ್ರವೇಶಿಸುವ ಭಾಗದಲ್ಲಿ 5ರಿಂದ 6 ಸಾಲುಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದ ತಕ್ಷಣ ನಾಗರಭಾವಿಯ ಅಗ್ನಿಶಾಮಕ ದಳವು ಬೆಂಕಿ ನಂದಿಸಲು ತಕ್ಷಣವೇ ಧಾವಿಸಿದೆ. ಬೆಂಕಿ ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಮುಂಡಗೋಡ ಹೊರವಲಯದ ಅರಣ್ಯಕ್ಕೆ ಬೆಂಕಿ

ತುರಹಳ್ಳಿ ಅರಣ್ಯದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಸಿದ್ಧತೆ ನಡೆದಿತ್ತು. ಇದಕ್ಕೆ ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ಹೋರಾಟ ನಡೆಸಿದ್ದರು. ಇದಕ್ಕೆ ತಲೆಬಾಗಿದ ಸರ್ಕಾರ ಟ್ರೀ ಪಾಕ್‌ ನಿರ್ಮಾಣ ಕಾರ್ಯಕ್ಕೆ ತಾತ್ಕಾಲಿಕ ತಡೆ ನೀಡಿತ್ತು. ಇದಾದ ಬೆನ್ನಲ್ಲೇ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.