ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಮತ್ತೆ ಅನೈತಿಕ ಚಟುವಟಿಕೆಗಳ ಸಂದೇಹದಿಂದ ಬೀಗ ಹಾಕಲಾಗಿತ್ತು. ಆದರೆ, ಕೆಲವರು ಬೀಗ ಮುರಿದು ಒಳನುಗ್ಗಿದ್ದಾರೆ. ಈ ಘಟನೆ ಸ್ವಾಮೀಜಿ ಮತ್ತು ಟ್ರಸ್ಟ್ ನಡುವಿನ ತಿಕ್ಕಾಟವನ್ನು ಮತ್ತೆ ಬಯಲಿಗೆಳೆದಿದೆ.

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಪಂಚಮಸಾಲಿ ಪೀಠಕ್ಕೆ ಹಾಕಿದ್ದ ಬೀಗವನ್ನು ಕೆಲವು ಮಂದಿ ಮಧ್ಯರಾತ್ರಿ ಮುರಿದ ಘಟನೆಗೆ ಸಂಬಂಧಿಸಿದಂತೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೀಠದ ಟ್ರಸ್ಟ್ ವ್ಯವಸ್ಥಾಪಕ ಚಂದ್ರಶೇಖರ್ ಅವರು ಈ ಕುರಿತು ದೂರು ಸಲ್ಲಿಸಿದ್ದಾರೆ. ಅವರ ಹೇಳಿಕೆ ಪ್ರಕಾರ, “ಮಠದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಂದೇಹ ವ್ಯಕ್ತವಾಗಿದ್ದರಿಂದ ನಾವು ಪೀಠಕ್ಕೆ ಬೀಗ ಹಾಕಿದ್ದೆವು. ಆದರೆ, ಸುಮಾರು 7 ಜನರು ಬಂದು ಕೀಲಿಯನ್ನು ಕೇಳಿದರು. ನಾನು ಅವರಿಗೆ ಬೆಳಿಗ್ಗೆ ಬರುವಂತೆ ತಿಳಿಸಿದ್ದರೂ ಅವರು ಕೇಳದೇ ರಾತ್ರಿ ಬೀಗ ಮುರಿದು ಒಳಗೆ ಪ್ರವೇಶಿಸಿದರು.” ಎಂದು ತಿಳಿಸಿದ್ದಾರೆ.

ಈ ಪ್ರಕರಣವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ ಅವರಿಗೆ ತಿಳಿಸಲಾಗಿದೆ. ಅವರ ಸೂಚನೆ ಮೇರೆಗೆ ಬೀಗ ಮುರಿದವರ ವಿರುದ್ಧ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಟ್ರಸ್ಟ್ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೆ ಪಂಚಮಸಾಲಿ ಟ್ರಸ್ಟ್ ಈಗ ಪೀಠದ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಿದೆ. “ಪೀಠಕ್ಕೆ ಆಗಮಿಸುವವರ ಮೇಲೆ ನಿಗಾ ವಹಿಸುವ ಸಲುವಾಗಿ ಸಿಸಿಟಿವಿ ಅಳವಡಿಸುತ್ತಿದ್ದೇವೆ,” ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು.

ನಿನ್ನೆ ಸಂಜೆ ಮಠದ ಗೇಟ್ ಮುರಿದು ಒಳಗೆ ಪ್ರವೇಶಿಸಿದ ಘಟನೆಯ ಕುರಿತಂತೆ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ 7 ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ. ಇದರಿಂದ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಮತ್ತು ಕಾಶಪ್ಪನವರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಹೊರಹೊಮ್ಮಿದೆ. ಇಂದು ಪಂಚಮಸಾಲಿ ಪೀಠಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡುವ ನಿರೀಕ್ಷೆಯಿದೆ.