ಬೆಂಗಳೂರು(ನ.02): ಅಕ್ರಮ ಬಂಧನದಲ್ಲಿಟ್ಟು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರು ಪಿಎಸ್‌ಐಗಳು ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ವಿಜಯನಗರ ಠಾಣೆ ಇನ್‌ಸ್ಪೆಕ್ಟರ್‌ (ಈಗ ಸಿಸಿಬಿ) ಭರತ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸಂತೋಷ್‌ ಕುಮಾರ್‌, ಅಕ್ಷತಾ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಲಿಂಗರಾಜು ಅವರಿಗೆ ಸಂಕಷ್ಟ ಎದುರಾಗಿದ್ದು, ನ್ಯಾಯಾಲಯದ ಆದೇಶದನ್ವಯ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಅಪರಾಧ ಪ್ರಕರಣ ಸಂಬಂಧ ವಿಚಾರಣೆಗೆ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಬಳಿಕ ಆಕೆಯನ್ನು ರಾತ್ರಿಯಿಡೀ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಮರು ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿನಗಳು ವಶಕ್ಕೆ ಪಡೆದಿದ್ದರು. ಈ ವೇಳೆ ಆಕೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕಳು ನೀಡಿದ್ದರು. ಬಳಿಕ ಸಂತ್ರಸ್ತೆಯಿಂದ ಸುಳ್ಳು ಹೇಳಿಕೆಯನ್ನು ಪಡೆದ ಪೊಲೀಸರು, ಈ ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ನಿನ್ನ ಮಕ್ಕಳ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಧಮ್ಕಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಮತ್ತೊಂದು ಡ್ರಗ್ಸ್ ಜಾಲ ಪತ್ತೆ: ಇದು ಒಂದೇ ತಿಂಗಳಲ್ಲಿ 4ನೇ ದೊಡ್ಡ ಪ್ರಕರಣ

ಈ ಸಂಬಂಧ ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ, ಪೊಲೀಸ್‌ ಆಯುಕ್ತರು, ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ಶೋಷಿತ ಮಹಿಳೆ ನ್ಯಾಯಕ್ಕೆ ಮೊರೆಯಿಟ್ಟಿದ್ದರು. ಬಳಿಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ ಆಕೆ, ಕಿರುಕುಳ ನೀಡಿದ ಪೊಲೀಸರ ವಿರುದ್ಧ ತನಿಖೆಗೆ ಒತ್ತಾಯಿಸಿದ್ದರು. 

ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು, ತನಿಖೆಗೆ ಸೂಚಿಸಿದೆ. ಅಂತೆಯೇ ಲೈಂಗಿಕ ಕಿರುಕುಳ (ಐಸಿಸಿ 354), ಮಹಿಳೆಯರ ಗೌರವಕ್ಕೆ ಧಕ್ಕೆ ತಂದ (ಐಪಿಸಿ 354-ಬಿ), ಜೀವಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 120ಬಿ) ಹಾಗೂ ಅಕ್ರಮ ಬಂಧನ (ಐಪಿಸಿ 341) ಸೇರಿದಂತೆ ಇತರೆ ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.