ಉಪ್ಪಿನಂಗಡಿ(ಡಿ.31): ಪುತ್ತೂರು ಮತ ಎಣಿಕಾ ಕೇಂದ್ರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಚುನಾವಣಾಧಿಕಾರಿಗಳು ತೋರಿದ ಸಣ್ಣತನದ ನಡತೆಯಿಂದಾಗಿ ಊಟಕ್ಕಾಗಿ ಮಾತಿನ ಚಕಮಕಿಯುಂಟಾದ ಘಟನೆ ನಡೆದಿದೆ.

ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣಾ ಮತ ಎಣಿಕೆ ಕಾರ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತಿನಿಂದಾಗಿ ಒಳಗಿದ್ದವರು ಹೊರಗಡೆ ಹೋಗುವಂತ್ತಿರಲಿಲ್ಲ. ಮೊದಲೆರಡು ವಾರ್ಡ್‌ಗಳ ಮತ ಎಣಿಕೆ ಪ್ರಕ್ರಿಯೆಯೇ ಬೆಳಗ್ಗೆ ಪ್ರಾರಂಭವಾದದ್ದು, ಮಧ್ಯಾಹ್ನ ವೇಳೆ ಅಂತ್ಯಗೊಂಡಿತ್ತು. ಈ ವೇಳೆ ಭೋಜನದ ಸಮಯವೂ ಆಗಿದ್ದ ಕಾರಣ ಚುನಾವಣಾಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ, ಸಂಬಂಧಿತ ಪಾಸ್‌ ಕಾಣಿಸಿ ಭೋಜನ ಸ್ವೀಕರಿಸಬೇಕೆಂದೂ ಧ್ವನಿ ವರ್ಧಕದಲ್ಲಿ ತಿಳಿಸುತ್ತಿದ್ದರು. ಈ ವೇಳೆ ಚುನಾವಣಾ ಕರ್ತವ್ಯದ ಸಿಬ್ಬಂದಿ ಜೊತೆಗೆ ಮಾಧ್ಯಮದ ಮಂದಿಗೂ ಊಟ ಲಭಿಸಿತ್ತಾದರೂ ಸ್ಥಳದಲ್ಲಿದ್ದ ಚುನಾವಣಾ ಅಭ್ಯರ್ಥಿಗಳು ಮತ್ತು ಎಣಿಕೆಯ ಏಜೆಂಟರಿಗೆ ಊಟದ ವ್ಯವಸ್ಥೆ ಇರಲಿಲ್ಲ.

ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾ ಸದ್ಯಕ್ಕೆ ಸ್ಟಾಪ್

ಈ ಮಧ್ಯೆ ಹಸಿವು ತಾಳಲಾರದೆ ಸರತಿ ಸಾಲಿನಲ್ಲಿ ನಿಂತ ವ್ಯಕ್ತಿಯೊಬ್ಬರಿಗೆ ಊಟ ಬಡಿಸಲು ನಿರಾಕರಿಸಿದ ಘಟನೆಯೂ ನಡೆಯಿತು. ಇದನ್ನು ಕಂಡು ಕೆರಳಿದ ಸಾಮಾಜಿಕ ಕಾರ್ಯಕರ್ತ ಅರುಣ್‌ ಕುಮಾರ್‌ ಪುತ್ತಿಲ, ಸಾರ್ವಜನಿಕ ಸ್ಥಳದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದಲ್ಲದೆ ಹಸಿದು ಬಂದವರಿಗೆ ಊಟ ನೀಡುವುದಿಲ್ಲ ಎಂದು ಅಮಾನುಷ ನಡೆ ಪ್ರದರ್ಶಿಸುವುದನ್ನು ಬಲವಾಗಿ ಆಕ್ಷೇಪಿಸಿದರು. ಆಡಳಿತಕ್ಕೆ ಇಲ್ಲಿರುವ ಜನರಿಗೆ ಅನ್ನ ನೀಡುವ ಸಾಮರ್ಥ್ಯ ಇಲ್ಲದಿದ್ದರೆ ತಿಳಿಸಿ, ನಾವೇ ಊಟದ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಸವಾಲು ಹಾಕಿದರು.

ಊಟದ ಕಾರಣಕ್ಕೆ ಸಂಘರ್ಷವೇರ್ಪಟ್ಟು ವಿಲಕ್ಷಣ ಪರಿಸ್ಥಿತಿ ನಿರ್ಮಾಣವಾದ ಬಳಿಕ ತಪ್ಪು ತಿದ್ದಿಕೊಂಡ ಅಧಿಕಾರಿಗಳು ಬಳಿಕ ಅಲ್ಲಿದ್ದವರೆಲ್ಲರಿಗೂ ಅನ್ನ ನೀಡಲು ಮುಂದಾದರು. ಬೆಳಗ್ಗೆ 8 ಗಂಟೆಗೆ ಮತ ಎಣಿಕಾ ಕೇಂದ್ರವನ್ನು ಪ್ರವೇಶಿಸಿದ ಮಂದಿಗೆ ಮತ ಎಣಿಕೆ ಪೂರ್ಣಗೊಳ್ಳುವ ವರೆಗೆ ಹೊರಗಡೆ ಹೋಗುವಂತ್ತಿಲ್ಲ. ಹೋದರೆ ಹಿಂತಿರುಗಿ ಬರುವಂತ್ತಿಲ್ಲ.

ಬ್ರಿಟನ್‌ನಿಂದ ಬಂದು‌ ನಾಪತ್ತೆಯಾಗಿದ್ದ 202 ಮಂದಿಯೂ ಪತ್ತೆ

ಈ ಸುದೀರ್ಘ ಸಮಯದಲ್ಲಿ ಅವರೆಲ್ಲರೂ ಹಸಿವೆಯಿಂದ ಇರುವುದನ್ನೂ ಮನಗಂಡೂ ಅವರ ಕಣ್ಣೇದುರಿಗೇ ಚುನಾವಣಾ ಕರ್ತವ್ಯದ ಮಂದಿಗೆ ಮಾತ್ರ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರುಣ್‌ ಕುಮಾರ್‌ ಪುತ್ತಿಲ ಮಧ್ಯ ಪ್ರವೇಶಿಸುವ ಮುನ್ನ ಚುನಾವಣಾ ಏಜೆಂಟ್‌ ಓರ್ವ ಸ್ಥಳದಲ್ಲಿದ್ದ ಪತ್ರಕರ್ತರೊಬ್ಬರಲ್ಲಿ 200 ರು. ಬೇಕಾದರೂ ಕೊಡುತ್ತೇನೆ ಒಂದು ಪ್ಲೇಟ್‌ ಊಟ ಕೊಡಿಸುವಿರಾ ಎಂದು ಯಾಚಿಸುತ್ತಿದ್ದದ್ದು ಊಟದ ವಿಚಾರದಲ್ಲಿ ಅಧಿಕಾರಿಗಳು ತೋರಿದ ಸಣ್ಣತನದ ಗಂಭೀರತೆಯನ್ನು ಸಾಕ್ಷೀಕರಿಸುವಂತಿತ್ತು.