Asianet Suvarna News Asianet Suvarna News

ಕೋವಿಡ್‌ ಸ್ಮಶಾನಕ್ಕೆ ಹೆದರಿ ಗ್ರಾಮವನ್ನೇ ತೊರೆದರು

ಕೋವಿಡ್‌ ಸ್ಮಶಾನ ಮಾಡುತ್ತಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮಗಳಾಗುವ ಭೀತಿಯಲ್ಲಿ ಕಳೆದ ಮೂರು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಊರು ಖಾಲಿ ಮಾಡಿವೆ. 

Fear Of the Covid Crematorium People left the  Place snr
Author
Bengaluru, First Published May 4, 2021, 7:29 AM IST

ಬೆಂಗಳೂರು (ಮೇ.04):  ಕೊರೋನಾ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ವಿಳಂಬ ತಪ್ಪಿಸುವ ಉದ್ದೇಶದಿಂದ ಯಲಹಂಕದ ಮಾವಳ್ಳಿಪುರದಲ್ಲಿ ಬಿಬಿಎಂಪಿಯಿಂದ ನಿರ್ಮಿಸಿರುವ ತಾತ್ಕಾಲಿಕ ಸ್ಮಶಾನದಲ್ಲಿ ಶವ ದಹಿಸಲು ವ್ಯವಸ್ಥೆ ಮಾಡಿರುವುದಕ್ಕೆ ಮಾವಳ್ಳಿಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಕಳೆದ ಆರು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಕೋವಿಡ್‌ ಮೃತದೇಹಗಳ ದಹನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ಪಾಲಿಕೆ ಅಧಿಕಾರಿಗಳು, ಪೊಲೀಸ್‌ ಭದ್ರತೆಯಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಿಸಿದೆ. ಎರಡು ಜಾಗದಲ್ಲಿ 32 ಮೃತದೇಹಗಳನ್ನು ದಹಿಸಲು ವ್ಯವಸ್ಥೆ ಮಾಡಿದೆ. ಕಬ್ಬಿಣದ ಸ್ಟ್ಯಾಂಡ್‌ಗಳು, ಸೌದೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಊರು ತೊರೆದ ಕುಟುಂಬಗಳು:

ಕೋವಿಡ್‌ ಸ್ಮಶಾನ ಮಾಡುತ್ತಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮಗಳಾಗುವ ಭೀತಿಯಲ್ಲಿ ಕಳೆದ ಮೂರು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ಊರು ಖಾಲಿ ಮಾಡಿವೆ. ಬಾಡಿಗೆಗೆ ಇದ್ದವರು ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಜಾಗದಲ್ಲಿ ಕೊರೋನಾ ಸೋಂಕಿತರ ಮೃತದೇಹ ದಹಿಸುವ ಆಲೋಚನೆ ಕೈಬಿಡಬೇಕು. ದಬ್ಬಾಳಿಕೆಯಿಂದ ಇಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದು, ಬಂಧನಕ್ಕೂ ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ನಿರಂತರ ಕೆಲಸದಿಂದ ಹಾಳಾದ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರ : 7 ದಿನ ಬಂದ್‌ .

8 ವರ್ಷಗಳಿಂದ ಖಾಲಿ ಬಿದ್ದಿದ್ದ ಜಾಗ:

ಪಾಲಿಕೆಗೆ ಸೇರಿದ ಈ ಜಾಗದಲ್ಲಿ 2012ರ ವರೆಗೂ ತ್ಯಾಜ್ಯವನ್ನು ಸುರಿಯಲು ಬಳಸಿಕೊಳ್ಳಲಾಗಿತ್ತು. ಸುತ್ತಮುತ್ತಲ ಹಳ್ಳಿಗಳಲ್ಲಿ ರೋಗರುಜಿನಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ನ್ಯಾಯಾಲಯಸದರಿ ಜಾಗದಲ್ಲಿ ತಾಜ್ಯ ಸುರಿಯದಂತೆ ಆದೇಶಿಸಿತ್ತು. ಹೀಗಾಗಿ ಕಳೆದ ಎಂಟು ವರ್ಷಗಳಿಂದ ಈ ಜಾಗ ಖಾಲಿ ಉಳಿದಿತ್ತು. ಇದೀಗ ಕೊರೋನಾ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆ ಸಮಸ್ಯೆಯಾಗಿರುವುದರಿಂದ ಸದರಿ ಜಾಗದಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.

ಕೋರ್ಟ್‌ ಆದೇಶ ಉಲ್ಲಂಘನೆ

ನ್ಯಾಯಾಲಯ ಸದರಿ ಜಾಗದಲ್ಲಿ ಯಾವುದೇ ಪ್ರಾಣಿ ತ್ಯಾಜ್ಯ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯ ಹಾಕದಂತೆ ಆದೇಶದಲ್ಲಿ ಸೂಚಿಸಿದೆ. ಆದರೂ ಪಾಲಿಕೆ ಈ ಆದೇಶ ಉಲ್ಲಂಘಿಸಿ, ಪೊಲೀಸರ ಭದ್ರತೆಯಲ್ಲಿ ಕೋವಿಡ್‌ ಸೋಂಕಿತರ ಶವ ದಹಿಸಲು ವ್ಯವಸ್ಥೆ ಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ಶವ ಸುಡಲು ಬಿಡುವುದಿಲ್ಲ. ಈ ಹಿಂದೆ ಈ ಜಾಗದಲ್ಲಿ ತ್ಯಾಜ್ಯ ಸುರಿಯುವಾಗ ಸುತ್ತಮುತ್ತಲ ಹಳ್ಳಿಗಳ ಜನರಿಗೆ ಹಲವು ರೋಗಿಗಳು ಕಾಡಿದ್ದವು. ಕ್ಯಾನ್ಸರ್‌, ಕಿಡ್ನಿ ಸಮಸ್ಯೆಯಿಂದ ಹಲವರು ಮೃತಪಟ್ಟಿದ್ದರು. ಪ್ರಾಣಿ ತ್ಯಾಜ್ಯ ಹಾಕದಂತೆ ನ್ಯಾಯಾಲಯ ಆದೇಶಿಸಿದೆ. ಮನುಷ್ಯ ಕೂಡ ಪ್ರಾಣಿಯೇ. ಹೀಗಾಗಿ ಸದರಿ ಜಾಗದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ಮಾವಳ್ಳಿಪುರ ನಿವಾಸಿ ಶ್ರೀನಿವಾಸ್‌ ಒತ್ತಾಯಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

Follow Us:
Download App:
  • android
  • ios