ನಟ ಧನ್ವೀರ್ ವಿರುದ್ಧ ಎಫ್‌ಐಆರ್‌ಗೆ ಸೂಚನೆ
ಸ್ಯಾಂಡಲ್‌ವುಡ್ ನಟ ಧನ್ವೀರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಅರಣ್ಯ ಇಲಾಖೆ ಸೂಚಿಸಿದೆ.
ಬೆಂಗಳೂರು (ಅ.25): ನಿಯಮ ಮೀರಿ ರಾತ್ರಿ ವೇಳೆ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವೇಶ ಮಾಡಿರುವ ಆರೋಪ ಎದುರಿಸುತ್ತಿರುವ ನಟ ಧನ್ವೀರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಸೂಚಿಸಿದೆ.
‘ಅಭಯಾರಣ್ಯದಲ್ಲಿ ಸಂಜೆ 5.30ರ ನಂತರ ಯಾವುದೇ ರೀತಿಯ ಸಫಾರಿ ಇರುವುದಿಲ್ಲ. ಸಾರ್ವಜನಿಕರ ಪ್ರವೇಶಕ್ಕೂ ಅವಕಾಶ ಇಲ್ಲ. ಹೀಗಿದ್ದರೂ ಧನ್ವೀರ್ ಕತ್ತಲೆ ಆಗುವವರೆಗೂ ಅರಣ್ಯದಲ್ಲಿ ಸುತ್ತಾಡಿರುವ ಆರೋಪವಿದೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ನೋಡಿದರೆ ಕತ್ತಲಾದ ಬಳಿಕ ಅವರು ಅರಣ್ಯದಲ್ಲಿ ಉಳಿದಿರುವುದು ತಿಳಿದು ಬರುತ್ತಿದೆ. ಈ ಘಟನೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕರಿಸಿದ್ದಾರೆಯೇ, ಇಲ್ಲ ಸಿಬ್ಬಂದಿ ಕಣ್ತಪ್ಪಿಸಿ ಧನ್ವೀರ್ ಒಳ ಪ್ರವೇಶ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಿಬ್ಬಂದಿ ಲೋಪವೆಸಗಿದ್ದರೆ ಅವರ ವಿರುದ್ಧ ವರದಿ ಸಲ್ಲಿಸಬೇಕು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರಿಗೆ ಸೂಚಿಸಲಾಗಿದೆ’ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರಾ ತಿಳಿಸಿದರು.
ಮಧ್ಯರಾತ್ರಿ ಬಂಡೀಪುರ ಸಫಾರಿ ಮಾಡಿದ ನಟ ಧನ್ವೀರ್ ವಿರುದ್ಧ ಆಕ್ರೋಶ ...
ತನಿಖಾ ವರದಿ ಸಲ್ಲಿಕೆ: ‘ನಿಯಮ ಮೀರಿ ಅರಣ್ಯದಲ್ಲಿ ವಿಡಿಯೋ ಮಾಡಿರುವ ಸಂಬಂಧ ವಲಯ ಅರಣ್ಯ ಅಧಿಕಾರಿಗಳ ಮುಂದೆ ನಟ ಧನ್ವೀರ್ ಹೇಳಿಕೆ ನೀಡಿದ್ದಾರೆ. ಈ ಕುರಿತು ತನಿಖಾ ವರದಿ ತರಿಸಿಕೊಂಡು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ರವಾನಿಸಲಾಗುವುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.
ಕ್ಷಮಾಪಣೆ ಕೋರಿಕೆ ತಿರಸ್ಕಾರ:
ಅಲ್ಲದೆ, ‘ರಾತ್ರಿ ಸಂದರ್ಭದಲ್ಲಿ ಅರಣ್ಯದಲ್ಲಿ ಇದ್ದಿರುವುದು ತಪ್ಪಾಗಿದ್ದು ಕ್ಷಮಿಸಬೇಕು ಎಂದು ಧನ್ವೀರ್ ಮನವಿ ಮಾಡಿದ್ದಾರೆ ಎಂದು ಹೇಳಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ನಾವು ಅಧಿಕಾರಿಗಳು ಕ್ಷಮೆಯನ್ನು ಮನ್ನಿಸಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.