ದಾವಣಗೆರೆ: ಆನ್ ಅಂಡ್ ಆಫ್ ಪದ್ಧತಿ ಕೈಬಿಟ್ಟು ನೀರು ಹರಿಸಿ, ರೈತ ಒಕ್ಕೂಟದ ಮುಖಂಡರ ಒತ್ತಾಯ
ರಾಜ್ಯದಲ್ಲಿ ಬರಗಾಲ ಇದೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಲೆಯಲ್ಲಿ ನೀರು ನಿಲ್ಲಿಸುವುದರಿಂದ ಮುಂದಿನ ದಿನಗಳಲ್ಲಿ ಆಹಾರದ ಧಾನ್ಯಗಳ ಕೊರತೆ ಆಗಲಿದೆ. ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ ರೈತ ಒಕ್ಕೂಟದ ಮುಖಂಡರು
ವರದಿ: ವರದರಾಜ್
ದಾವಣಗೆರೆ(ಅ.18): ಭದ್ರಾ ನಾಲೆಯಲ್ಲಿ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಹಲವರಿಗೆ ಮಾಡಿಕೊಂಡ ಮನವಿ, ನಡೆಸಿದ ಹೋರಾಟಕ್ಕೆ ಸ್ಪಂದಿಸದೆ ನೀರು ನಿಲ್ಲಿಸಿರುವುದು ಅತ್ಯಂತ ಖಂಡನೀಯ ಎಂದು ರೈತ ಒಕ್ಕೂಟದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ರೈತರ ಒಕ್ಕೂಟದ ಮುಖಂಡರು, ನಾಲೆಯಲ್ಲಿ 100 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಎಂದು ಜಲಸಂಪನ್ಮೂಲ ಇಲಾಖೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಸಿಸಿಯ ಪ್ರಭಾರ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ನಿಯೋಗದ ಮೂಲಕ ಭೇಟಿಯಾಗಿ ನಿರಂತರವಾಗಿ ನೀರು ಹರಿಸಬೇಕು ಎಂದು ಮನವಿ ಮಾಡಿಕೊಂಡಾಗ ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿಗೆ ಅನುಗುಣವಾಗಿ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ನಾಲೆಯಲ್ಲಿ ಅ. 16 ರಿಂದ ನೀರು ನಿಲ್ಲಿಸಲಾಗಿರುವುದರಿಂದ 1.40 ಲಕ್ಷ ಎಕರೆಯಲ್ಲಿನ ಭತ್ತದ ಬೆಳೆಗಾರರಿಗೆ ಸಾಕಷ್ಟು ಅನಾನುಕೂಲ ಆಗಿದೆ. ಕೂಡಲೇ ಆನ್ ಅಂಡ್ ಆಫ್ ಪದ್ಧತಿ ಕೈಬಿಟ್ಟು ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಹಿಂದೂ ವಿರೋಧಿ: ಪ್ರಮೋದ್ ಮುತಾಲಿಕ್
ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಐಸಿಸಿ ಸಭೆಯ ತೀರ್ಮಾನದಂತೆ ನಾಲೆಯಲ್ಲಿ ನೀರು ಹರಿಸುವ ಭರವಸೆಯೂ ಈಡೇರಿಕೆ ಆಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇದೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಲೆಯಲ್ಲಿ ನೀರು ನಿಲ್ಲಿಸುವುದರಿಂದ ಮುಂದಿನ ದಿನಗಳಲ್ಲಿ ಆಹಾರದ ಧಾನ್ಯಗಳ ಕೊರತೆ ಆಗಲಿದೆ. ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈತ ಒಕ್ಕೂಟದ ಎಚ್.ಆರ್. ಲಿಂಗರಾಜ್ ಶಾಮನೂರು, ಬಿ. ನಾಗೇಶ್ವರರಾವ್, ಕಲ್ಲು ಬಂಡೆ ಪ್ರಸಾದ್ ಇತರರು ಸುದ್ದಿಗೋಷ್ಠಿ ಯಲ್ಲಿದ್ದರು.