ಬೆಂಗಳೂರು(ಡಿ.10): ಹಸಿ ತ್ಯಾಜ್ಯವನ್ನು ವಿಂಗಡಿಸಿ ಕಡ್ಡಾಯವಾಗಿ ಪ್ರತ್ಯೇಕ ಕಸದ ಬುಟ್ಟಿಯಲ್ಲಿಯೇ ಹಾಕಿ ಪೌರಕಾರ್ಮಿಕರಿಗೆ ನೀಡದೇ ನಿಯಮ ಉಲ್ಲಂಘಿಸಿದರೆ 500 ರಿಂದ 1 ಸಾವಿರ ದಂಡ ವಿಧಿಸುವ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪಾಲಿಕೆ ನಿರ್ಧರಿಸಿದೆ.

ಸಾರ್ವಜನಿಕರು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕಿಸಿ ಬಿಬಿಎಂಪಿ ಪೌರಕಾರ್ಮಿಕರಿಗೆ ನೀಡುವುದು ಕಡ್ಡಾಯ. ಹಸಿ ಕಸವನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿ ಕೊಡುವುದು ಘನತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆಯಾಗಲಿದೆ. ಹಾಗಾಗಿ, ಇನ್ನು ಮುಂದೆ ಸಾರ್ವಜನಿಕರು ಕಡ್ಡಾಯವಾಗಿ ಹಸಿ ಕಸವನ್ನು ಮರು ಬಳಕೆಯ ಕಸ ಡಬ್ಬಿಗಳಲ್ಲಿ ಹಾಕಿ ಕೊಡಬೇಕು. ಇಲ್ಲದಿದ್ದರೆ ಮೊದಲ ಬಾರಿ ಉಲ್ಲಂಘನೆಗೆ 500, ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ನಿಯಮ ಉಲ್ಲಂಘನೆಗೆ 1 ಸಾವಿರ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ಹಸಿ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ನೀಡಿದರೆ ಪ್ಲಾಸ್ಟಿಕ್‌ ಚೀಲ ತ್ಯಾಜ್ಯದೊಂದಿಗೆ ಮಿಶ್ರಣವಾಗಲಿದೆ, ಕಸ ವಿಂಗಡಣೆ ಸಂಪೂರ್ಣಗೊಳ್ಳುವುದಿಲ್ಲ. ಹೀಗಾಗಿ, ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ನೀಡುವ ತ್ಯಾಜ್ಯ ಪಡೆಯದಂತೆ ಬಿಬಿಎಂಪಿ ಪೌರಕಾರ್ಮಿಕರಿಗೆ ಸೂಚಿಸಲಾಗಿದೆ.

ಬಿಬಿಎಂಪಿ: ಬಡವರಿಗೆ ಶೇ.50 ಕಸ ಶುಲ್ಕ ರಿಯಾಯಿತಿ

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ನಗರದಲ್ಲಿ ಈಗಾಗಲೇ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶೇ.100ರಷ್ಟು ಪ್ರತ್ಯೇಕಿಸಿದ ತ್ಯಾಜ್ಯ ಸಂಗ್ರಹಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬಿಬಿಎಂಪಿಯ ಅನೇಕ ವಾರ್ಡ್‌ಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಿಸಲು ಸಾರ್ವಜನಿಕರಿಗೆ ಹಸಿರು ಮತ್ತು ನೀಲಿ ಬಣ್ಣದ ಬುಟ್ಟಿಗಳನ್ನು ಪಾಲಿಕೆಯಿಂದ ವಿತರಿಸಲಾಗಿದೆ. ಅದೇ ರೀತಿ ಸ್ಯಾನಿಟರಿ ತ್ಯಾಜ್ಯವನ್ನು ಪೇಪರ್‌ನಲ್ಲಿ ಸುತ್ತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಏಕಾಏಕಿ ದಂಡ ಇಲ್ಲ

ಏಕಾಏಕಿ ಯಾರಿಗೂ ದಂಡ ವಿಧಿಸುವುದಿಲ್ಲ, ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಸಿ ತ್ಯಾಜ್ಯ ನೀಡುವವರಿಗೆ ಮೊದಲ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ತದ ನಂತರ ಕಸ ಪಡೆಯುವುದಿಲ್ಲ. ಎಚ್ಚೆತ್ತುಕೊಳ್ಳದಿದ್ದರೆ ದಂಡ ವಿಧಿಸಲಾಗುವುದು ಎಂದು ವಿಶೇಷ ಆಯುಕ್ತ ಡಿ.ರಂದೀಪ್‌ ಸ್ಪಷ್ಟಪಡಿಸಿದ್ದಾರೆ.