ಉಡುಪಿ, (ನ.01): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸ್ಟಾರ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲಿಗೆ ಹೋಗಿದ್ದಾರೆ. ಇದರ ನಡುವೆ ಉಡುಪಿ ಪೊಲೀಸರು ಮತ್ತೆ ಬಹು ದೊಡ್ಡ ಡ್ರಗ್ಸ್ ಮಾಫಿಯಾ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು...ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್‌ ಮೇಲೆ ದಾಳಿ ಮಾಡಿದ ಉಡುಪಿ  ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ಸುಮಾರು 3,89,000 ರು. ಮೌಲ್ಯದ ಡ್ರಗ್ಸ್ ನ್ನು ವಶಪಡಿಸಿಕೊಂಡಿದ್ದಾರೆ.

ಪೆಡ್ಲರ್‌ಗಳ ಸೆರೆ: 32 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ಅಲ್ಲದೇ  ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಈ ಅಪಾರ್ಟ್ ಮೆಂಟ್ ನ 204ನೇ ಕೊಠಡಿಯಲ್ಲಿ ವಾಸವಾಗಿದ್ದ  ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿ ಆದಿತ್ಯ ಪ್ರಭು ಬಳಿ ಈ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ, 9 ಗಾಂ ಬ್ರೌನ್ ಶುಗರ್  ಹಾಗೂ 25 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆತ ನೀಡಿದ ಮಾಹಿತಿಯಂತೆ ಆತನೊಂದಿಗೆ ವ್ಯವಹರಿಸುತಿದ್ದ ಅಮೆರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿ ಅನಿಶ್ ಎಂಬಾತನನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಅನೇಕ ವಿದ್ಯಾರ್ಥಿಗಳ ಹೆಸರುಗಳೂ ಹೊರಗೆ ಬಂದಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಎಎಸ್ಪಿ ಕುಮಾರಚಂದ್ರ ಜೊತೆಗೆ ಡಿವೈಎಸ್ಪಿ ಟಿ.ಆರ್.ಜೈ ಶಂಕರ್, ಕುಂದಾಪುರ ಎಎಸ್ಪಿ ಹರಿರಾಮ  ಶಂಕರ್, ಮಣಿಪಾಲ ಇನ್ಸ್ ಪೆಕ್ಟರ್ ಮಂಜುನಾಥ್ ಎಂ.ಗೌಡ, ಎಎಸ್ ಐ  ರಾಜಶೇಖರ್ ಪಿ., ಸಹಾಯಕ ಡ್ರಗ್ಸ್ ಕಂಟ್ರೋಲರ್  ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

ಕಳೆದೊಂದು ತಿಂಗಳಲ್ಲಿ ಉಡುಪಿ ಪೊಲೀಸರು ಮಣಿಪಾಲದಲ್ಲಿ ಪತ್ತೆ ಮಾಡಿರುವ ಸಿಂಥೆಟಿಕ್ ಡ್ರಗ್ಸ್ ಗಳ  4ನೇ ದೊಡ್ಡ ಪ್ರಕರಣ ಇದಾಗಿದೆ.