ಇಡೀ ರಾತ್ರಿ ದಹಿಸಿದರೂ ಬರುತ್ತಲೇ ಇವೆ ಮೃತದೇಹಗಳು : ಚಿತಾಗಾರಗಳ ಮುಂದೆ ಸಾಲು
ಬೆಂಗಳೂರಿನಲ್ಲಿ ಮರಣ ಮೃದಂಗ ಮುಂದುವರಿದಿದ್ದು, ಪಾಲಿಕೆ ಚಿತಾಗಾರಗಳ ಎದುರು ಸೋಂಕಿತರ ಮೃತದೇಹ ಹೊತ್ತ ಆ್ಯಂಬುಲೆನ್ಸ್‌ಗಳು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ.
ಬೆಂಗಳೂರು (ಏ.20): ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಮರಣ ಮೃದಂಗ ಮುಂದುವರಿದಿದ್ದು, ಪಾಲಿಕೆ ಚಿತಾಗಾರಗಳ ಎದುರು ಸೋಂಕಿತರ ಮೃತದೇಹ ಹೊತ್ತ ಆ್ಯಂಬುಲೆನ್ಸ್‌ಗಳು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಸೋಮವಾರವೂ ಮುಂದುವರಿದಿತ್ತು.
ಒಂದೊಂದು ಮೃತದೇಹ ಸುಡಲು ಸುಮಾರು ಒಂದು ತಾಸಿಗೂ ಅಧಿಕ ಸಮಯ ಹಿಡಿಯುತ್ತಿದ್ದರಿಂದ ಮೃತರ ಸಂಬಂಧಿಕರು ತಾಸುಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಸೋಂಕಿತರ ಮೃತದೇಹಗಳ ಅಂತಿಮ ದರ್ಶನ ಪಡೆಯಲು ಸಂಬಂಧಿಕರು, ಕುಟುಂಬದ ಸದಸ್ಯರು, ಸ್ನೇಹಿತರು ಚಿತಾಗಾರಗಳತ್ತ ತಂಡೋಪ ತಂಡವಾಗಿ ಆಗಮಿಸುತ್ತಿದ್ದರು. ಆದರೆ, ಕೊರೋನಾ ನಿಯಮಾವಳಿ ಪಾಲಿಸುವ ದೃಷ್ಟಿಯಿಂದ ಕೆಲವೇ ಮಂದಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ದರ್ಶನ ಪಡೆಯಲು ಅವಕಾಶ ಸಿಗದವರು ಚಿತಾಗಾರದ ಆವರಣದಲ್ಲೇ ಕಣ್ಣೀರಿಟ್ಟು ಗೋಳಾಡುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು.
ಕಾಲಿಗೆ ಬಿದ್ದರೂ ಬೆಡ್ ಕೊಡಲಿಲ್ಲ! ಸೋಂಕಿತ ಮಹಿಳೆ ಸಾವು .
ಬೆಳಗ್ಗೆಯಿಂದಲೇ ಯಲಹಕಂದ ಮೇಡಿ ಅಗ್ರಹಾರ, ಸುಮ್ಮನಹಳ್ಳಿ, ಬನಶಂಕರಿ, ಪೀಣ್ಯ ಸೇರಿದಂತೆ ಪಾಲಿಕೆಯ ಏಳು ಚಿತಾಗಾರಗಳ ಬಳಿ ಆ್ಯಂಬುಲೆನ್ಸ್‌ಗಳನ್ನು ಸಾಲುಗಟ್ಟಿನಿಲುಗಡೆ ಮಾಡಲಾಗಿತ್ತು. ಚಿತಾಗಾರದ ಸಿಬ್ಬಂದಿ ರಾತ್ರಿ ಇಡೀ ಮೃತದೇಹಗಳನ್ನು ಸುಟ್ಟು ಬೆಳಗ್ಗೆಯೂ ತಮ್ಮ ಕಾರ್ಯ ಮುಂದುವರಿಸಿದ್ದರು. ಒಂದೆಡೆ ಮೃತದೇಹಗಳ ದಹನ ಕಾರ್ಯ ಸಾಗುತ್ತಿದ್ದರೆ, ಮತ್ತೊಂದೆಡೆ ಹೊಸ ಮೃತದೇಹಗಳು ಚಿತಾಗಾರಕ್ಕೆ ಬರುತ್ತಿದ್ದವು. ಒಂದು ಹಂತದಲ್ಲಿ ಚಿತಾಗಾರಗಳ ಬಳಿ ಮೃತದೇಹಗಳ ದಟ್ಟಣೆ ಉಂಟಾಗಿತ್ತು.
ಟೋಕನ್ ವಿತರಣೆ:
ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮೃತದೇಹಗಳ ಸರತಿ ಸಾಲು ದೊಡ್ಡದಾಗುತ್ತಿದ್ದಂತೆ ಚಿತಾಗಾರದ ಸಿಬ್ಬಂದಿ ಮೃತರ ಕುಟುಂಬದ ಸದಸ್ಯರಿಗೆ ಟೋಕನ್ ವಿತರಿಸಿದರು. ಟೋಕನ್ ಸಂಖ್ಯೆಯ ಪ್ರಕಾರ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಿದರು. ಒಂದು ಹಂತದಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾದ್ದರಿಂದ ಹೊಸದಾಗಿ ಬಂದ ಮೃತದೇಹಗಳನ್ನು ಬೇರೆ ಚಿತಾಗಾರಗಳಿಗೆ ಕಳುಹಿಸಿಕೊಟ್ಟರು. ಎಷ್ಟೋ ಮಂದಿ ಆ್ಯಂಬುಲೆನ್ಸ್‌ಗಳ ಸಾಲು ಕಂಡು ಕಡಿಮೆ ಮೃತದೇಹ ಇರುವ ಚಿತಾಗಾರಗಳನ್ನು ಹುಡುಕಿಕೊಂಡು ಹೋದರು.
ಚಿತಾಗಾರದ ಸಿಬ್ಬಂದಿ ಸುಸ್ತು: ಕಳೆದೊಂದು ವಾರದಿಂದ ಮೃತದೇಹಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾನುವಾರ ಬಂದ ಮೃತದೇಹಗಳನ್ನು ಸೋಮವಾರ ಮುಂಜಾನೆ 3.30ರ ವರೆಗೂ ಸುಟ್ಟಿದ್ದೇವೆ. ಇದೀಗ 10ಕ್ಕೂ ಹೆಚ್ಚು ಮೃತದೇಹಗಳು ಬಂದಿವೆ. ರಾತ್ರಿಯಿಂದ ನಿರಂತರ ಕೆಲಸ ಮಾಡಿ ದೇಹ ದಣಿದಿದೆ. ನಮಗೂ ಕುಟುಂಬವಿದ್ದು, ಆರೋಗ್ಯವನ್ನು ನೋಡಿಕೊಳ್ಳಬೇಕು. ಪಾಳಿ ರಚಿಸಿದರೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಪೀಣ್ಯ ಚಿತಾಗಾರದ ಸಿಬ್ಬಂದಿ ಹೇಳಿದರು.
ಚಟ್ಟದ ದರ ಮೂರುಪಟ್ಟು ಹೆಚ್ಚಳ: ಕೊರೋನಾ ಸೋಂಕಿತರ ಸಾವು ಹೆಚ್ಚಾಗುತ್ತಿರುವುದರಿಂದ ಸುಮ್ಮನಹಳ್ಳಿ ಚಿತಾಗಾರದ ಬಳಿ ಬಿದಿರು ಬೊಂಬಿನ ಚಟ್ಟಗಳಿಗೆ ಬೇಡಿಕೆ ಬಂದಿದೆ. ಚಿತಾಗಾರದ ಸಿಬ್ಬಂದಿ ಒಂದು ಚಟ್ಟಕ್ಕೆ ಮೂರು ಸಾವಿರ ಪಡೆದರು. ಕಳೆದ ವಾರ ಒಂದು ಸಾವಿರ ರು. ಇದ್ದ ಚಟ್ಟದ ದರ ಇದೀಗ ಮೂರು ಪಟ್ಟು ಹೆಚ್ಚಳವಾಗಿದೆ. ಮೃತದೇಹವನ್ನು ವಿದ್ಯುತ್‌ನಲ್ಲಿ ಸುಡುವ ಮುನ್ನ ಶಾಸೊತ್ರೕಕ್ತವಾಗಿ ಚಟ್ಟದ ಮೇಲೆ ಮಲಗಿಸಿ ಪೂಜೆ ಮಾಡಲಾಗುತ್ತದೆ. ಹೀಗಾಗಿ ಚಿತಾಗಾರದ ಸಿಬ್ಬಂದಿ ಸಾವಿರಕ್ಕೂ ಬಿದಿರಿನ ಬೊಂಬುಗಳನ್ನು ತರಿಸಿಕೊಂಡು ಚಿತಾಗಾರದ ಹಿಂಭಾಗ ದಾಸ್ತಾನು ಮಾಡಿದ್ದಾರೆ. ಮೃತರ ಸಂಬಂಧಿಕರು ಕೇಳಿದಾಗ 10 ನಿಮಿಷದಲ್ಲೇ ಚಟ್ಟಸಿದ್ಧಪಡಿಸುತ್ತಾರೆ.
ಪಿಪಿಇ ಕಿಟ್ ಇಲ್ಲದೆ ಪೂಜೆ: ಬನಶಂಕರಿ ಸೇರಿದಂತೆ ಹಲವು ಚಿತಾಗಾರಗಳ ಬಳಿ ಮೃತರ ಸಂಬಂಧಿಕರು ಪಿಪಿಇ ಕಿಟ್, ಗ್ಲೌಸ್ ಧರಿಸದೇ ಮೃತದೇಹಗಳಿಗೆ ಪೂಜೆ ಸಲ್ಲಿಸಿದರು. ಅಂತೆಯೆ ಚಿತಾಗಾರದ ಸಿಬ್ಬಂದಿ ಸಹ ಯಾವುದೇ ಮುನ್ನಚ್ಚರಿಕಾ ಕ್ರಮ ಕೈಗೊಳ್ಳದೆ ಮೃತದೇಹಗಳನ್ನು ಚಿತಾಗಾರಕ್ಕೆ ಸಾಗಿಸುವುದು ಮುಂದುವರಿದಿದೆ. ಕೊರೋನಾದಿಂದ ಅಪಾಯವಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆಯಿದೆ.