ಪ್ರೊ.ಭಗವಾನ್‌ಗೆ ಮಸಿ ಬಳಿದ ವಕೀಲೆಯ ಪತಿ ವಿರುದ್ಧವೂ FIR

ಭಗವಾನ್‌ ಮುಖಕ್ಕೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ನಡೆ ಖಂಡಿಸಿದ ಬೆಂಗಳೂರು ವಕೀಲರ ಸಂಘ|  ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರ ಆಗ್ರಹ| ಬಿಜೆಪಿ ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಗವಾನ್‌ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ| 

FIR Against the Lawyer Husband on Ink on KS Bhagawan Face grg

ಬೆಂಗಳೂರು(ಫೆ.07): ಪ್ರೊ.ಕೆ.ಎಸ್‌.ಭಗವಾನ್‌ ಅವರಿಗೆ ಕೋರ್ಟ್‌ ಆವರಣದಲ್ಲಿ ಮಸಿ ಬಳಿಕ ವಕೀಲೆ ಮೀರಾ ರಾಘವೇಂದ್ರ ಪತಿ ಹಾಗೂ ಇನ್ನಿತರ ಇಬ್ಬರ ವಿರುದ್ಧ ಕೂಡ ಹಲಸೂರು ಗೇಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ರಾಘವೇಂದ್ರ ಅವರ ವಿರುದ್ಧ ಘಟನೆಯ ವಿಡಿಯೋ ತೆಗೆಯುವ ಮೂಲಕ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಫೆ.2ರಂದು ವಿಚಾರಣೆಗೆಂದು ಭಗವಾನ್‌ ಅವರು ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ಹೊರ ಬರುವಾಗ ಮೀರಾ ರಾಘವೇಂದ್ರ ಮುಖಕ್ಕೆ ಮಸಿ ಬಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ‘ನಿನ್ನನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ. ಮೈಸೂರಿಗೆ ಹೋಗುವುದರೊಳಗೆ ನನ್ನ ಸಂಘಟನೆ ಹುಡುಗರು ನಿನ್ನನ್ನು ಕೊಲ್ಲುತ್ತಾರೆ’ ಎಂದು ಬೆದರಿಕೆ ಹಾಕಿದ್ದರು. ಈ ವೇಳೆ ಮೀರಾ ರಾಘವೇಂದ್ರ ಪತಿ ಘಟನೆಯ ವಿಡಿಯೋ ಮಾಡಿ ಸಹಕರಿಸಿದ್ದಾರೆ ಎಂದು ಆರೋಪಿಸಿ ಭಗವಾನ್‌ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಕೀಲರ ಸಂಘ ಖಂಡನೆ

ಪ್ರಕರಣವೊಂದರ ಸಂಬಂಧ ನಗರದ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಫೆ.4ರಂದು ಹಾಜರಾಗಿದ್ದ ಹಿರಿಯ ಸಾಹಿತಿ ಕೆ.ಎಸ್‌.ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದಿರುವ ವಕೀಲರಾದ ಮೀರಾ ರಾಘವೇಂದ್ರ ಅವರ ನಡೆಯನ್ನು ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಮೀರಾ ರಾಘವೇಂದ್ರ ಬೆಂಗಳೂರು ವಕೀಲರ ಸಂಘದ ಸದಸ್ಯರಾಗಿಲ್ಲ. ಆದರೂ, ಅವರ ಈ ಕೃತ್ಯ ವಕೀಲ ವೃತ್ತಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ ಎಂದು ಖಂಡಿಸಿರುವ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ನ್ಯಾಯಾಂಗದ ಗೌರವ ಕಾಪಾಡುವಲ್ಲಿ ಸಂಘ ಮುಂಚೂಣಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅವಹೇಳನ: ಸಾಹಿತಿ ಭಗವಾನ್‌ಗೆ ಮಸಿ ಬಳಿದ ಮಹಿಳಾ ಅಡ್ವಕೇಟ್

ವಕೀಲೆಯ ಬಂಧನಕ್ಕೆ ಒತ್ತಾಯ

ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಮುಖಕ್ಕೆ ಮಸಿ ಬಳಿದಿರುವ ಪ್ರಕರಣ ಸಂಬಂಧಿಸಿದಂತೆ ಆರೋಪಿ ವಕೀಲರಾದ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಸಮತಾವಾದ) ರಾಜ್ಯಾಧ್ಯಕ್ಷ ಎಚ್‌.ಮಾರಪ್ಪ, ಮೀರಾ ಅವರು ವ್ಯಕ್ತಿಗತ ಹಿತಾಸಕ್ತಿಗಾಗಿ, ಪ್ರಚಾರ ಪಡೆಯಲು ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಭಗವಾನ್‌ ಅವರು ತಪ್ಪು ಮಾಡಿದ್ದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿ. ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ಭಗವಾನ್‌ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ, ಕಪ್ಪು ಕೋಟನ್ನು ಧರಿಸಿ ನ್ಯಾಯ ದೇವತೆಯ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಮೀರಾ ಮಾಡಿದ್ದಾರೆ ಎಂದರು.

ಪ್ರಜಾಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್‌ ಮಾತನಾಡಿ, ಮೀರಾ ರಾಘವೇಂದ್ರ ಬಿಜೆಪಿ ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಗವಾನ್‌ ಮುಖಕ್ಕೆ ಮಸಿ ಬಳಿದಿದ್ದಾರೆ. ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ನಾವೆಲ್ಲರೂ ಭಗವಾನ್‌ ಅವರಿಗೆ ನೈತಿಕ ಸ್ಥೈರ್ಯ ನೀಡುತ್ತೇವೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios