ಬ್ರಿಟನ್‌ನಿಂದ ನಗರಕ್ಕೆ ಬಂದು ನಾಪತ್ತೆ ಆಗಿದ್ದ ಎಲ್ಲರ ಪತ್ತೆ | ಎಲ್ಲರಿಗೂ ಕೋವಿಡ್ ಟೆಸ್ಟ್: ಬಿಬಿಎಂಪಿ ಅಧಿಕಾರಿ ವಿಜೇಂದ್ರ
ಬೆಂಗಳೂರು(ಡಿ.31): ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಆಗಮಿಸಿ ನಾಪತ್ತೆಯಾಗಿದ್ದ 202 ಮಂದಿಯನ್ನೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪತ್ತೆ ಮಾಡಲಾಗಿದೆ. ಈ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ವಿಜೇಂದ್ರ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.1ರಿಂದ 21ರ ವರೆಗೆ ಬ್ರಿಟನ್‌ನಿಂದ ಬೆಂಗಳೂರಿಗೆ ಬಂದ 1,456 ಮಂದಿ ಪೈಕಿ 1,290 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 202 ಮಂದಿ ನಾಪತ್ತೆಯಾಗಿದ್ದರು. ಈಗ ಅವರನ್ನು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪತ್ತೆ ಮಾಡಲಾಗಿದ್ದು, ಎಲ್ಲರ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ತನಿಖೆಯ ಬಳಿಕ ಕ್ರಮ:
ಪತ್ತೆಯಾಗಿರುವ 202 ಮಂದಿಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಪೊಲೀಸ್ ಇಲಾಖೆಯು ಪಾಲಿಕೆಗೆ ನೀಡಲಾಗಿದೆ. ಸದ್ಯ ಇವರೆಲ್ಲರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಾಗಿರುವುದು ನಮ್ಮ ಆದ್ಯ ಗುರಿ. ತದನಂತರ ಅವರು ಉದ್ದೇಶ ಪೂರ್ವಕವಾಗಿ ನಾಪತ್ತೆಯಾಗಿದ್ದರಾ ಎಂಬುದನ್ನು ತನಿಖೆ ನಡೆಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸರ್ಕಾರ ನೇಮಿಸಿದ್ದ ಅಧಿಕಾರಿಯನ್ನೇ ವರ್ಗಾಯಿಸಿದ ಕುಲಪತಿ!
ಬ್ರಿಟನ್‌ನಿಂದ ವಾಪಾಸ್ ಬಂದವರ ಪೈಕಿ 17 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸುವ ಕಾರ್ಯ ಮುಂದುವರೆದಿದೆ. ಜತೆಗೆ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ನಿಗಾ ವಹಿಸಲು ವಲಯ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದರು.
ಹೊಸ ಪ್ರಕರಣ ಇಲ್ಲ:
ಬ್ರಿಟನ್‌ನಿಂದ ಆಗಮಿಸಿದ 17 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಪೈಕಿ ವಸಂತಪುರದ ತಾಯಿ-ಮಗಳು ಹಾಗೂ ಜೆ.ಪಿ.ನಗರದ ವ್ಯಕ್ತಿಯಲ್ಲಿ ರೂಪಾಂತರಗೊಂಡ ಸೋಂಕು ಕಾಣಿಸಿಕೊಂಡಿತ್ತು. ಅದಾದ ನಂತರ ನಗರದಲ್ಲಿ ಬೇರೆ ಯಾವುದೇ ಹೊಸದಾಗಿ ರೂಪಾಂತರಗೊಂಡ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Dec 31, 2020, 7:27 AM IST