Asianet Suvarna News Asianet Suvarna News

ನರಗುಂದ ಬಂಡಾಯಕ್ಕೆ 41 ವರ್ಷ: ಈಡೇರದ ಅನ್ನದಾತರ ಬೇಡಿಕೆ

* ನರಗುಂದದಲ್ಲಿ ಇಂದು ಹುತಾತ್ಮ ದಿನಾಚರಣೆ
* ರೈತ ಸಂಘಟನೆಗಳಿಂದ ಒಗ್ಗಟ್ಟು ಪ್ರದರ್ಶನ
* ರೈತರ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರ
 

Nargund Struggle Completed 40 Years in Gadag grg
Author
Bengaluru, First Published Jul 21, 2021, 1:41 PM IST

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜು.21): ರಾಜ್ಯದಲ್ಲಿ ರೈತ ಹೋರಾಟ ಹಾಗೂ ಸಂಘಟನೆಗೆ ಉಗಮಕ್ಕೆ ಕಾರಣವಾದ ನರಗುಂದ ರೈತ ಬಂಡಾಯ ನಡೆದು ಜು. 21ಕ್ಕೆ 40 ವರ್ಷ ಗತಿಸಿದೆ. ಇದರ ಆಚರಣೆ ರೈತ ಹಾಗೂ ವಿವಿಧ ಸಂಘಟನೆಗಳಿಂದ ನಡೆಯುತ್ತಿದೆ.

ಮಲಪ್ರಭೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಮಲಪ್ರಭೆ ನದಿಗೆ ಸವದತ್ತಿ ಬಳಿ ನವಿಲುತೀರ್ಥದಲ್ಲಿ ಅಣೆಕಟ್ಟು ನಿರ್ಮಾಣವಾಯಿತು. ಇದಕ್ಕೆ ಪ್ರತಿಯಾಗಿ ರೈತರ ಬೆಟರ್‌ಮೆಂಟ್‌ ಲೆವಿ (ಅಭಿವೃದ್ಧಿ ಕರ)ಯನ್ನು ಸರ್ಕಾರ ಹೇರಿತು. ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು. ಇದನ್ನು ಭರಿಸದೇ ಇದ್ದಾಗ ರೈತರ ಪಹಣಿ ಪತ್ರಿಕೆ ಮೇಲೆ ‘ಸರ್ಕಾರಿ’ ಎಂದು ನಮೂದಿಸಲಾಯಿತು. ಇದನ್ನು ವಿರೋಧಿಸಿ 21 ರೈತರ ನಿರಂತರ ಹೋರಾಟ ಆರಂಭವಾಯಿತು. ಇದರಲ್ಲಿ ರಾಜಶೇಖರಪ್ಪ ಹೊಸಕೇರಿ, ಶಿವಪ್ಪ ಬಾಳಿಕಾಯಿ, ಬಸವರಾಜ ಪಟ್ಟೇದ, ಶಿವಪ್ಪ ನೆಗಳೂರು, ಶಿವದೇವಗೌಡ ಪಾಟೀಲ, ಬಸಪ್ಪ ಗಾಣಿಗೇರ, ವಿ.ಎನ್‌. ಜಳಕಟ್ಟಿಇದ್ದರು.

ರೈತರ ಹೋರಾಟಕ್ಕೆ ಸರ್ಕಾರ ಮಣಿಯದೇ ಇದ್ದಾಗ, 1980ರಲ್ಲಿ ನರಗುಂದದ ತಹಸೀಲ್ದಾರ್‌ ಕಚೇರಿ ಎದುರು ರೈತರು ಸರಣಿ ಉಪವಾಸ ಆರಂಭಿಸಿದರು. ಬೇಡಿಕೆ ಸ್ಪಂದನೆ ಸಿಗದಿರುವಾಗ ಹೋರಾಟ ಹಿಂಸಾರೂಪ ತಾಳಿತು. ಜು. 21ರಂದು ನಡೆದ ಧರಣಿ ಸಂದರ್ಭದಲ್ಲಿ ರೈತರು ಅಧಿಕಾರಿಗಳ ಪ್ರವೇಶ ನಿರಾಕರಿಸಿ ತಹಸೀಲ್ದಾರ್‌ ಕಚೇರಿ ಎದುರು ಅಡ್ಡವಾಗಿ ಮಲಗಿದರು. ಅಂದಿನ ತಹಸೀಲ್ದಾರ್‌ ವರೂರು ಎಂಬವರು ರೈತರನ್ನು ತುಳಿದುಕೊಂಡೇ ಕಚೇರಿ ಒಳಗೆ ಹೋದರು. ಇದರಿಂದ ಆಕ್ರೋಶಗೊಂಡ ರೈತರು ತಹಸೀಲ್ದಾರರನ್ನು ಥಳಿಸಿದರು. ಆಗ ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಗುಂಡು ಹಾರಿಸಿದರು. ನರಗುಂದ ತಾಲೂಕು ಚಿಕ್ಕನರಗುಂದ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ಇದರಿಂದಾಗಿ ಅಂದಿನ ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಲಿಯಾಯಿತು. ಬೆಟರ್‌ಮೆಂಟ್‌ ಲೆವಿ ರದ್ದಾಯಿತು. ಆದರೆ ರೈತರ ಸಮಸ್ಯೆ ಮಾತ್ರ ಹಾಗೆ ಉಳಿದಿವೆ.

ನರಗುಂದ: 7ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

ಒಗ್ಗಟ್ಟು ಪ್ರದರ್ಶನ:

ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ರೈತರಿಗೆ ಯೋಜನೆ ಜಾರಿಗೊಳಿಸುವ ಆಶ್ವಾಸನೆ ನೀಡುತ್ತಾರೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಕಾನೂನು ತೊಡಕು ನೆಪ ಹೇಳುತ್ತಾರೆ, ಈ ಭಾಗದ ರೈತರಿಗೆ ರಾಜಕಾರಣಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂಬುದು ರೈತ ಮುಖಂಡರ ಆಕ್ರೋಶ. ಕೆಲವು ರೈತ ಮುಖಂಡರು ಚುನಾವಣೆ ಕಣಕ್ಕೆ ಇಳಿದು ಆಯ್ಕೆಯಾಗಿದ್ದಾರೆ. ಆದರೆ ರೈತರ ಸಮಸ್ಯೆ ಪರಿಹರಿಸುವ ಯತ್ನ ನಡೆಸಲೇ ಇಲ್ಲ. ಹೀಗಾಗಿ ರೈತರು ಅಂತಹ ಮುಖಂಡರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕೆಲವರು ರೈತ ಸಂಘಟನೆಗಳನ್ನು ಒಡೆದು ಸಂಘಟನೆ ಶಕ್ತಿ ಕುಂದುವಂತೆ ಮಾಡಿದ್ದಾರೆ.

ಆದರೆ ಈಗ ರಾಜ್ಯ ಎಲ್ಲ ರೈತ ಸಂಘಟನೆಗಳ ಮುಖಂಡರು ಒಂದಾಗುವ ಸೂಚನೆ ನೀಡಿದ್ದಾರೆ. ಜು. 21ರಂದು ನರಗುಂದದಲ್ಲಿ ನಡೆಯುವ 41ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಒಂದೇ ವೇದಿಕೆಯಲ್ಲಿ ಈ ಎಲ್ಲ ರೈತ ಸಂಘಟನೆಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸುವ ನಿರ್ಧಾರ ಮಾಡಿದ್ದಾರೆ. ಇದು ರೈತರಲ್ಲಿ ಆಶಭಾವನೆ ಮೊಳೆಯುವಂತೆ ಮಾಡಿದೆ.

ಕಳಸಾ-ಬಂಡೂರಿ ಯೋಜನೆಗಾಗಿ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ನಾವು ಮುಂದಿನ ದಿನಗಳಲ್ಲಿ ಜಲಾಶಯದಿಂದ ಸಂಪೂರ್ಣ ಎರಡು ಬೆಳೆಗಳಿಗೆ ನೀರು ಕೊಡುವ ವರೆಗೆ ಬ್ಯಾಂಕುಗಳಲ್ಲಿ ಕೃಷಿಗೆ ಸಾಲ ಪಡೆದುಕೊಂಡಿದ್ದನ್ನು ತುಂಬುವುದಿಲ್ಲವೆಂದು ನಿರ್ಧಾರ ಮಾಡಿದ್ದೇವೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ತಿಳಿಸಿದ್ದಾರೆ. 

ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಒಂದೇ ವೇದಿಕೆಯಲ್ಲಿ ಎಲ್ಲ ರೈತ ಸಂಘಟನೆಗಳ ಮುಖಂಡರು ಸೇರಿ ಒಗ್ಗಟ್ಟು ಪ್ರದರ್ಶಿಸಲಿದ್ದೇವೆ. ರೈತರ ಬೇಡಿಕೆ ಈಡೇರಿಕೆಗಾಗಿ ಹೋರಾಡುತ್ತೇವೆ ಎಂದು ರೈತ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದ್ದಾರೆ. 

ಮಹದಾಯಿ, ಕಳಸಾ-ಬಂಡೂರಿ ಯೋಜನೆಗಾಗಿ ಜು. 16, 2015ರಿಂದ ನಿರಂತರ ಹೋರಾಟ ನಡೆಸಿದ್ದೇವೆ. ನಮ್ಮ ಪಾಲಿನ ನೀರು ಸದ್ಯ ಸ್ವಲ್ಪ ಸಿಕ್ಕಿದೆ. ಹೆಚ್ಚಿನ ನೀರಿಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ಪಾಲಿನ ನೀರು ಪಡೆದುಕೊಳ್ಳುತ್ತೇವೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ. 
 

Follow Us:
Download App:
  • android
  • ios