ಗುಂಡ್ಲುಪೇಟೆ (ಅ.27):  ನಟ ಧನ್ವೀರ್‌ ಬಂಡೀಪುರದ ಜಿ.ಎಸ್‌. ಬೆಟ್ಟಬೋಳುಗುಡ್ಡ ಗಸ್ತಿನ ಡಿಲೈನ್‌ ಹತ್ತಿರ ನಿಷೇಧಿತ ಪ್ರದೇಶದೊಳಗೆ ಅತಿಕ್ರಮ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಎಫ್‌ ಐಆರ್‌ ಸೋಮವಾರ ದಾಖಲಿಸಿದೆ.

ವನ್ಯಜೀವಿ ಕಾಯ್ದೆ 1972 ರ ಕಾಯಿದೆ 37(1) ರಡಿ ನಟ ಧನ್ವೀರ್‌ ಒಬ್ಬರ ಮೇಲೆ ಮಾತ್ರ ದೂರು ದಾಖಲಾಗಿದೆ. ಆದರೆ ಧನ್ವೀರ್‌ ಜೊತೆಗಿದ್ದವರ ಮೇಲೆ ದೂರು ದಾಖಲಾಗಿಲ್ಲ. ನಟ ಧನ್ವೀರ್‌ ಸಫಾರಿಗೆ ಜೀಪಿನಲ್ಲಿ ಹೋಗಿ ವಾಪಸ್‌ ಅವಧಿಯೊಳಗೆ ಬಂದಿದ್ದಾರೆ ಎಂಬುದು ಅರಣ್ಯ ಇಲಾಖೆಯ ವಾದ. ಆದರೆ ಸಫಾರಿ ವಾಹನದಲ್ಲಿ ಹೋದ ನಟ ಧನ್ವೀರ್‌ ನಿಷೇಧಿತ ಪ್ರದೇಶದೊಳಗೆ ಅತಿಕ್ರಮ ಪ್ರವೇಶ ಎಂದು ದೂರು ದಾಖಲಿಸಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ.

ನಟ ಧನ್ವೀರ್‌ ವಿರುದ್ಧ ಎಫ್‌ಐಆರ್‌ಗೆ ಸೂಚನೆ ..

ಕೇಸು ದಾಖಲಾದ ಬಳಿಕ ನಟ ಧನ್ವೀರ್‌ ಹೊರತು ಪಡಿಸಿ ಉಳಿದ ಸ್ನೇಹಿತರ ವಿಚಾರಣೆ ನಡೆಸಿಲ್ಲ, ಉಳಿದವರ ಮೇಲೆ ಕೇಸು ಹಾಕಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.

ನಟ ಧನ್ವೀರ್‌ ವಿಚಾರಣೆಯನ್ನು ರಾತ್ರಿ ಸಫಾರಿಗೆ ವಾಹನ ಕಳುಹಿಸಿದ ಆರೋಪ ಇದೆ ಎನ್ನಲಾದ ಆರ್‌ಎಫ್‌ಒ ನವೀನ್‌ ಕುಮಾರ್‌ ತನಿಖೆ ಮಾಡಿರುವುದು ಮತ್ತೊಂದು ಅನುಮಾನ. ಆರ್‌ಎಫ್‌ಒ ಮೇಲೆ ಆರೋಪ ಇರುವಾಗ ಕನಿಷ್ಠ ಎಸಿಎಫ್‌ ತನಿಖೆ ನಡೆಸಿಲ್ಲ. ಆರ್‌ಎಫ್‌ಒ ತನಿಖೆ ನಡೆಸಿ, ವಿಚಾರಣೆ ಮಾಹಿತಿ ಬಹಿರಂಗ ಪಡಿಸಿ ವಿಚಾರಣೆಯ ಗೌಪ್ಯತೆ ಕಾಪಾಡಿಲ್ಲ. ನಿಷೇಧಿತ ಪ್ರದೇಶದೊಳಗೆ ಅತಿಕ್ರಮ ಪ್ರವೇಶ ಎಂದು ಕೇಸು ದಾಖಲು ಮಾಡಿದ್ದಾರೆ. ಆದರೆ ವಿಚಾರಣೆ ನಡೆದ ರೀತಿ ಅನುಮಾನ ಮೂಡಿಸಿದೆ ಎಂದು ಐಎಫ್‌ಎಸ್‌ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.