ನವದೆಹಲಿ(ಜ.11): ಭಾರತೀಯ ನೌಕಾಪಡೆಯ ತೇಜಸ್ ಲಘು ಯುದ್ಧ ವಿಮಾನ ಹೊಸ ಇತಿಹಾಸ ನಿರ್ಮಿಸಿದ್ದು,  ಇದೇ ಮೊದಲ ಬಾರಿಗೆ ವಿಕ್ರಮಾದಿತ್ಯ ನೌಕೆ ಮೇಲೆ ಯಶಸ್ವಿಯಾಗಿ ಇಳಿದಿದೆ.

ಡೆಕ್ ಆಧಾರಿತ ಫೈಟರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆ ಮಾಡಲಾಗಿದ್ದು, ಇದು ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಮಹತ್ವದ ಸಾಧನೆ ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ಡೆಕ್ ಆಧಾರಿತ ಅವಳಿ ಎಂಜಿನ್ ಫೈಟರ್‌ಗಳನ್ನು ಅಭಿವೃದ್ಧಿಪಡಿಸಲು ಈ ಸಾಧನೆ ಮುನ್ನುಡಿ ಬರೆದಂತಾಗಿದೆ.

ಈ ಕುರಿತು ಮಾಹಿತಿ ನೀಡಿರುವ ನೌಕಾಪಡೆಯ ವಕ್ತಾರ, ವಿಕ್ರಮಾದಿತ್ಯ ನೌಕೆ ಮೇಲೆ ತೇಜಸ್ ಲಘು ಯುದ್ಧ ವಿಮಾನ ಯಶಸ್ವಿಯಾಗಿ ಇಳಿದಿದೆ ಎಂದು ತಿಳಿಸಿದ್ದಾರೆ.

ಸಂಪೂರ್ಣವಾಗಿ ದೇಶೀಯ ನಿರ್ಮಿತವಾಗಿರುವ ತೇಜಸ್ ಲಘು ಯುದ್ಧ ವಿಮಾನ, ಇತ್ತೀಚಿಗಷ್ಟೇ ಯುದ್ಧ ಹಡಗುಗಳ ಮೇಲೆ ಯಶಶ್ವಿಯಾಗಿ ಇಳಿಯುವ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿತ್ತು.