Asianet Suvarna News Asianet Suvarna News

ಅರಣ್ಯ ಭೂಮಿ ಬದಲಾವಣೆ: ಸಚಿವ ಖಂಡ್ರೆ ಸೂಚನೆ, ಉಪ ಜಿಲ್ಲಾಧಿಕಾರಿ, ತಹಶೀಲ್ದಾರ್ ವಿರುದ್ಧ ಎಫ್‌ಐಆರ್‌

ಉಪ ಜಿಲ್ಲಾಧಿಕಾರಿ ವಿರುದ್ಧ ಅರಣ್ಯ ಇಲಾಖೆ ದಾಖಲು ಮಾಡಿರುವ ಈ ಎಫ್.ಐ.ಆರ್. ಮನಸೋಇಚ್ಛೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿ, ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಡುತ್ತಿರುವ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಜೊತೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರಿಗೆ ನಡುಕ ಹುಟ್ಟಿಸಿದೆ. 

FIR against Deputy Collector, Tahsildar For Forest Land Conversion in Bengaluru grg
Author
First Published Oct 19, 2023, 1:00 AM IST

ಬೆಂಗಳೂರು(ಅ.19):  ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದಂತೆ 2006ರಲ್ಲೇ ಅರಣ್ಯ ಎಂದು ವರ್ಗೀಕರಣವಾಗಿದ್ದ ನೂರಾರು ಕೋಟಿ ರೂ. ಬೆಲೆಬಾಳುವ 17 ಎಕರೆ 34 ಗುಂಟೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಮ್ಯುಟೇಷನ್ ಮಾಡಿದ್ದ ಉಪ ಜಿಲ್ಲಾಧಿಕಾರಿ ಡಾ.ಎಂ.ಜಿ. ಶಿವಣ್ಣ ವಿರುದ್ಧ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರ ಸೂಚನೆಯ ಮೇರೆಗೆ ಇಲಾಖೆ ಎಫ್‌ಐಆರ್‌ ದಾಖಲು ಮಾಡಿದೆ.

ಉತ್ತರ ಬೆಂಗಳೂರಿನ ಭಾರತೀಯ ನಗರದ ಬಳಿ ಸುಮಾರು 500 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯದ 17 ಎಕರೆ 34 ಗುಂಟೆ ಅರಣ್ಯ ಭೂಮಿಯನ್ನು ಉಪ ವಿಭಾಗಾಧಿಕಾರಿಯಾಗಿದ್ದ ಶಿವಣ್ಣ ಏಕಪಕ್ಷೀಯವಾಗಿ ಕಂದಾಯ ಭೂಮಿ ಎಂದು ತಿದ್ದುಪಡಿ ಮಾಡಿದ್ದು, ಈ ಭೂಮಿಯನ್ನು ಒತ್ತುವರಿ ಮಾಡಿ, ಆ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದವರಿಗೆ ಅನುಕೂಲ ಮಾಡಿಕೊಡುವ ಸಂಚನ್ನು  ಅರಣ್ಯ ಇಲಾಖೆ ಇತ್ತೀಚೆಗೆ ಪತ್ತೆ ಹಚ್ಚಿತ್ತು.

ಕಾವೇರಿ ವಿಚಾರದಲ್ಲಿ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಈಶ್ವರ್‌ ಖಂಡ್ರೆ

ಈ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಅರಣ್ಯ, ಪರಿಸರ ಸಂರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿದ್ದರು. ತರುವಾಯ ಅರಣ್ಯ ಭೂಮಿಯನ್ನು ಸರ್ಕಾರಿ ಜಮೀನು ಎಂದು ತಿದ್ದುಪಡಿ ಮಾಡಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಜಾಗೃತ ದಳಕ್ಕೆ ಕಟ್ಟು ನಿಟ್ಟಿನ ಆದೇಶ ನೀಡಿದ್ದರು.
ಖಂಡ್ರೆ ಆದೇಶದ ಮೇರೆಗೆ ಎಫ್.ಐ.ಆರ್.: ಸಚಿವ ಈಶ್ವರ ಖಂಡ್ರೆ ಅವರ ಆದೇಶದಂತೆ ತನಿಖೆ ಕೈಗೊಂಡ ಅರಣ್ಯ ಇಲಾಖೆಯ ಬೆಂಗಳೂರು ಯಲಹಂಕ ವಲಯದ ಗಸ್ತು ಶಾಖೆ, ಬೆಂಗಳೂರು ಪೂರ್ವ ತಾಲೂಕು, ಕೆ.ಆರ್.  ಪುರಂ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ನಂ.47ರಲ್ಲಿ ಸುಮಾರು 18 ಎಕರೆ ಅರಣ್ಯ ಭೂಮಿಯನ್ನು ಹೊಸದಾಗಿ ಅತಿಕ್ರಮಣ ಮಾಡಲು ಅನುವು ಮಾಡಿಕೊಡಲು ತಮ್ಮ ಇಲಾಖೆಯ ಉನ್ನತಾಧಿಕಾರಿ ಅಂದರೆ ಜಿಲ್ಲಾಧಿಕಾರಿಗಳ ಆದೇಶವನ್ನೇ ಬದಲಾಯಿಸಿದ ಕೆಳ ಹಂತದ ಅಧಿಕಾರಿಗಳು ಅಂದರೆ ಬೆಂಗಳೂರು ಪೂರ್ವ ತಹಶೀಲ್ದಾರ್ (ಅರಣ್ಯ ಭೂಮಿಯನ್ನು ಕಂದಾಯ ಎಂದು ಪರಿವರ್ತಿಸಲು ಎ.ಸಿ.ಕೋರ್ಟ್ ಗೆ ಶಿಫಾರಸು ಮಾಡಿದವರು) ಅಜಿತ್ ಕುಮಾರ್ ರೈ ಮತ್ತು ಉಪ ವಿಭಾಗಾಧಿಕಾರಿ ಡಾ. ಎಂ.ಜಿ. ಶಿವಣ್ಣ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 33, 104 ಮತ್ತು 104 ಸಿ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿದ್ದಾರೆ.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ: ಸದರಿ 17 ಎಕರೆ 34 ಗುಂಟೆ ಜಮೀನನ್ನು ಅರಣ್ಯ ಇಲಾಖೆ ಎಂದು ಜಿಲ್ಲಾಧಿಕಾರಿಯವರು ಘೋಷಿಸಿದ ತರುವಾಯ ಸಂಸ್ಥೆಯೊಂದು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿತ್ತು. ಹೀಗಾಗಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಈ ಪ್ರದೇಶದ ಜಂಟಿ ಸರ್ವೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಇದು ಅರಣ್ಯ ಭೂಮಿ ಎಂಬ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಸುಪ್ರೀಂಕೋರ್ಟ್ 2017ರ ಮಾರ್ಚ್ ನಲ್ಲಿ ಅರ್ಜಿ ವಿಲೇವಾರಿ ಮಾಡಿತ್ತು.

ಕಸ್ತೂರಿ ರಂಗನ್ ವರದಿ 2013 ರದ್ದು, ಈಗ ಪರಿಸ್ಥಿತಿ ಬದಲಾಗಿದೆ: ಸಚಿವ ಈಶ್ವರ ಖಂಡ್ರೆ

ಆದಾಗ್ಯೂ 2023ರಲ್ಲಿ ಕೆಲವು ಭೂಕಬಳಿಕೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆರ್.ಟಿ.ಸಿ.ಯೆಲ್ಲಿ ಅರಣ್ಯ ಭೂಮಿ ಎಂದಿದ್ದನ್ನು ಸರ್ಕಾರ ಎಂದು ಏಕಪಕ್ಷೀಯವಾಗಿ ಎಂ.ಜಿ. ಶಿವಣ್ಣ ಪರಿವರ್ತನೆ ಮಾಡಿರುವುದು ಕಾನೂನಿನ ರೀತಿಯ ಅಪರಾಧವಾಗಿರುತ್ತದೆ. ಇದು ಸರ್ಕಾರಿ ಅಧಿಕಾರಿ ಎಸಗಿರುವ ನಂಬಿಕೆ ದ್ರೋಹ ಮತ್ತು ಕರ್ತವ್ಯ ಲೋಪ ಮತ್ತು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದ ಉಲ್ಲಂಘನೆಯೂ ಆಗಿರುತ್ತದೆ. ಜೊತೆಗೆ ಕಂದಾಯ ಇಲಾಖೆಯೇ ದಿನಾಂಕ 3.09.2018ರಂದು ಹೊರಡಿಸಿರುವ ಸುತ್ತೋಲೆ ಸಂಖ್ಯೆ ಆರ್.ಡಿ. 219 ಟಿಆರ್.ಎಂ. 2018ರಂತೆ ಅರಣ್ಯಾಧಿಕಾರಿಗಳ ಅಭಿಪ್ರಾಯವನ್ನೂ ಪಡೆದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಫ್.ಐ.ಆರ್. ದಾಖಲಿಸುವಂತಹ ಕಠಿಣ ಕ್ರಮಕ್ಕೆ ಮುಂದಾಗಿದೆ.

ಎಚ್ಚರಿಕೆ ಗಂಟೆ: 

ಉಪ ಜಿಲ್ಲಾಧಿಕಾರಿ ವಿರುದ್ಧ ಅರಣ್ಯ ಇಲಾಖೆ ದಾಖಲು ಮಾಡಿರುವ ಈ ಎಫ್.ಐ.ಆರ್. ಮನಸೋಇಚ್ಛೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿ, ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಡುತ್ತಿರುವ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಜೊತೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರಿಗೆ ನಡುಕ ಹುಟ್ಟಿಸಿದೆ.  ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಈ ದಿಟ್ಟ ಕ್ರಮಕ್ಕೆ ಪರಿಸರವಾದಿಗಳು, ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios