ತುಮಕೂರು(ಡಿ.05): ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪೈಪ್‌ಗಳು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರಿನ ಸ್ಮಾರ್ಟ್‌ ಸಿಟಿ ಕಚೇರಿ ಪಕ್ಕದಲ್ಲಿರುವ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಬೆಳಗಿನ ಜಾವ 3 ಗಂಟೆ ಆಸುಪಾಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಪೈಪ್‌ಗಳು ಧಗಧಗನೆ ಉರಿಯುತ್ತಿತ್ತು. ಸನಿಹದಲ್ಲೇ ಶೆಡ್‌ನಲ್ಲಿ ಮಲಗಿದ್ದ ಸ್ಮಾರ್ಟ್‌ ಸಿಟಿ ಕೂಲಿ ಕಾರ್ಮಿಕನ್ನೊಬ್ಬ ಮೂತ್ರ ವಿಸರ್ಜನೆಗೆ ಹೊರ ಬಂದಾಗ ಬೆಂಕಿಯ ಕೆನ್ನಾಲಿಗೆಯನ್ನು ಕಂಡು 100 ಮೀಟರ್‌ ದೂರದಲ್ಲಿ ಮಲಗಿದ್ದ ಇತರೆ ಕಾರ್ಮಿಕರನ್ನು ಎಬ್ಬಿಸಿದ್ದಾನೆ.

ಮತದಾನ ಬಹಿರಂಗ ಪಡಿಸಿದ JDS ಕಾರ್ಯಕರ್ತ..!

ಅಷ್ಟರಲ್ಲಾಗಲೇ ಬೆಂಕಿ ಕೆನ್ನಾಲಿಗೆ ಜೋರಾಗಿತ್ತು. ಕೂಲಿ ಕಾರ್ಮಿಕರ ಕೂಗಾಟದಿಂದ ಎದುರಿಗಿದ್ದ ಮನೆಯವರ ಎಚ್ಚರಗೊಂಡು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಪೈಪ್‌ಗಳು ಸುಟ್ಟು ಬೂದಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸನಿಹದಲ್ಲಿದ್ದ ತೆಂಗಿನ ಗರಿಗಳೆಲ್ಲಾ ಸುಟ್ಟು ಹೋಗಿದೆ. ಇದಲ್ಲದೆ ದೂರದಲ್ಲಿದ್ದ ಮತ್ತಷ್ಟುಪೈಪ್‌ಗಳು ಬೆಂಕಿಯ ಶಾಖಕ್ಕೆ ಅರೆಬರೆ ಬೆಂದು ಹೋಗಿತ್ತು.

ಬೆಂಕಿ ನಂದಿಸುವಲ್ಲಿ ಯಶಸ್ವಿ; ಭಾರಿ ನಷ್ಟ:

ಸುಮಾರು 50 ಲಕ್ಷ ರು. ಮೌಲ್ಯದ ಪೈಪ್‌ಗಳು ಸುಟ್ಟು ಕರಕಲಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಧ್ಯರಾತ್ರಿ ಘಟನೆ ಸಂಭವಿಸಿದ್ದರಿಂದ ಸಾಕಷ್ಟುಹಾನಿ ಉಂಟಾಗಿದೆ.

ಸರಸದ ನಡುವೆ ಕಲಹ: ಬೆತ್ತಲೆ ಇದ್ದವನನ್ನು ಬಡಿದು ಕೊಂದಳು..!

ಅವಘಡ ನಡೆದ ಸನಿಹದಲ್ಲೇ ಸುಮಾರು 40ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ತಮ್ಮ ಕುಟುಂಬ ಹಾಗೂ ಮಕ್ಕಳೊಂದಿಗೆ ಪ್ಲಾಸ್ಟಿಕ್‌ ಡೇರೆಗಳಲ್ಲಿ ವಾಸಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಬರಿ ಬಿದ್ದ ಕಾರ್ಮಿಕರು:

ಬೆಳಗಿನ ಜಾವ ನಡೆದ ಈ ಅವಘಡದಿಂದ ಸ್ಮಾರ್ಟ್‌ ಸಿಟಿ ಕೆಲಸಕ್ಕೆಂದು ದೂರದ ಗಂಗಾವತಿ ತಾಲೂಕಿನಿಂದ ಬಂದಿರುವ ಕೂಲಿ ಕಾರ್ಮಿಕರು ಗಾಬರಿ ಬಿದ್ದಿದ್ದಾರೆ. ರಾತ್ರಿ ಶೆಡ್‌ನಲ್ಲಿ ಮಲಗಿದ್ದ ಕಾರ್ಮಿಕನ್ನೊಬ್ಬ ಮೂತ್ರವಿಸರ್ಜನೆಗೆ ಹೋಗಿದ್ದಾಗ ವಿಷಯ ಗೊತ್ತಾಗಿದ್ದರಿಂದ ನಮ್ಮನ್ನೆಲ್ಲಾ ಎಬ್ಬಿಸಿದ. ಇಲ್ಲದಿದ್ದರೆ ನಮ್ಮ ಜೀವಕ್ಕೆ ಅಪಾಯ ಬರುತ್ತಿತ್ತು ಎಂದು ತಿಳಿಸಿದರು.

ಸೆಕ್ಯೂರಿಟಿ ಗಾರ್ಡ್‌ಗಳಿರಲಿಲ್ಲ

ಲಕ್ಷಾಂತರ ರುಪಾಯಿ ಮೌಲ್ಯದ ಪೈಪ್‌ಗಳು ಇದ್ದರೂ ಯಾವೊಬ್ಬ ಸೆಕ್ಯೂರಿಟಿ ಗಾರ್ಡ್‌ಗಳು ಇರದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ರಾತ್ರಿ ಪಾಳಯದ ಬೀಟ್‌ ಪೊಲೀಸರು ಕೂಡ ಇತ್ತ ಕಡೆ ಸುಳಿದಿರಲಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ.

ಘಟನೆ ನಡೆದಿರುವ ಸ್ಥಳದಲ್ಲೇ ಶಾಲೆ, ವಿದ್ಯಾರ್ಥಿಗಳ ಹಾಸ್ಟೆಲ್‌, ಜನವಸತಿ ಪ್ರದೇಶಗಳು, ಡಿಡಿಪಿಐ ಕಚೇರಿ ಇದ್ದು ಅದೃಷ್ಟವಶಾತ್‌ ಯಾವುದೇ ತೊಂದರೆಯಾಗಿಲ್ಲ.

ಸೊಗಡು ಶಿವಣ್ಣ ಭೇಟಿ

ಬುಧವಾರ ಸಂಜೆ ಘಟನಾ ನಡೆದ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ಈ ಘಟನೆ ಸ್ಮಾರ್ಟ್‌ಸಿಟಿ ಕಾಮಗಾರಿ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದಿದ್ದಾರೆ. ಪ್ಲಾಸ್ಟಿಕ್‌ ಪೈಪ್‌, ಕೇಬಲ್‌, ಮತ್ತಿತರೆ ಸಾಮಗ್ರಿಗಳಿರುವ ಸ್ಥಳದಲ್ಲಿ ಸೆಕ್ಯೂರಿಟಿ ಇಲ್ಲದೇ ಇರುವುದು ಮೇಲ್ನೋಟಕ್ಕೆ ಬೇಜವಾಬ್ದಾರಿತನಕ್ಕೆ ಕುರುಹಾಗಿದ್ದು, ಸ್ಮಾರ್ಟ್‌ಸಿಟಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.

ಅಲ್ಲದೇ ಘಟನೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಘಟನೆಗೆ ನಿಖರ ಕಾರಣ ಪತ್ತೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು

  • ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ನಡೆದ ಘಟನೆ
  • ಬೆಂಕಿಯ ಕೆನ್ನಾಲಿಗೆ ದೂರದಲ್ಲಿರುವ ಪೈಪ್‌ಗಳು ಕರಕಲು
  • ಸುಟ್ಟು ಕರಕಲಾಗಿದೆ ತೆಂಗಿನ ಮರದ ಗರಿಗಳು
  • 40 ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು