ಶಿವಮೊಗ್ಗ(ಆ.08): ತಾಲೂಕಿನ ಹಸೂಡಿ ಗ್ರಾಮದಲ್ಲಿ ತುಂಗಾ ಚಾನಲ್‌ ಮತ್ತು ಪಕ್ಕದ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಭಾರೀ ಪ್ರಮಾಣದಲ್ಲಿ ನೀರು ಕೃಷಿ ಜಮೀನಿನ ಮೇಲೆ ಹರಿಯುತ್ತಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹಸೂಡಿ ಗ್ರಾಮದಲ್ಲಿ ತುಂಗಾ ಚಾನಲ್‌ ಹರಿಯುತ್ತಿದೆ. ಈ ಚಾನಲ್‌ನ್ನು ಇತ್ತೀಚೆಗೆ ದುರಸ್ತಿ ನಡೆಸಲಾಗಿತ್ತು. ಇದು ಮುಂದೆ ಹೋಗುತ್ತಿದ್ದಂತೆ ಪಕ್ಕದ ರಸ್ತೆಗೆ ಟಾರ್‌ ಹಾಕುವ ಸಂದರ್ಭದಲ್ಲಿ ಚಾನಲ್‌ನ ಸ್ವಲ್ಪ ಭಾಗಕ್ಕೆ ಕಲ್ಲು ಕಟ್ಟಿರಸ್ತೆಯನ್ನು ಅಗಲಗೊಳಿಸಲಾಗಿದೆ. ಇದರಿಂದಾಗಿ ಚಾನಲ್‌ ಚಿಕ್ಕದಾಗಿ ಬರುವ ನೀರು ಚಾನಲ್‌ನಿಂದ ಹೊರಗೆ ಹರಿಯುತ್ತಿದ್ದರ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ.

ಬುಧವಾರದಿಂದ ಚಾನಲ್‌ ಉಕ್ಕಿ ಕೃಷಿ ಭೂಮಿ ಮೇಲೆ ಹರಿಯುತ್ತಿದ್ದು, ಹತ್ತಾರು ಎಕರೆ ಭೂಮಿಗೆ ಹಾನಿಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಶಾಸಕ ಅಶೋಕ್‌ ನಾಯ್ಕ್‌ ಅವರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸಮಸ್ಯೆಯ ಕುರಿತು ಶಿವಮೊಗ್ಗ ತಹಸೀಲ್ದಾರ್‌ ಗಮನಕ್ಕೂ ತರಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿಂತಿಲ್ಲ ಮಳೆಯಾರ್ಭಟ, ಯಾವ್ಯಾವ ಜಿಲ್ಲೆಗಳಿಗೆ ರಜೆ?