ತಮಿಳುನಾಡಿಗೆ ಕಾವೇರಿ ನೀರು: ಸುಪ್ರೀಂ ತೀರ್ಪು ಖಂಡಿಸಿ ರೈತ ಒಕ್ಕೂಟದಿಂದ ಹೆದ್ದಾರಿ ತಡೆ
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮತ್ತು ತಮಿಳುನಾಡಿನ ಗುಲಾಮರಂತೆ ವರ್ತಿಸಿ, ಸುಪ್ರೀಂ ಕೋರ್ಟ್‌ಗೆ ಸರಿಯಾದ ದಾಖಲೆಯನ್ನು ಒದಗಿಸದೇ, ಸದ್ಯದ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸುಪ್ರೀಂ ಕೋರ್ಟ್ ತಮಿಳುನಾಡು ಪರ ತೀರ್ಪಿತ್ತಿದೆ ಎಂದು ಆರೋಪಿಸಿದ ಒಕ್ಕೂಟದ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್
ಚಾಮರಾಜನಗರ(ಸೆ.22): ಕಾವೇರಿ ನಿಯಂತ್ರಣ ಮಂಡಳಿ ಆದೇಶವನ್ನು ಎತ್ತಿ ಹಿಡಿದು, ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ತೀರ್ಪು ಕೊಟ್ಟಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿ ನಗರದಲ್ಲಿ ರೈತ ಒಕ್ಕೂಟದಿಂದ ಹೆದ್ದಾರಿ ತಡೆ ನಡೆಸಿ, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಸತ್ಯಮಂಗಲ ರಸ್ತೆಯ, ಸೋಮವಾರಪೇಟೆ ಬಳಿ ಬೈಪಾಸ್ ರಸ್ತೆ ಕೂಡುವ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರ, ಕಾವೇರಿ ನಿಯಂತ್ರಣ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಹೆದ್ದಾರಿ ತಡೆ ನಡೆಸಿ, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ಪ್ರತಿದಿನ 5000 ಕ್ಯೂಸೆಕ್ಸ್ ಕಾವೇರಿ ನೀರು ಬಿಡಲು ಆದೇಶ
ಹೆದ್ದಾರಿ ತಡೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥವುಂಟಾಗಿ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತವು, ಇದರಿಂದಾಗಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೋಯ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮತ್ತು ತಮಿಳುನಾಡಿನ ಗುಲಾಮರಂತೆ ವರ್ತಿಸಿ, ಸುಪ್ರೀಂ ಕೋರ್ಟ್‌ಗೆ ಸರಿಯಾದ ದಾಖಲೆಯನ್ನು ಒದಗಿಸದೇ, ಸದ್ಯದ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸುಪ್ರೀಂ ಕೋರ್ಟ್ ತಮಿಳುನಾಡು ಪರ ತೀರ್ಪಿತ್ತಿದೆ ಎಂದು ಆರೋಪಿಸಿದರು.
ನಾವು ಕುಡಿಯುವ ನೀರಿಗಾಗಿ ನೀರು ಉಳಿಸಿ ಎನ್ನುತ್ತಿದ್ದರೆ, ತಮಿಳುನಾಡು ಅಲ್ಲಿ ಮೂರನೇ ಬೆಳೆಗೆ ನೀರು ಕೇಳುತ್ತಿದೆ. ಮಳೆಯ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಪ್ರತಿ ದಿನ ೫ ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದರೆ ಕಾವೇರಿ ಕೊಳ್ಳ ಬರಿದಾಗುತ್ತದೆ. ಇದನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ರಾಜಕೀಯ ತೆವಳಿಗಾಗಿ, ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನ ಪರ ತೀರ್ಪು ಬರುವಂತೆ ಷಡ್ಯಂತ್ರ ರೂಪಿಸಿ, ರಾಜ್ಯದ ಜನರಿಗೆ ಅನ್ಯಾಯ ಮಾಡಿ, ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಆಗುವಂತೆ ಮಾಡಿದ್ದಾರೆ ಎಂದರು.
ರಾಜ್ಯದ ೨೮ ಲೋಕಸಭಾ ಸದಸ್ಯರು, ಆಡಳಿತ ಪಕ್ಷದ ಜೊತೆ ಸೇರಿ ನಿನ್ನೆ ಭಕ್ಷ ಭೋಜನ ಮಾಡಿ ನಾಟಕವಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ, ನಾಳೆಯಿಂದ ರೈತ ಒಕ್ಕೂಟದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಕಾವೇರಿ ವಿಚಾರದಲ್ಲಿ ಒಗ್ಗಟ್ಟಿಂದ ಮಾತನಾಡಿ: ಸಚಿವ ದಿನೇಶ್ ಗುಂಡೂರಾವ್
ನಿಜವಾಗಲು ರಾಜ್ಯ ಸರ್ಕಾರಕ್ಕೆ ರಾಜ್ಯದ ಜನರ ಮೇಲೆ ಕನಿಕರವಿದ್ದರೆ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಎಸ್.ಎಂ.ಕೃಷ್ಣರಂತೆ ಸುಪ್ರೀಂ ಕೋರ್ಟ್ ತೀರ್ಪು ಧಿಕ್ಕರಿಸಿ, ಸುಗ್ರಿವಾಜ್ಞೆ ತಂದು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.
ಮುಂದಿನ ದಿನಗಳಲ್ಲಿ ರೈತರ ಜೊತೆ, ನಗರವಾಸಿಗಳು, ಪಟ್ಟಣವಾಸಿಗಳು ಕೈಜೋಡಿಸಬೇಕು, ಇಲ್ಲದಿದ್ದರೆ ಮುಂದಿನ ದಿನ ಹನಿ ಹನಿ ನೀರಿಗೂ ಬವಣೆ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಟೇಲ್ ಶಿವಮೂರ್ತಿ, ಹಾಲಿನ ನಾಗರಾಜು, ಮಹದೇವಸ್ವಾಮಿ, ಹರ್ಷ, ಕುಮಾರ್, ಮಂಜುನಾಥ್, ಮಹೇಶ್, ಪ್ರವೀಣ್ ಕುಮರ್, ಸಿದ್ದಪ್ಪ, ಸತೀಸ್, ಮಹೇಂದ್ರ, ರಾಜೇಂದ್ರ, ಶಿವಸ್ವಾಮಿ, ಸಿದ್ದರಾಜು ಇತರರು ಭಾಗವಹಿಸಿದ್ದರು.