Chikkamagaluru: ಪೂಜೆ ವಿಚಾರವಾಗಿ ದತ್ತಪೀಠದಲ್ಲಿ ಅರ್ಚಕರು ಮತ್ತು ಮೌಲ್ವಿಗಳ ಮಧ್ಯೆ ಕಿರಿಕ್
ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಆಡಳಿತ ಸಮಿತಿ ರಚಿಸಿ ವಾರವೂ ಕಳೆದಿಲ್ಲ. ಗುಹೆಯಲ್ಲಾಗ್ಲೇ ಅರ್ಚಕರು-ಮೌಲ್ವಿಗಳ ಮಧ್ಯೆ ಕಿರಿಕ್ ಉಂಟಾಗಿದೆ. ಮೈಲಿಗೆ ಆಗುತ್ತೆ ಎಂದು ಅರ್ಚಕರು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.10): ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಆಡಳಿತ ಸಮಿತಿ ರಚಿಸಿ ವಾರವೂ ಕಳೆದಿಲ್ಲ. ಗುಹೆಯಲ್ಲಾಗ್ಲೇ ಅರ್ಚಕರು-ಮೌಲ್ವಿಗಳ ಮಧ್ಯೆ ಕಿರಿಕ್ ಉಂಟಾಗಿದೆ. ಮೈಲಿಗೆ ಆಗುತ್ತೆ ಎಂದು ಅರ್ಚಕರು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡ್ತಿಲ್ವಂತೆ. ಸರ್ಕಾರ ಅರ್ಚಕರನ್ನ ನೇಮಿಸಿದ್ದು 3 ದಿನಕಷ್ಟೆ, ಕೂಡಲೇ ಅರ್ಚಕರ ನೇಮಕವನ್ನ ರದ್ದು ಮಾಡ್ಬೇಕು ಅಂತ ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದ್ರೆ, ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯ ಅಲ್ಲಿ ಏನೂ ಆಗಿಲ್ಲ. ಪ್ರಚಾರಕ್ಕೆ ಹೀಗೆಲ್ಲಾ ಮಾಡ್ತಾರೆ ಅಂತಿದ್ದಾರೆ. ಸರ್ಕಾರ ಮುಂಜಾಗೃತ ಕ್ರಮವಾಗಿ ಅರ್ಚಕರು, ಆಡಳಿತ ಮಂಡಳಿಯ ಸದಸ್ಯನಿಗೆ ಗನ್ ಮ್ಯಾನ್ ಕೊಟ್ಟಿದೆ. ಕಾಫಿನಾಡ ದತ್ತಪೀಠದ ವಿವಾದ ಸದ್ಯಕ್ಕೇನು ತಣ್ಣಗಾಗುವಂತೆ ಕಾಣ್ತಿಲ್ಲ.
ಕೋಮು ಸೌಹಾರ್ದ ವೇದಿಕೆ ವಿವಾದದ ಕಿಡಿ ?
47 ವರ್ಷಗಳ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಹಿಂದೂ ಸಮುದಾಯ ಖುಷಿಯಾಗಿತ್ತು. ಆದ್ರೆ, ಮುಸ್ಲಿಂ ಸಮುದಾಯ ಇದು ಕಾನೂನು ಉಲ್ಲಂಘನೆ. ಏಕಸ್ವಾಮ್ಯ ನಿರ್ಧಾರ ಅಂತೆಲ್ಲಾ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಈ ಮಧ್ಯೆ ಹೊಸದೊಂದು ವಿವಾದ ತಲೆದೂರಿದ್ದು, ದತ್ತಪೀಠದಲ್ಲಿ ಅರ್ಚಕರು ಮೈಲಿಗೆ ಆಗುತ್ತೆ ಎಂದು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡುತ್ತಿಲ್ಲ ಎಂದು ಕೋಮು ಸೌಹಾರ್ದ ವೇದಿಕೆ ಆರೋಪಿಸಿದೆ.
ಆಡಳಿತ ಮಂಡಳಿಯ ಎಂಟು ಜನ ಸದಸ್ಯರಲ್ಲಿ ನಾಮಕಾವಸ್ಥೆಗೆ ಕೇವಲ ಒಬ್ಬ ಮುಸ್ಲಿಂ ಸದಸ್ಯನಿದ್ದಾನೆ ಅಷ್ಟೆ. ಆತ ಕೂಡ 25-30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತ ಅವನನ್ನ ಸೇರಿಸಿಕೊಂಡಿದ್ದಾರೆ. ಕೋರ್ಟ್ ಹೇಳಿದ್ದು ದತ್ತಪೀಠದ ಹೊರಾಂಡದಲ್ಲಿ ಪೂಜೆ ಮಾಡ್ಬೇಕು ಎಂದು. ಆದ್ರೆ, ಗುಹೆಯೊಳಗೆ ಪೂಜೆ ಮಾಡಿದ್ದಾರೆ. ಜೊತೆಗೆ, ಕಲ್ಲಪ್ಪ ಹಂಡೀಭಾಗ್ ಆತ್ಮಹತ್ಯೆ ಪ್ರಕರಣ ಮುಖ್ಯ ಆರೋಪಿ ಖಾಂಡ್ಯ ಪ್ರವೀಣ್ ಕೂಡ ಪೂಜೆ ಮಾಡಿದ್ದಾನೆ. ಡಿಸಿಗೆ ದೂರು ನೀಡಿದ್ರೆ, ಈ ಸಮಿತಿಗೂ ನನಗೂ ಯಾವುದೇ ಸಂಬಂಧವೇ ಇಲ್ಲ ಅಂತಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಹೀಗೆ ಹೇಳ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಲ್ಲಿರುವ ಅರ್ಚಕರನ್ನ ವಾಪಸ್ ಕಳುಹಿಸಬೇಕು ಎಂದು ಕೋಮು ಸೌಹಾರ್ದ ವೇದಿಕೆಯ ಮುಖಂಡ ಗೌಸ್ ಮೊನಿನುದ್ದೀನ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರಚಾರಕ್ಕಾಗಿ ಹೇಳಿಕೆ ಸಮಿತಿ ಸದಸ್ಯರಿಂದ ತಿರುಗೇಟು
ದತ್ತಪೀಠದ ಪೂಜೆ ವಿಚಾರದಲ್ಲಿ ಕೋರ್ಟ್ ಹೇಳಿದ್ದೇ ಒಂದು. ಜಿಲ್ಲಾಡಳಿತ ಮಾಡ್ತಿರೋದೆ ಒಂದು. ಕೋರ್ಟ್ ಹೇಳಿದ್ದು ಕೇವಲ ಮೂರು ದಿನಕ್ಕೆ ಮಾತ್ರ ಅರ್ಚಕರು ಪೂಜೆ ಮಾಡ್ಬೇಕು ಎಂದು. ಆದರೆ, ದತ್ತಜಯಂತಿ ಮುಗಿದರೂ ಜಿಲ್ಲಾಧಿಕಾರಿ ಅರ್ಚಕರನ್ನ ಮುಂದುವರೆಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಇಬ್ಬರು ಹಿಂದೂ ಅರ್ಚಕರಿಗೆ ಗನ್ ಮ್ಯಾನ್ ನೀಡಿದ್ದು, ಆಡಳಿತ ಮಂಡಳಿಯ ಓರ್ವ ಮುಸ್ಲಿಂ ಸದಸ್ಯನಿಗೆ ಗನ್ ಮ್ಯಾನ್ ಜೊತೆ ಮನೆಗೆ ಒಂದು ಡಿ.ಎ.ಆರ್. ತುಕಡಿಯನ್ನೇ ನಿಯೋಜನೆ ಮಾಡಿದೆ. ಆದರೆ, ಕೋಮು ಸೌಹಾರ್ದ ವೇದಿಕೆ ಆರೋಪವನ್ನ ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
Chikkamagaluru: ದತ್ತಪೀಠದಲ್ಲಿ 2 ದಶಕಗಳ ಬಳಿಕ ಹೋಮ
ಗುಹೆಯೊಳಗೆ ಸಣ್ಣ ಜಾಗ. ಇಬ್ಬರಿಗೂ ಪ್ರತ್ಯೇಕ ಜಾಗವಿದೆ. ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಾರಿಗೂ ಪೂಜೆ ಮಾಡೋದಕ್ಕೆ ಯಾವ ಅಭ್ಯಂತರವಿಲ್ಲ. ಕೇಲವರ ಬೇಕೆಂದೇ ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ದತ್ತಪೀಠದ ಒಳಗೂ-ಹೊರಗೂ ಎಲ್ಲಾ ಸರಿ ಇದೆ. ಶಾಶ್ವತ ಅರ್ಚಕರ ನೇಮಕವಾಗೋವರೆಗೂ ಇದೇ ಅರ್ಚಕರ ಪೂಜೆ ಸಮಿತಿ ತೀರ್ಮಾನಿಸಿದೆ, ಕೆಲವರು ಗೊಂದಲ ಸೃಷ್ಠಿಸ್ತಿದ್ದಾರೆ ಎಂದು ದತ್ತ ಪೀಠದ ಆಡಳಿತ ಮುಂಡಳಿ ಸದಸ್ಯ ಭಾಷಾ ಹೇಳಿಕೆಯನ್ನು ನೀಡಿದ್ದಾರೆ.
ಸೋಮನಾಥ ದೇಗುಲದಂತೆ ದತ್ತಪೀಠ ಪುನರುತ್ಥಾನ: ಶಾಸಕ ಸಿ.ಟಿ.ರವಿ ಹೇಳಿಕೆ
ಒಟ್ಟಾರೆ, ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಖುಷಿ ಹಿಂದೂಗಳು ಖುಷಿ ಪಡುತ್ತಿದ್ದಂತೆ ಎರಡೇ ದಿನಕ್ಕೆ ಕೋಮು ಸೌಹಾರ್ದ ವೇದಿಕೆ ಮೌಲ್ವಿಗಳಿಗೆ ಫತೇಹಿ ಮಾಡೋದಕ್ಕೆ ಬಡ್ತಿಲ್ಲ ಅಂತಿದ್ದಾರೆ. ಒಳಗೆ ಏನಾಯ್ತು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ, ಪೂಜಾ-ಕೈಂಕರ್ಯದಲ್ಲಿ ಡಿಸಿಯೂ ಇದ್ದಿದ್ರಿಂದ ಎಲ್ಲವೂ ಕೋರ್ಟ್ ನಿರ್ದೇಶನದಂತೆಯೇ ನಡೆದಿದೆ ಅಂತಾರೆ ಡಿಸಿ ಕೂಡ. ಆದ್ರೆ, ಕೋಮುಸೌಹಾರ್ದ ವೇದಿಕೆ ಹಾಗೂ ಮುಸ್ಲಿಂ ಮುಖಂಡರು ಕಾನೂನು ಉಲ್ಲಂಘನೆ ಅಂತಿದ್ದಾರೆ. ಅದೇನೆ ಇರ್ಲಿ, ಸರ್ಕಾರ ಕೋರ್ಟ್ ಏನು ಹೇಳಿದ್ಯೋ ಅಷ್ಟನ್ನೇ ಮಾಡಿ ಅನಾವಶ್ಯಕ ಗೊಂದಲಗಳಿಗೆ ತೆರ ಎಳಿಬೇಕು ಅನ್ನೋದು ಕಾಫಿನಾಡಿಗರ ಆಶಯವಾಗಿದೆ.