* 1980ರ ದಶಕದಲ್ಲಿ ನೀರಾವರಿ ಕರದ ವಿರುದ್ಧ ಎದ್ದ ಬಂಡಾಯ* 2021ರಲ್ಲಿ ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆ, ಮಹದಾಯಿ ನೀರಿಗಾಗಿ* ರೈತ ಹುತಾತ್ಮ ದಿನಾಚರಣೆ ಮೂಲಕ ಒಂದಾದ ಉತ್ತರ-ದಕ್ಷಿಣ ಭಾರತದ ರೈತರ ಹೋರಾಟಗಳು
ಶಿವಕುಮಾರ ಕುಷ್ಟಗಿ
ನರಗುಂದ(ಜು.22): ರೈತ ಹೋರಾಟಕ್ಕೆ ನಾಂದಿ ಹಾಡಿರುವ ಬಂಡಾಯದ ನೆಲ ನರಗುಂದದಲ್ಲಿ ಮತ್ತೆ ರೈತ ಕಹಳೆ ಮೊಳಗಿದೆ. ಅಂದು ಬೆಟರ್‌ಮೆಂಟ್ ಲೇವಿ ಕಾರಣವಾಗಿದ್ದರೆ, ಇಂದು ಕೃಷಿ ಕಾನೂನುಗಳು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿವೆ.
ಪ್ರತಿ ವರ್ಷ ನಡೆಯುವ ರೈತ ಹುತಾತ್ಮ ದಿನಾಚರಣೆಗಿಂತ ಬುಧವಾರ ನಡೆದ 41ನೇ ರೈತ ಹುತಾತ್ಮ ದಿನಾಚರಣೆ ತೀರಾ ಭಿನ್ನ ಮತ್ತು ಸ್ಪಷ್ಟತೆಯಿಂದ ಕೂಡಿತ್ತು. ರೈತ ಹೋರಾಟಗಾರರಲ್ಲಿ ಒಗ್ಗಟ್ಟು, ಅದಕ್ಕೆ ಸಾಮಾಜಿಕ ಹೋರಾಟಗಾರರ ಬೆಂಬಲ, ಕಾರ್ಮಿಕ ಸಂಘಟನೆಗಳ ಸಾಥ್, ಕನ್ನಡಪರ ಸಂಘಟನೆಗಳ ಶಕ್ತಿ ಕೂಡಿತ್ತು. ಹಾಗಾಗಿ ರೈತರು ಮಹದಾಯಿ ಮತ್ತು ಕೃಷಿ ಕಾಯ್ದೆ ವಿರೋಧಿಸಿ 45 ಕಿಮೀ ಉದ್ದದ ಪಾದಯಾತ್ರೆ ನಡೆಸಿ, ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಒಂದಾದ ಉತ್ತರ ದಕ್ಷಿಣ:
7 ತಿಂಗಳಿಂದ ಸಿಂಧು ನದಿ ದಡದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಮುಂಚೂಣಿ ನಾಯಕರಾದ ದೀಪಕ ಲಂಬಾ, ಹರಕೇತ್ ಸಿಂಗ್ ಅಲ್ಲಿಂದ ಬಂದು ಈ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಲ್ಲದೇ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ಅದರಲ್ಲೂ ಕರ್ನಾಟಕ ರೈತ ಹೋರಾಟದ ಶಕ್ತಿಕೇಂದ್ರವಾದ ನರಗುಂದದಿಂದಲೇ ಕೃಷಿ ಕಾಯ್ದೆ ಹಿಂದೆ ಪಡೆಯುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದರು.
ರಾಜ್ಯದ ರೈತ ಹೋರಾಟದಲ್ಲಿ ಇದು ಹೊಸ ಮೈಲುಗಲ್ಲು. ಜು. 21ರಿಂದ ಉತ್ತರ-ದಕ್ಷಿಣ ಒಂದಾಗಿದೆ. ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟ ದೇಶಾದ್ಯಂತ ವ್ಯಾಪಿಸುವ ಮುನ್ಸೂಚನೆ ನೀಡಿದೆ.
ಒಗ್ಗಟ್ಟು ಪ್ರದರ್ಶನ:
ದೇಶದ ಭ್ರಷ್ಟರಲ್ಲಿ ನಡುಕ ಹುಟ್ಟಿಸಿರುವ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ, ಜಯ ಕರ್ನಾಟಕ ಸಂಘಟನೆಯ ಎನ್. ದೀಪಕ್, ಕರ್ನಾಟಕ ಪ್ರಾಂತ ರೈತ ಸಂಘದ ನಿತ್ಯಾನಂದ ಸ್ವಾಮಿ, ಕಾರ್ಮಿಕ ಸಂಘಟನೆಯ ಮಹೇಶ ಹಿರೇಮಠ, ಎಂ.ಎಸ್. ಹಡಪದ, ಬಿ.ಎಸ್. ಸೊಪ್ಪಿನ, ಮಹದಾಯಿ ನೀರಿಗಾಗಿ ಮಹಾವೇದಿಕೆ, ಕರ್ನಾಟಕ ರೈತ ಸೇನೆ, ನರಗುಂದಲ್ಲಿ ಕಳೆದ 6 ವರ್ಷದಿಂದ ನಿರಂತರ ಹೋರಾಟ ಮಾಡುತ್ತಿರುವ ರೈತ ಸೇನೆ ಕರ್ನಾಟಕದ ವೀರೇಶ ಸೊಬರದಮಠ, ಕರ್ನಾಟಕ ಜನಶಕ್ತಿ, ಜನಾಂದೋಲನ ಮಹಾಮೈತ್ರಿ, ಉತ್ತರ ಕರ್ನಾಟಕ ರೈತ ಸಂಘ, ದಲಿತ, ಕನ್ನಡಪರ ಸಂಘಟನೆಗಳ ಒಕ್ಕೂಟವೇ ಹೋರಾಟಕ್ಕೆ ಹೆಗಲು ಕೊಡಲು ಸಿದ್ಧವಾಗಿವೆ.
ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ 24 ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡು ಮುಂದಿನ ಹೋರಾಟಕ್ಕೆ ಅಣಿಯಾಗಿದ್ದಾರೆ.
ನರಗುಂದ ಬಂಡಾಯಕ್ಕೆ 41 ವರ್ಷ: ಈಡೇರದ ಅನ್ನದಾತರ ಬೇಡಿಕೆ
ಅರ್ಥಪೂರ್ಣ ಸ್ಮರಣೆ:
ಆಡಳಿತಾರೂಢ ಬಿಜೆಪಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಕಾಂಗ್ರೆಸ್ ಹಿರಿಯ ನಾಯಕ ಬಿ.ಆರ್. ಯಾವಗಲ್ಲ ಮಾಲಾರ್ಪಣೆ ಮಾಡಿ, ರೈತರ ತ್ಯಾಗವನ್ನು ಸ್ಮರಿಸಿದರು. ಹರ್ಯಾಣದಿಂದ ಆಗಮಿಸಿದ್ದ ದೀಪಕ ಲಂಬಾ, ಪಂಜಾಬ್‌ನಿಂದ ಆಗಮಿಸಿದ್ದ ಹರಕೇತ್‌ಸಿಂಗ್ ಇದು ‘ರೈತ ಹೋರಾಟದ ಸ್ವರ್ಗ’ ಎಂದು ಬಣ್ಣಿಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಮಾಲಾರ್ಪಣೆ ಮಾಡಿ, ರೈತರನ್ನು ಕೇಂದ್ರ ಸರ್ಕಾರ ದಿನ ಕಳೆದಂತೆ ಕಷ್ಟಕ್ಕೆ ದೂಡುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ಕಳಸಾ ಬಂಡೂರಿ ಹೋರಾಟ ಸಮಿತಿ ವಿಜಯ ಕುಲಕರ್ಣಿ ಮಹದಾಯಿ ಹೋರಾಟದ ಮೇಲೆ ಅಧಿಕಾರ ಹಿಡಿದವರು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಅಲ್ಪ ಸಂಖ್ಯಾತ ಕಲ್ಯಾಣ ಸಮಿತಿ, ಎಬಿವಿಪಿ, ಸಿಐಟಿಯು, ರೈತ ಸಂಘಟನೆಗಳ ವಿವಿಧ ಸಮಿತಿಗಳು ಸೇರಿದಂತೆ 48ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖ ಮಾಲಾರ್ಪಣೆ ಮಾಡಿ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿದರು.
ಹಸಿರುಮಯ...
ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಿಂದ ರೈತರು, ರೈತ ಮಹಿಳೆಯರು, ವಿವಿಧ ಸಂಘಟನೆಗಳ ಮುಖಂಡರು ಹಸಿರು ಶಾಲು ಹೊದ್ದು ಪಾಲ್ಗೊಂಡಿದ್ದು, ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಮೆರವಣಿಗೆಗಳ ಮೂಲಕ ಆಗಮಿಸುವ ಸಂದರ್ಭದಲ್ಲಿ ಹಸಿರು ಶಾಲು ತಿರುಗಿಸುತ್ತಾ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರೈತರ ಗಟ್ಟಿಧ್ವನಿ ಮತ್ತು ಹಸಿರು ಶಾಲು ಎಲ್ಲೆಡೆಯೂ ರಾರಾಜಿಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ನರಗುಂದ ಪಟ್ಟಣ ಸಂಪೂರ್ಣ ಹಸಿರುಮಯವಾಗಿತ್ತು.
ಕೃಷಿ ಕಾಯ್ದೆ ಪ್ರತಿ ಸುಟ್ಟು ರೈತ ಹುತಾತ್ಮ ದಿನಾಚರಣೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನರಗುಂದ, ಗದಗ ಜಿಲ್ಲೆಯ ನವಲಗುಂದಗಳಲ್ಲಿ ಬುಧವಾರ 41ನೇ ರೈತ ಹುತಾತ್ಮ ದಿನ ಆಚರಿಸಲಾಯಿತು. ನರಗುಂದ ಮತ್ತು ನವಲಗುಂದಗಳಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳ ಪ್ರತಿಗಳನ್ನು ಸುಡುವ ಮೂಲಕ ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಸಂಕಲ್ಪ ದಿನ ಮತ್ತು ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹರ್ಯಾಣದ ರೈತ ಹೋರಾಟಗಾರ ದೀಪಕ ಲಂಬಾ, ಪಂಜಾಬ್‌ನ ರೈತ ಹೋರಾಟಗಾರ ಹರಿಕೇತ್ ಸಿಂಗ್ ಮಾತನಾಡಿ ದೆಹಲಿ ರೈತ ಹೋರಾಟ ಜಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ರೈತರಿಗೆ ‘ನರಗುಂದ ಸಂಕಲ್ಪ’ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡುವ, ರೈತ ಹೋರಾಟವನ್ನು ಒಗ್ಗಟ್ಟಿನ ಮೂಲಕ ಮತ್ತಷ್ಟು ಗಟ್ಟಿಗೊಳಿಸಿ ಹೋರಾಟಕ್ಕೆ ಅಣಿಯಾಗುವ ಕುರಿತು ಸಿದ್ಧಪಡಿಸಲಾದ ಪ್ರತಿಜ್ಞಾವಿಧಿಯನ್ನು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಲಗಲಪುರ ನಾಗೇಂದ್ರ ಬೋಧಿಸಿದರು.
