ಬಿಬಿಎಂಪಿ: ಬಡವರಿಗೆ ಶೇ.50 ಕಸ ಶುಲ್ಕ ರಿಯಾಯಿತಿ
ಜನವರಿಯಿಂದ ಘನತ್ಯಾಜ್ಯ ಶುಲ್ಕ ಜಾರಿ| ಮಾಸಿಕ 200ಗಿಂತ ಕಡಿಮೆ ವಿದ್ಯುತ್ ಬಿಲ್ ಕಟ್ಟುವವರಿಗೆ 100 ಕಸ ಶುಲ್ಕ| 500ಗಿಂತ ಹೆಚ್ಚು ವಿದ್ಯುತ್ ಬಿಲ್ ಪಾವತಿದಾರರಿಗೆ 200 ಕಸ ಶುಲ್ಕ| 200ರಿಂದ 500 ಒಳಗೆ ವಿದ್ಯುತ್ ಬಿಲ್ ಕಟ್ಟುವವರಿಗೆ ರಿಯಾಯಿತಿ ನಿರ್ಧರಿಸಿಲ್ಲ| ವಾಣಿಜ್ಯ ಕಟ್ಟಡಗಳಿಗೆ 500 ಕಸ ಶುಲ್ಕ ವಿಧಿಸಲು ಬಿಬಿಎಂಪಿ ನಿರ್ಧಾರ|
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ನ.29): ಬರುವ ಜನವರಿಯಿಂದ ಮಾಸಿಕ 200 ಘನತ್ಯಾಜ್ಯ ಸೇವಾ ಶುಲ್ಕವನ್ನು ಬೆಸ್ಕಾಂ ಬಿಲ್‌ನೊಂದಿಗೆ ವಸೂಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಬಿಎಂಪಿ, ಮಾಸಿಕ 200 ಗಿಂತ ಕಡಿಮೆ ವಿದ್ಯುತ್ ಬಿಲ್ ಪಾವತಿದಾರರಿಗೆ ಶೇಕಡ 50ರಷ್ಟು ಶುಲ್ಕ ರಿಯಾಯಿತಿ ನೀಡಲು ತೀರ್ಮಾನಿಸಿದೆ.
ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಬಳಲುತ್ತಿರುವ ನಗರದ ನಾಗರಿಕರು ಸೇರಿದಂತೆ ತ್ಯಾಜ್ಯ ಉತ್ಪಾದಕರರಾದ ಹೊಟೇಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳಿಂದ ಹೊಸ ವರ್ಷದಿಂದ (ಜನವರಿ) ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಘನತ್ಯಾಜ್ಯ ಸೇವಾ ಶುಲ್ಕ ವಿಧಿಸಲಿದೆ. ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ ಅನ್ವಯ ವಸತಿ ಕಟ್ಟಡಗಳಿಂದ ಗರಿಷ್ಠ 200 ಹಾಗೂ ವಾಣಿಜ್ಯ ಬಳಕೆದಾರರಿಂದ 500 ಶುಲ್ಕ ಸಂಗ್ರಹಿಸಲು ತೀರ್ಮಾನಿಸಿದೆ.
ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಮಾಸಿಕ .200 ಗಿಂತ ವಿದ್ಯುತ್ ಬಿಲ್ ಪಾವತಿದಾರರಿಗೆ 100 ಮಾತ್ರ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ. ಮಾಸಿಕ 500 ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿದಾರರಿಗೆ 200 ಶುಲ್ಕ ವಿಧಿಸುವುದು ಅಂತಿಮಗೊಂಡಿದೆ. ಮಾಸಿಕ 200-500 ಒಳಗೆ ವಿದ್ಯುತ್ ಬಿಲ್ ಪಾವತಿದಾರರಿಗೆ ಎಷ್ಟುರಿಯಾಯಿತಿ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ವಿದ್ಯುತ್ ದರ ಏರಿಕೆಯ ಮಧ್ಯೆ ಕಾದಿದೆ ಮತ್ತೊಂದು ಶಾಕ್...!
ಖಾಲಿ ಮನೆ, ಅಪಾರ್ಟ್‌ಮೆಂಟ್‌ಗೆ ವಿನಾಯಿತಿ?
ಖಾಲಿ ಇರುವ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯುತ್ ಬಳಕೆ ಆಧಾರದ ಮೇಲೆ ಶುಲ್ಕ ರಿಯಾಯಿತಿಗೆ ಚರ್ಚೆ ನಡೆಸಲಾಗುತ್ತಿದೆ. ಎಷ್ಟು ರಿಯಾಯಿತಿ ನೀಡಬೇಕು ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಶುಲ್ಕ ಸಂಗ್ರಹಕ್ಕೆ ಬೆಸ್ಕಾಂ ಸಮ್ಮತಿ
ನಗರದಲ್ಲಿ 46 ಲಕ್ಷ ವಸತಿ ಹಾಗೂ 6.5 ಲಕ್ಷ ವಾಣಿಜ್ಯ ಕಟ್ಟಡಗಳು ವಿದ್ಯುತ್ ಸಂಪರ್ಕ ಪಡೆದಿದ್ದು, ವಿದ್ಯುತ್ ಬಿಲ್‌ನೊಂದಿಗೆ ಸೇವಾ ಶುಲ್ಕ ವಸೂಲಿಗೆ ಬೆಸ್ಕಾಂ ಒಪ್ಪಿಗೆ ನೀಡಿದೆ. ಬಿಬಿಎಂಪಿಗೆ ಮಾಸಿಕ 50 ಕೋಟಿ ಶುಲ್ಕ ಸಂಗ್ರಹವಾಗುವ ನಿರೀಕ್ಷೆ ಇದೆ. ಬಿಲ್ ಸಂಗ್ರಹಿಸಿದ್ದಕ್ಕೆ ಬೆಸ್ಕಾಂಗೆ ಬಿಬಿಎಂಪಿ ಶೇ.5ರಷ್ಟು ಸೇವಾ ಶುಲ್ಕ ನೀಡಲಿದೆ. ಪ್ರತಿ ತಿಂಗಳು ಘನತ್ಯಾಜ್ಯ ಶುಲ್ಕದ ಸಂಗ್ರಹ ಮತ್ತು ಬಾಕಿದಾರರ ವಿವರವನ್ನು ಬೆಸ್ಕಾಂ ಬಿಬಿಎಂಪಿಯ ಅಧಿಕಾರಿಗಳಿಗೆ ನೀಡಲಿದ್ದಾರೆ. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಮಾರ್ಷಲ್‌ಗಳು ಮನೆಗಳಿಗೆ ತೆರಳಿ ಶುಲ್ಕ ವಸೂಲು ಮಾಡಲಿದ್ದಾರೆ. ಶುಲ್ಕ ಪಾವತಿಸದಿದ್ದರೆ ತ್ಯಾಜ್ಯ ಸಂಗ್ರಹಣೆ ನಿಲ್ಲಿಸಲಾಗುತ್ತದೆ.
ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಕಡಿತ ಇಲ್ಲ
ಪ್ರತಿ ತಿಂಗಳು ಸಾರ್ವಜನಿಕರಿಗೆ ವಿದ್ಯುತ್ ಬಿಲ್ ಹಾಗೂ ಘನತ್ಯಾಜ್ಯ ಶುಲ್ಕ ಪ್ರತ್ಯೇಕವಾಗಿ ಬರಲಿದೆ. ಗ್ರಾಹಕರು ವಿದ್ಯುತ್ ಬಿಲ್ ಮಾತ್ರ ಪಾವತಿಸಿ ಘನತ್ಯಾಜ್ಯ ಸೇವಾ ಶುಲ್ಕ ಬಾಕಿ ಉಳಿಸಿಕೊಂಡರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರದ ಘನತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಗೆ ವಾರ್ಷಿಕ ಒಂದು ಸಾವಿರ ಕೋಟಿ ರುಪಾಯಿಗೂ ಅಧಿಕ ವೆಚ್ಚ ಮಾಡಲಾಗುತ್ತಿದ್ದು, ನಿರ್ವಹಣೆ ಹೊರೆಯಾಗುತ್ತಿದೆ. ಸಾರ್ವಜನಿಕರಿಗೆ ಹೆಚ್ಚು ಹೊರೆ ಆಗದಂತೆ ಮಾಸಿಕ ಸೇವಾ ಶುಲ್ಕವನ್ನು ಬೆಸ್ಕಾಂ ಸಹಯೋಗದಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಯಾರಿಗೂ ಪೂರ್ಣ ಪ್ರಮಾಣದ ರಿಯಾಯಿತಿ ಇರುವುದಿಲ್ಲ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದಿನೇನಿ ತಿಳಿಸಿದ್ದಾರೆ.