Asianet Suvarna News Asianet Suvarna News

Raichur ಬಾರೋ...ಬಾರೋ ಮಳೆರಾಯ...ನಿತ್ಯ ಮಳೆಗಾಗಿ ಜಪಿಸುತ್ತಿರುವ ಅನ್ನದಾತರು!

* ಅತ್ತ ಮಳೆಯೂ ಇಲ್ಲ..ಇತ್ತ ಕಾಲುವೆ ನೀರು ಇಲ್ಲದೆ ರೈತರು ಕಂಗಾಲು
* ಭೂಮಿ ಹದ ಮಾಡಿಕೊಂಡು ಮಳೆರಾಯನಿಗಾಗಿ ಎದುರು ನೋಡುತ್ತಿರುವ ರೈತರು!
* ಬಾರೋ ಮಳೆರಾಯ ನಮ್ಮ ಮೇಲೆ ಮುನಿಸು ಏಕೆ ನಿನಗೆ!
* ನಿತ್ಯ ಮಳೆರಾಯನಿಗಾಗಿ ಜಪಿಸುತ್ತಿರುವ ಅನ್ನದಾತರು!

Farmers Prayer to Rain For sowing in Raichur rbj
Author
Bengaluru, First Published Jun 28, 2022, 11:32 AM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು, (ಜೂನ್.28):
ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ.  ಗ್ರಾಮೀಣ ಭಾಗದಲ್ಲಿ ರೈತರು ಬಿತ್ತನೆ ಮಾಡದೆ ಮೋಡದತ್ತ ಮುಖ ಮಾಡಿ ಉಯ್ಯೋ ಉಯ್ಯೋ ಮಳೆರಾಯ ಎಂದು ದೇವರಿಗೆ ಕೈ ಮುಗಿದು ಜಪಿಸುತ್ತಿದ್ದಾರೆ. ಆದ್ರೂ ಸಹ ಮನಿಸಿಕೊಂಡ ಮಳೆರಾಯನಿಂದಾಗಿ ಅನ್ನದಾತರು ನಿತ್ಯವೂ ಆಕಾಶ ನೋಡುವಂತೆ ಆಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಭಾರೀ ಮಳೆಯಾಗಿತ್ತು. ಇನ್ನೇನೂ ಮುಂಗಾರು ಪ್ರವೇಶ ಆಗಿದೆ ಎಂದು ಆರಂಭದಲ್ಲಿ ಹವಾಮಾನ ವೈಪರಿತ್ಯದ ಕಾರಣದಿಂದ ಸುರಿದ ಸಣ್ಣ ಮಳೆಗೆ ಕೆಲ ರೈತರು ಹತ್ತಿ, ಸಜ್ಜೆ, ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ.

ಬಿತ್ತನೆ ಮಾಡಿದ ರೈತರ ಜಮೀನಿನಲ್ಲಿ ಮೊಳಕೆ ಒಡೆದಿವೆ. ಆದ್ರೆ ಮಳೆ ಬಾರದೇ ಇರುವುದರಿಂದ ರೈತರು ಬರೀ ಮೋಡಗಳ ಹೋಯ್ದಾಟ ಕಂಡು ಬೆರಗಾಗುತ್ತಿದ್ದಾರೆ. ಇನ್ನೂ ಕೆಲ ಆಕಾಶದಲ್ಲಿ ಮೋಡ ಆಗುವುದು ನೋಡಿ ಮಳೆ ಆಗುತ್ತೆ ಅಂತ ಆಸೆಯೊಂದಿಗೆ ಒಣ ನೆಲದಲ್ಲಿ ಹತ್ತಿ, ತೊಗರಿ ಕಾಳು ಇಟ್ಟು ಮಳೆಗಾಗಿ ಕಾದು ಕುಳಿತಿದ್ದಾರೆ. ಈಗ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಳೆ ಬರದೇ ಇರುವುದರಿಂದ ರೈತರು ಕಂಗಾಲಾಗಿದ್ದು, ಕೆಲ ರೈತರು ಮಳೆಯನ್ನು ಬಾರದೇ ಇರುವುದರಿಂದ ಬಿತ್ತನೆ ಕಾರ್ಯವನ್ನೇ ಸ್ಥಗಿತಗೊಳಿಸಿದ್ದಾರೆ.

ಕ್ಷೀಣಿಸಿದ ಮಳೆ, ಒಣಗುತ್ತಿರುವ ಬೆಳೆ: ಆತಂಕದಲ್ಲಿ ಅನ್ನದಾತ..!

ರಾಯಚೂರು ಜಿಲ್ಲೆಯ ತಾಲೂಕಾವಾರು ಮಳೆ ಪ್ರಮಾಣ
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ 225 ಮಿಲಿ ಮೀಟರ್, ಮಾನ್ವಿ 146, ಸಿಂಧನೂರು 182, ಮಸ್ಕಿ 98, ಸಿರವಾರ 214, ದೇವದುರ್ಗ 144, ರಾಯ ಚೂರು 92 ಮಿಮೀ ರಷ್ಟು ಮಳೆಯಾಗಿದ್ದು ಒಟ್ಟು ಶೇ.41 ರಷ್ಟು ಪ್ರದೇಶದಲ್ಲಿ ಮಾತ್ರ ಮಳೆಯಾಗಿದೆ. ಹೀಗಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೆರಡು ದಿನಗಳಲ್ಲಿ ಜಿಲ್ಲೆಯ ಕೆಲ ಹೋಬಳಿಯಲ್ಲಿ ಒಂದಿಷ್ಟು ಮಳೆ ಬಂದಿದ್ದು, ಹೊರತುಪಡಿಸಿ ಉಳಿದೆಲ್ಲ ಕಡೆ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಗೆ ಬೇಕಾದಷ್ಟು ಮಳೆ ಬಾರದೆ ಹಿನ್ನಡೆಯಾಗಿದೆ.

 ಓಡುತ್ತಿರುವ ನೀರೋತ್ತ ಮೋಡ : 
ಜಿಲ್ಲೆಯಲ್ಲಿ ಮಧ್ಯಾಹ್ನವೆಲ್ಲ ಬಿಸಿಲು ಕಡಿಮೆ ಇದ್ದರೂ ಸೆಕೆ ಪ್ರಮಾಣ ತಗ್ಗಿಲ್ಲ. ಜಿಲ್ಲೆಯಾದ್ಯಂತ ಯಾವ ಕಡೆ ನೋಡಿದ್ರೂ ಆಕಾಶದಲ್ಲಿ ಮೋಡ ಕವಿದ ವಾತಾವರ ಇರುತ್ತೆ..ಕೆಲವು ಕಡೆ ಹನಿ ಹನಿ ಮಳೆ ಮಾತ್ರ ಆಗುತ್ತೆ..ಬಿಟ್ಟರೆ ಬಿತ್ತನೆಗೆ ಬೇಕಾದಷ್ಟು ಮಳೆ ಮಾತ್ರ ಬರುತ್ತಿಲ್ಲ. ರೈತರು ಭೂಮಿ ಹಸನ ಮಾಡಿಕೊಂಡು ಅಲ್ಲಲ್ಲಿ ಬಿತ್ತನೆ ಮಾಡಿದ್ದೂ ಇದೆ. ಕೆಲ ಕಡೆ ಕಳೆದ ಮೂರಾಲ್ಕು ದಿನಗಳಿಂದ ಸಂಜೆಯಾದರೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತೆ. ಮೋಡಗಳು ಮುಂದೆ ಓಡುತ್ತಿದ್ದು ಮಳೆಯಾಗಿ ಮಾತ್ರ ಭೂಮಿಗೆ ಸುರಿಯುತ್ತಿಲ್ಲ. ಹಳ್ಳಿಯಲ್ಲಿ ರೈತರು ಮೋಡದ ಕಡೆ ಮುಖ ಮಾಡಿ ಮಳೆ ರಾಯನ ಆಗಮನಕ್ಕೆ ಪ್ರಾರ್ಥಿಸುತ್ತಾರೆ.

 ಮಳೆ ಬಗ್ಗೆ ರೈತರು ಫೋನ್ ಮಾಡಿ ವಿಚಾರಣೆ: 
ಜಿಲ್ಲೆಯ ಬಹುತೇಕ ಕಡೆ ನಿತ್ಯವೂ ಮಳೆ ಬಂದು ಬಿಡುತ್ತೆ ಎಂಬುವಷ್ಟು ಮೋಡ ಆಗಿರುತ್ತೆ..ಆದ್ರೆ ಮಳೆ ಮಾತ್ರ ಬರುವುದೇ ಇಲ್ಲ.‌ ಹೀಗಾಗಿ ರೈತರು ಸಂಬಂಧಿಕರಿಗೆ ಮತ್ತು ವಿವಿಧ ಗ್ರಾಮಗಳಲ್ಲಿ ಇರುವ ತಮ್ಮ ‌ಸ್ನೇಹಿತರಿಗೆ ಫೋನಾಯಿಸಿ ಮಳೆಯಾದ ಬಗ್ಗೆ ಖಚಿತ ಪಡಿಸಿಕೊಳ್ಳುತ್ತಿದ್ದು, ಬಿತ್ತನೆಯಾದ ಬೆಳೆ, ಈಗಿರುವ ಬೆಳೆಯ ಸ್ಥಿತಿಯ ವಿಚಾರಿಸಿ ಪರಸ್ಪರರು ಪೇಚಾಡುತ್ತಿದ್ದಾರೆ. ಅಲ್ಲದೆ, ಬೀಜ ಮನೆಯಲ್ಲಿ ತ೦ದಿಟ್ಟುಕೊಂಡಿರುವ ರೈತರ ಗೋಳು ಮಾತ್ರ ಹೇಳತೀರದ್ದು, ರಾತ್ರಿ ‌ಮಳೆ ಬರಬಹುದು. ನಾಳೆ ಬಿತ್ತನೆ ಮಾಡೋಣ ಅಂತ ಭೂಮಿಗೆ ಬೀಜ ಹಾಕಲು ಹಾತೋರೆಯುತ್ತಿದ್ದಾರೆ. ಕೆಲ ರೈತರು ಧೈರ್ಯ ಮಾಡಿ ಒಣ ಮಣ್ಣಿನಲ್ಲಿ ಬೀಜ ಹಾಕಿದ್ದಾರೆ. ಅಂತಹ ರೈತರಿಗೆ ಇಲಿ, ಮೆಕಳೆ ಕಾಟದಿಂದ ನಷ್ಟ ಅನುಭವಿಸುವ ಆತಂಕ ಶುರುವಾಗಿದೆ. ಕೆಲ ಅನ್ನದಾತರು ಧೈರ್ಯ ಮಾಡಿ ಮಣ್ಣಿಗೆ ಬೀಜ ಹಾಕಿ ಬೆಳೆ ಮೊಳಕೆಯ ನಿರೀಕ್ಷೆಯಲ್ಲಿದ್ದಾರೆ.

 ಮಳೆಯ ಅಭಾವದಿಂದ ಶೇ.12ರಷ್ಟು ಮಾತ್ರ ಬಿತ್ತನೆ
 ಕೃಷಿ ಇಲಾಖೆ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಶೇ.40ರಷ್ಟು ಒಣ ಮತ್ತು ನೀರಾವರಿ ಭೂಮಿಯಲ್ಲಿ ಬಿತ್ತನೆ ಆಗಬೇಕಿತ್ತು. ಸುಮಾರು 5 ಲಕ್ಷದ 36 ಸಾವಿರದ 641 ಹೆಕ್ಟೇರ್ ಬಿತ್ತನೆ ನಿರೀಕ್ಷೆಗೆ ಕೇವಲ 66 ಸಾವಿರದ 771 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು . ಕೇವಲ ಶೇ.12.44 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಆಗಿದೆ.

 ಅಗಸಿ ಕಟ್ಟೆಗಳ ಮೇಲೆ ಕುಳಿತು ಲೋಕದ ಹರಟೆ : 
ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ‌ಮಳೆ ಆಗಿದ್ರೆ , ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹಳ್ಳಿಯಲ್ಲಿ ‌ಒಬ್ಬರೂ ಕೂಡ ಮಧ್ಯಾಹ್ನದ ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಮಳೆ ಕೈಕೊಟ್ಟಿದ್ದರಿಂದ ಅನ್ನದಾತರು ಬೆಳಿಗ್ಗೆ ಜಮೀನಿಗೆ ತೆರಳಿ ಬೇಸರದಿಂದ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಅಗಸೆ, ದೇವಸ್ಥಾನಗಳ ಕಟ್ಟೆ ಮೇಲೆ ಕುಳಿತು ಲೋಕಾಭಿರಾಮವಾಗಿ ಪಂಚಾಯಿತಿ ಸದಸ್ಯರಿಂದ ಹಿಡಿದು, ಪ್ರಧಾನಿಯವರೆಗೆ ಎಲ್ಲಾ ಸಂಗತಿಗಳ ಹರಟೆ ಹೊಡೆಯುತ್ತಿದ್ದಾರೆ. ಹುಲಿ ಮೇಕೆಯಾಟ ಆಡಿ ಮಳೆ ಇಲ್ಲ ಎಂದು ಪೇಚಾಡುತ್ತಿದ್ದಾರೆ. ಅಲ್ಲದೆ, ಪಂತ ಕಟ್ಟಿಕೊಂಡು ಕೆಲ ಊರುಗಳಲ್ಲಿ ಎಡಗೈಯಿಂದ ನಿಂಬೆ ಹಣ್ಣು ಒಗೆಯುವಾಟ, ಭಾರದ ಬಿಂದಿಗೆ, ಮರಳು ಚೀಲ ಹೊತ್ತು ನಡೆದಾಡುವ ಸ್ಪರ್ಧೆ, ಕಬ್ಬಡ್ಡಿಯಾಟ ಆಡಿಕೊಂಡು ಟೈಮ್ ಪಾಸ್ ಮಾಡುತ್ತಿದ್ದಾರೆ.

Follow Us:
Download App:
  • android
  • ios