ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ; ಕೂಡಲೇ ನಂದಿಸಿದ ಸಿಬ್ಬಂದಿ
ಕಾರವಾರದ ನೌಕನೆಲೆಯಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಮುಂಬೈಗೆ ತೆರಳುತ್ತಿದ್ದ ವೇಳೆ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೌಕಾ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ
ಕಾರವಾರ (ಜು.21): ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ಮುಂಬೈ ಕಡೆ ತೆರಳುತ್ತಿದ್ದ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಯುದ್ಧ ನೌಕೆಯಲ್ಲಿರುವ ಅಗ್ನಿನಿರೋಧಕ ವಸ್ತುಗಳನ್ನು ಬಳಸಿ ನೌಕಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕ್ಯಾಪ್ಟನ್ ಸುಶೀಲ್ ಮೆನನ್ ವಿಕ್ರಮಾದಿತ್ಯದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಿಂಗಳಿನಿಂದ ಕಾರವಾರದ ಕದಂಬ ನೌಕಾನೆಲೆಯಲ್ಲಿ ಹಡಗಿನ ದುರಸ್ತಿ ಕಾರ್ಯ ಸಹ ನಡೆಸಲಾಗಿತ್ತು.
ಇತಿಹಾಸ ಬರೆದ ತೇಜಸ್: ವಿಕ್ರಮಾದಿತ್ಯ ನೌಕೆ ಮೇಲೆ ಯಶಸ್ವಿ ಲ್ಯಾಂಡಿಂಗ್!
ಇದಾದ ಬಳಿಕ ನಿನ್ನೆ ಕಾರವಾರದ ಕದಂಬ ನೌಕಾನೆಲೆಯಿಂದ ಮುಂಬೈಗೆ ಹೋಗುವ ಮಾರ್ಗದ ಆಳ ಸಮುದ್ರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ವೇಳೆ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಗಿದೆ. ಈ ಹಿಂದೆ ಯುದ್ಧನೌಕೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದರು. ಈ ಪ್ರಕರಣದ ಮೂರು ವರ್ಷದ ಬಳಿಕ ಇದೀಗ ಮತ್ತೆ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಿಕ್ರಮಾದಿತ್ಯ ನೌಕೆಯಲ್ಲೇ ರಾತ್ರಿ ಕಳೆದ ರಾಜ್‌ನಾಥ್
ಯುದ್ಧ ನೌಕೆಯಲ್ಲಿ ಬೆಂಕಿ, ಯಾರಿಗೂ ಅಪಾಯ ಇಲ್ಲ: ವಿಮಾನ ವಾಹಕ ದೇಶದ ಅತಿದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಹುಟ್ಟಿಸಿತು. ಐಎನ್‌ಎಸ್ ಕದಂಬ ನೌಕಾನೆಲೆಯ ಬಳಿ ಕಡಲಿನಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಸಿಬ್ಬಂದಿ ಯುದ್ಧ ನೌಕೆಯಲ್ಲಿನ ಉಪಕರಣಗಳನ್ನು ಬಳಸಿಕೊಂಡು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ಈ ಬಗ್ಗೆ ನೌಕಾಪಡೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಪ್ರಯೋಗಾರ್ಥ ಕಾರ್ಯಾಚರಣೆ ನಡೆಸುವ ವೇಳೆ ಅವಘಡ: ದುರಸ್ತಿ ಕಾರ್ಯ ಪೂರ್ಣಗೊಳಿಸಿ ಬುಧವಾರ ಸಮುದ್ರಲ್ಲಿ ಪ್ರಯೋಗಾರ್ಥ ಕಾರ್ಯಾಚರಣೆಗಳನ್ನು ನಡೆಸುವ ವೇಳೆ ಇದ್ದಕ್ಕಿದ್ದಂತೆ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ನೌಕಾ ಸಿಬ್ಬಂದಿ ಆತಂಕಿತರಾದ್ರೂ ಯುದ್ಧನೌಕೆಯಲ್ಲಿ ಅಳವಡಿಸಲಾದ ಅಗ್ನಿ ನಿರೋಧಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ಸೂಕ್ತ ತನಿಖೆಗೆ ಆದೇಶ: ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದರ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ವಿಕ್ರಮಾದಿತ್ಯ ಇನ್ನೂ ಆಳ ಸಮುದ್ರದಲ್ಲಿದ್ದು, ಇಂದು ಕಾರವಾರದ ಸೀಬರ್ಡ್ ನೌಕಾನೆಲೆಯ ಜೆಟ್ಟಿಗೆ ಬರಲಿದೆ. 47,000 ಟನ್ ತೂಕದ ಐಎನ್ಎಸ್ ವಿಕ್ರಮಾದಿತ್ಯವನ್ನು ಕ್ಯಾಪ್ಟನ್ ಸುಶೀಲ್ ಮೆನನ್ ಮುನ್ನಡೆಸುತ್ತಿದ್ದರು. ಈ ಹಿಂದೆ 2019ರಲ್ಲಿ ಕೂಡ ಇಂಥದ್ದೇ ಘಟನೆ ನಡೆದು ಓರ್ವ ನೌಕಾ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಬಳಿಕ 2021ರಲ್ಲೂ ಇದೇ ಘಟನೆ ಮರುಕಳಿಸಿತ್ತು. ಆದರೆ, ಯಾವುದೇ ಸಾವು ನೋವುಗಳು ವರದಿಯಾಗಿರಲಿಲ್ಲ. ಈ ಎರಡೂ ಪ್ರಕರಣವನ್ನು ಅಂದು ಕೂಡಾ ನೌಕಾಪಡೆ ತನಿಖೆಗೆ ಆದೇಶಿಸಿತ್ತು. ಇದೀಗ ಮತ್ತೆ ಅಂತದ್ದೇ ಘಟನೆ ಮರುಕಳಿಸಿರುವುದು ಆತಂಕಕಾರಿಯಾಗಿದೆ. ವಿಕ್ರಮಾದಿತ್ಯದ ನಿರ್ವಹಣೆ- ದುರಸ್ತಿ ಕಾರ್ಯಕ್ಕೆ ಪ್ರತಿವರ್ಷವೂ ಸಾಕಷ್ಟು ಹಣವನ್ನು ಇಲಾಖೆ ವ್ಯಯಿಸುತ್ತಿದೆ. ಹೀಗಾಗಿ ಸ್ವದೇಶಿ ನಿರ್ಮಿತ, ಎರಡನೇ ಯುದ್ಧವಿಮಾನ ವಾಹಕ ನೌಕೆ, 40,000 ಟನ್ ಭಾರದ ಐಎನ್‌ಎಸ್ ವಿಕ್ರಾಂತ್ ಮೇಲೆ ಸದ್ಯ ಎಲ್ಲರ ದೃಷ್ಟಿ ನೆಟ್ಟಿದ್ದು, ಆಗಸ್ಟ್ ಒಳಗೇ ಕಾರ್ಯಾಚರಣೆಗೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.