ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ - ಶಾಸಕ ಜಿ.ಡಿ. ಹರೀಶ್‌ಗೌಡ
ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನಲ್ಲಿ ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಜಿ.ಡಿ. ಹರೀಶ್‌ಗೌಡ ಭರವಸೆ ನೀಡಿದರು.
ಹುಣಸೂರು : ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನಲ್ಲಿ ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಜಿ.ಡಿ. ಹರೀಶ್‌ಗೌಡ ಭರವಸೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ರೈತ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೈತಪರ ಕೆಲಸ ಮಾಡುವುದು, ಸರ್ಕಾರದ ಸವಲತ್ತುಗಳನ್ನು ಒದಗಿಸುವುದರ ಹೊರತಾಗಿ ಯಾವುದೆ ಸಂದರ್ಭದಲ್ಲೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನಿಮಗೆ ನೀಡುತ್ತೇನೆ. ರೈತರು ಬೆಳೆದ ಬೆಳೆಗೆ ಸೂಕ್ತ ದರ ಸಿಗುತ್ತಿಲ್ಲವೆಂಬ ಕೂಗು ದಶಕಗಳಿಂದ ಕಾಡುತ್ತಿದೆ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಮೇಲೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರಿಗೆ ಬ್ಯಾಂಕ್ ವತಿಯಿಂದ 1,600 ಕೋಟಿ ರು. ಗಳ ಬೆಳೆ ಸಾಲ ಕೊಡಿಸಿದ್ದೇನೆ. ಈ ಹಿಂದೆ ಅದು ಕೇವಲ ಕೋಟಿಗಳಷ್ಟಿತ್ತು. ಹುಣಸೂರು ತಾಲೂಕಿನ ರೈತಬಂಧುಗಳಿಗೆ 100 ಕೋಟಿ ರು. ಗಳ ಸಾಲ ಸೌಲಭ್ಯವನ್ನು ಶೂನ್ಯಬಡ್ಡಿದರದಲ್ಲಿ ವಿತರಿಸಲಾಗಿದೆ. ರೈತರ ಮಗನಾಗಿ ರೈತರ ಸಮಸ್ಯೆಗಳನ್ನು ಅರಿತಿದ್ದೇನೆ. ಎಪಿಎಂಸಿ ಆವರಣದಲ್ಲಿ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸಲು ಶೀಘ್ರ ಕ್ರಮವಹಿಸಲಿದ್ದೇನೆ ಎಂದರು.
ತಾಲೂಕಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯವಿದ್ದ 110 ಟಿಸಿಯನ್ನು ರೈತರಿಗೆ ವಿತರಿಸಲಾಗಿದೆ. ಇನ್ನು 40 ಟಿಸಿಯ ಬೇಡಿಕೆ ಇದ್ದು, ಶೀಘ್ರದಲ್ಲೇ ಪೂರೈಸಲಾಗುವುದು. ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ನಾಡ ಕಚೇರಿಯಲ್ಲಿಯೇ ಇದ್ದು ರೈತರ ಕೆಲಸವನ್ನು ಮಾಡಿಕೊಡಬೇಕೆಂದು ಸೂಚಿಸಿರುವುದಾಗಿ ಅವರು ತಿಳಿಸಿದರು.
ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ನಿಂಗಮ್ಮ ಮಾತನಾಡಿ, ಎಪಿಎಂಸಿಯಲ್ಲಿ ಕ್ಯಾಂಟಿನ್, ರೈತ ಭವನ, ನೀರಿನ ಘಟಕ, ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಹುಣಸೂರು, ಕೆ.ಆರ್. ನಗರ ತಾಲೂಕಿನ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಎಪಿಎಂಸಿ ಅಧ್ಯಕ್ಷ ಸುಭಾಶ್, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೃಷ್ಣ ಕುಮಾರ್, ರಾಜ್ಯಉಪಾಧ್ಯಕ್ಷ ರವಿ ಸಿದ್ದೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಸಿದ್ದಯ್ಯ, ಜಿಲ್ಲಾಧ್ಯಕ್ಷ ರೇವಣ್ಣ, ತಾಲೂಕು ಅಧ್ಯಕ್ಷ ಶಶಿಧರ್, ಗೌರವಾಧ್ಯಕ್ಷ ನಂಜುಂಡೇಗೌಡ, ಮಂಜಣ್ಣ, ಚಂದ್ರೇಗೌಡ, ಸಿದ್ದಪ್ಪ, ಕುಮಾರ್, ರೇವಣ್ಣ, ಯೋಗಣ್ಣ, ನಾಗೇಶ್, ಪಾಪಣ್ಣ, ಸ್ವಾಮಣ್ಣ, ಕೃಷ್ಣ, ಮಂಗಳಮ್ಮ, ಮೀನಾ, ಉಮಾದೇವಿ, ಮಲ್ಲಿಕಾರ್ಜುನ, ಕುಚೇಲಪ್ಪ, ಸೋಮಣ್ಣ, ಮುತ್ತುರಾಯಣ್ಣ, ಪದಾಧಿಕಾರಿಗಳು ಹಾಗೂ ರೈತರು ಇದ್ದರು.