ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದರಿಂದ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಬಿ.ಎಸ್‌. ಭರತ್‌, ಟಿ.ಎನ್‌. ತರಕಾರಿ ಹರೀಶ್‌ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, ಅಂತಿಮವಾಗಿ ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ತಿಪಟೂರು: ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದರಿಂದ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಬಿ.ಎಸ್‌. ಭರತ್‌, ಟಿ.ಎನ್‌. ತರಕಾರಿ ಹರೀಶ್‌ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, ಅಂತಿಮವಾಗಿ ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕಾಂಗ್ರೆಸ್‌ನಿಂದ ಶಾಸಕ ಕೆ. ಷಡಕ್ಷರಿ, ಜೆಡಿಎಸ್‌ನಿಂದ ಕೆ.ಟಿ. ಶಾಂತಕುಮಾರ್‌, ಬಿಜೆಪಿಯಿಂದ ಸಚಿವ ಬಿ.ಸಿ. ನಾಗೇಶ್‌, ಕೆಆರ್‌ಎಸ್‌ ಪಕ್ಷದಿಂದ ಗಂಗಾಧರಯ್ಯ ಕೆ.ಎಸ್‌., ಆಮ್‌ ಆದ್ಮಿ ಪಕ್ಷದಿಂದ ಟಿ.ಎಸ್‌. ಚಂದ್ರಶೇಖರ್‌, ಕನ್ನಡ ದೇಶ ಪಕ್ಷದಿಂದ ಅರುಣಲಿಂಗ, ಭಾರತೀಯ ಬಹುಜನ ಕ್ರಾಂತಿ ದಳದಿಂದ ಆರ್‌ಎಂ. ಮಲ್ಲಿಕಾರ್ಜುನಸ್ವಾಮಿ, ಯುಪಿಟಿ ಯಿಂದ ಗಿರೀಶ್‌, ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್‌. ವಿಜಯಕುಮಾರ್‌, ಕುಮಾರಸ್ವಾಮಿ ಟಿ.ಎನ್‌, ಅನಂತಶಯನ ಎ.ಟಿ ಹಾಗೂ ಎಂ. ರವಿ ಇವರು ಚುನಾವಣಾ ಕಣದಲ್ಲಿದ್ದಾರೆ.

23 ಮಂದಿ ನಾಮಪತ್ರ ವಾಪಸ್‌

ತುಮಕೂರು: ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ಜಿಲ್ಲೆಯಲ್ಲಿ 23 ಮಂದಿ ವಾಪಸ್‌ ಪಡೆದಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಕಣದಲ್ಲಿ 131 ಮಂದಿ ಇದ್ದಾರೆ. ಈ ಪೈಕಿ 128 ಪುರುಷರು ಮತ್ತು 3 ಮಹಿಳೆಯರು ಸೇರಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 13, ತಿಪಟೂರಿನಲ್ಲಿ 12, ತುರುವೇಕೆರೆಯಲ್ಲಿ 11, ಕುಣಿಗಲ್‌ನಲ್ಲಿ 8, ತುಮಕೂರು ನಗರದಲ್ಲಿ 14, ತುಮಕೂರು ಗ್ರಾಮಾಂತರದಲ್ಲಿ 13, ಕೊರಟಗೆರೆ 12, ಗುಬ್ಬಿ 10, ಶಿರಾ 15, ಪಾವಗಡ 11, ಮಧುಗಿರಿಯಲ್ಲಿ 12 ಮಂದಿ ಕಣದಲ್ಲಿದ್ದಾರೆ.

ರಾಜೇಶ್‌ ಗೌಡ ಉಮೇದುವಾರಿಕೆ ವಾಪಸ್‌

ಕುಣಿಗಲ್‌ : ಬಿಜೆಪಿ ಬಂಡಾಯ ಅಭ್ಯರ್ಥಿ ಎಚ್‌.ಡಿ.ರಾಜೇಶ್‌ ಗೌಡ ಉಮೇದುವಾರಿಕೆ ಹಿಂಪಡೆದು ಅಧಿಕೃತ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬಿಜೆಪಿ ಅಧ್ಯಕ್ಷರು ಹಾಗೂ ಪ್ರಮುಖ ರಾಜ್ಯ ಮುಖಂಡರ ಸೂಚನೆಯಂತೆ ನಾಮಪತ್ರ ಹಿಂಪಡೆದಿರುವುದಾಗಿ ಹೇಳಿಕೆ ನೀಡಿ ನಮ್ಮ ಕಾರ್ಯಕರ್ತರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಅವರು ತಿಳಿಸಿದರು ಎಂದರು.

ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನಾಗಿದ್ದೇನೆ. ಪಕ್ಷದ ಮೇಲಿರುವ ಗೌರವದಿಂದಾಗಿ ಹಾಗೂ ಈ ಬಾರಿ ತಾಲೂಕಿನಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿಯಿಂದ ಚುನಾವಣ ಕಣದಿಂದ ನಾನು ಹಿಂದೆ ಸರಿದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ನಾಗೇಂದ್ರ ಶರ್ಮ, ನಟರಾಜು, ರಮೇಶ್‌, ಸತೀಶ್‌ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು