*  ನಾಲ್ಕುವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆ ಕಂಪನಿ*  ಹೈಕೋರ್ಟ್‌ ಆದೇಶದಂತೆ ಗುತ್ತಿಗೆ ರದ್ದು, ಮರು ಟೆಂಡರ್‌ಗೆ ಆದೇಶ*  ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಆರೋಪ 

ಬೆಂಗಳೂರು(ಮಾ.10): ನಿಗದಿತ ಅವಧಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದ ಆರೋಪದಡಿ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕನ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ಎಫ್‌ಐಆರ್‌(FIR) ದಾಖಲಿಸಿದ್ದಾರೆ. ಬಿಬಿಎಂಪಿ(BBMP) ಯೋಜನೆ ವಿಭಾಗದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸಿ.ಗೀತಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು(Police), ಪಶ್ಚಿಮ ಬಂಗಾಳ ಮೂಲದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ(Simplex Infrastructure Company) ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಮುಂದ್ರಾ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಗರದ ಈಜಿಪುರದಿಂದ ಕೋರಮಂಗಲದ ಕೇಂದ್ರೀಯ ಸದನದವರೆಗೆ ಮೇಲ್ಸೇತುವೆ(Ejipura Flyover) ನಿರ್ಮಾಣ ಸಂಬಂಧ 2017ರ ಮೇ 4ರಂದು ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗೆ ಗುತ್ತಿಗೆ(Tender) ನೀಡಲಾಗಿತ್ತು. ಈ ಕಾಮಗಾರಿಗೆ ಟೆಂಡರ್‌ನಲ್ಲಿ 203.20 ಕೋಟಿ ರು. ಮೊತ್ತ ನಿಗದಿಗೊಳಿಸಲಾಗಿತ್ತು. ಟೆಂಡರ್‌ ನಿಯಮದ ಪ್ರಕಾರ ಈ ಕಾಮಗಾರಿ 2019ರ ನವೆಂಬರ್‌ನಲ್ಲಿ ಮುಗಿಯಬೇಕಿತ್ತು. ಆದರೆ, ಈವರೆಗೆ ಕೇವಲ ಶೇ.42.80ರಷ್ಟು ಮಾತ್ರ ಭೌತಿಕ ಪ್ರಗತಿ ಸಾಧಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Bengaluru: ಈಜಿಪುರ ಫ್ಲೈಓವರ್‌ ಗುತ್ತಿಗೆದಾರರ ವಿರುದ್ಧ ಕೇಸ್‌ ದಾಖಲಿಸಿ: ಹೈಕೋರ್ಟ್‌

ಅಂತೆಯೇ ಈ ಕಾಮಗಾರಿಗೆ ಪಾಲಿಕೆಯಿಂದ ಬಿಡುಗಡೆ ಮಾಡಿದ್ದ ಹಣವನ್ನು ಗುತ್ತಿಗೆ ಕಂಪನಿಯು ಬೇರೆ ಕಾರ್ಯಗಳಿಗೆ ಉಪಯೋಗಿಸಿಕೊಂಡಿದೆ. ಈ ಮೂಲಕ ಪಾಲಿಕೆ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ಅಲ್ಲದೆ, ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಮಾಡಲಾಗಿದೆ. ಹೀಗಾಗಿ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಮುಂದ್ರಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

ಈಜಿಪುರ ಮೇಲ್ಸೇತುವೆ ಟೆಂಡರ್‌ ರದ್ದು

ಈಜಿಪುರ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆ(Elevated Corridor Project) ನಿರ್ಮಿಸಲು ಟೆಂಡರ್‌ ಪಡೆದು ವಿಳಂಬ ಮಾಡುತ್ತಿರುವ ಸಿಂಪ್ಲೆಕ್ಸ್‌ ಕಂಪೆನಿಗೆ ನೀಡಿರುವ ಟೆಂಡರ್‌ನ್ನು ನಗರಾಭಿವೃದ್ಧಿ ಇಲಾಖೆಯು ಹೈಕೋರ್ಟ್‌ ಆದೇಶದ ಅನ್ವಯ ಮಾ.3ರಂದು ರದ್ದುಗೊಳಿಸಿದ್ದು, ಮರು ಟೆಂಡರ್‌ಗೆ ಆದೇಶ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋರಮಂಗಲದ 100 ಅಡಿ ಒಳವರ್ತುಲ ರಸ್ತೆಯ ಜಂಕ್ಷನ್‌, ಸೋನಿ ವಲ್ಡ್‌ರ್‍ ಜಂಕ್ಷನ್‌, ಕೇಂದ್ರೀಯ ಸದನ ಜಂಕ್ಷನ್‌ಗಳನ್ನು ಈಜಿಪುರ ಮುಖ್ಯರಸ್ತೆಗೆ ಸೇರಿಸಲು ಈಜಿಪುರ ಎಲಿವೇಟೆಡ್‌ ಕಾರಿರಾಡ್‌ ಕಾಮಗಾರಿಗೆ 2017-18ರಲ್ಲಿ ಚಾಲನೆ ನೀಡಲಾಗಿತ್ತು. ಮಂದಗತಿಯಲ್ಲಿ ಕಾಮಗಾರಿ ನಡೆಸಿದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಗೆ ನಗರಾಭಿವೃದ್ಧಿ ಇಲಾಖೆಯಿಂದ ಈಗಾಗಲೇ 1.57 ಕೋಟಿ ರು. ದಂಡ ವಿಧಿಸಲಾಗಿದ್ದು, ಕಂಪೆನಿಯು ಟೆಂಡರ್‌ ಪಡೆಯುವಾಗ ನೀಡಿದ್ದ 10.16 ಕೋಟಿ ರು.ಗಳನ್ನು ಮುಟ್ಟುಗೋಲು ಮಾಡಲಾಗಿದೆ.

Ejipura Flyover: ಕಾಮಗಾರಿ ವಿಳಂಬ, ಬಿಬಿಎಂಪಿ ಅಧಿಕಾರಿಗಳಿಗೆ ಸಂಸದ ತೇಜಸ್ವಿ ಸೂರ್ಯ ತರಾಟೆ

ಈ ಬಗ್ಗೆ ಮಾ.3ರಂದು ಆದೇಶ ಮಾಡಿರುವ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ(ಬಿಬಿಎಂಪಿ) ಎನ್‌.ಕೆ. ಲಕ್ಷ್ಮೇಸಾಗರ್‌, ಗುತ್ತಿಗೆ ಅನುಮೋದನೆಯಾಗಿ 4 ವರ್ಷ 7 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಶೇ.42ರಷ್ಟುಮಾತ್ರ ಭೌತಿಕ ಕಾಮಗಾರಿ ಪ್ರಗತಿಯಾಗಿದೆ. ಗುತ್ತಿಗೆದಾರ ಕಂಪೆನಿಯು ಸರ್ಕಾರ ಜತೆಗಿನ ಒಪ್ಪಂದದಂತೆ ಯೋಜನೆ ಪೂರ್ಣಗೊಳಿಸಲು ಹೊಂದಿರಬೇಕಾದ ಹೈಡ್ರಾಲಿಕ್‌ ರೋಟರಿ ಕ್ರೇನ್‌ ಅಳವಡಿಸಿಲ್ಲ. ಜತೆಗೆ ಕಾಮಗಾರಿಗೆ ಪರಿಷ್ಕೃತ ನೀಲನಕ್ಷೆಯನ್ನು ಸಲ್ಲಿಸಿಲ್ಲ. ಹೀಗಾಗಿ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚ​ರ್‍ಸ್ ಲಿಮಿಟೆಡ್‌ ಸಲ್ಲಿಸಿರುವ ಮುಟ್ಟುಗೋಲು ಹಾಕಿಕೊಂಡು ಸಂಸ್ಥೆಯವರ ರಿಸ್ಕ್‌ ಮತ್ತು ಕಾಸ್ಟ್‌ನಲ್ಲಿ ಗುತ್ತಿಗೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಯೋಜನೆ ಸಂಬಂಧ ಆದಿನಾರಾಯಣ ಶೆಟ್ಟಿ ಎಂಬುವವರು ಹೈಕೋರ್ಟ್‌ನಲ್ಲಿ(High Court) ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಫೆಬ್ರುವರಿಯಲ್ಲಿ ಕಂಪೆನಿಗೆ ನೀಡಿರುವ ಗುತ್ತಿಗೆ ರದ್ದು ಮಾಡುವಂತೆ ಆದೇಶ ಮಾಡಿತ್ತು. ಇದರಂತೆ ಮಾ.3ರಂದು ಗುತ್ತಿಗೆಯನ್ನು ರದ್ದುಪಡಿಸಿ ಆದೇಶಿಸಲಾಗಿದೆ.

ಮರು ಟೆಂಡರ್‌ಗೆ ಸೂಚನೆ:

ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಬಾಕಿ ಉಳಿದಿರುವ ಕಾಮಗಾರಿಯನ್ನು ಅನುಮೋದಿತ ಮೊತ್ತದ ಮಿತಿಯಲ್ಲಿಯೇ ಕೆಟಿಪಿಪಿ ಕಾಯ್ದೆಯಡಿ ಮರು ಟೆಂಡರ್‌ ಆಹ್ವಾನಿಸಲು ಕ್ರಮ ಕೈಗೊಳ್ಳಲಾಗಿದೆ.