ಯಲಹಂಕದ ಬೆಟ್ಟಹಲಸೂರಿನಿಂದ ರಾಜಾನುಕುಂಟೆವರೆಗಿನ ಹೊಸ ರೈಲು ಮಾರ್ಗ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಕೃಷಿ ಭೂಮಿ ನಾಶವಾಗುತ್ತದೆ ಎಂದು ಆರೋಪಿಸಿ, ತರಕಾರಿ ಮಾಲೆ ಧರಿಸಿ ವಿಭಿನ್ನವಾಗಿ ಪ್ರತಿಭಟಿಸಿ, ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು: ಯಲಹಂಕದ ಬೆಟ್ಟಹಲಸೂರಿನಿಂದ ರಾಜಾನುಕುಂಟೆವರೆಗೆ ರೈಲ್ವೆ ಇಲಾಖೆ ಪ್ರಸ್ತಾವಿಸಿರುವ ಹೊಸ ರೈಲು ಮಾರ್ಗ ಹಾಗೂ ಟರ್ಮಿನಲ್ ನಿರ್ಮಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಈ ಭಾಗದ ಕೃಷಿ ಭೂಮಿಗಳು ಸಂಪೂರ್ಣವಾಗಿ ನಾಶವಾಗಲಿವೆ ಎಂದು ಆರೋಪಿಸಿ, ರೈತರು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೃಷಿಯ ಮಹತ್ವ ತಿಳಿ ಹೇಳಿದ ಮುಖಂಡ

ಶುಕ್ರವಾರ ರೈತರು ತಮ್ಮದೇ ಬೆಳೆಗಳಾದ ಹಣ್ಣು, ತರಕಾರಿ ಹಾಗೂ ಸೊಪ್ಪುಗಳನ್ನು ಮಾಲೆಯಂತೆ ಧರಿಸಿ ಸುದ್ದಿಗೋಷ್ಠಿ ನಡೆಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಮೂಲಕ ಕೃಷಿಯ ಮಹತ್ವ ಹಾಗೂ ತಮ್ಮ ಜೀವನಾಧಾರದ ಮೇಲೆ ಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡರು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಿಂಗನಾಯಕನಹಳ್ಳಿ, ತಿಮ್ಮಸಂದ್ರ, ಬೆಟ್ಟಹಲಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ರೈಲ್ವೆ ಇಲಾಖೆಯು ಹೊಸ ರೈಲು ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಯಾವ ಯೋಜನೆ, ಎಷ್ಟು ಪ್ರಮಾಣದ ಭೂಸ್ವಾಧೀನ ಎಂಬ ಸ್ಪಷ್ಟ ಮಾಹಿತಿಯನ್ನು ರೈತರಿಗೆ ನೀಡದೇ ಅಧಿಕಾರಿಗಳು ಸರ್ವೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ನೀಡದೇ ಮತ್ತೆ ಸರ್ವೆ ನಡೆಸಲು ಬಂದಲ್ಲಿ ಅಧಿಕಾರಿಗಳಿಗೆ ಘೇರಾವ್

ಯಾವುದೇ ಮಾಹಿತಿ ನೀಡದೇ ಮತ್ತೆ ಸರ್ವೆ ನಡೆಸಲು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಘೇರಾವ್ ಮಾಡುವುದಾಗಿ ಮಂಜೇಗೌಡರು ಎಚ್ಚರಿಕೆ ನೀಡಿದರು. ಈಗಾಗಲೇ ರಾಜಾನುಕುಂಟೆ ಹಾಗೂ ಯಲಹಂಕ ರೈಲು ಜಂಕ್ಷನ್‌ಗಳು ಕೇವಲ ಆರು ಕಿಲೋಮೀಟರ್ ದೂರದಲ್ಲಿರುವುದರಿಂದ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗ್ರಾಮಸ್ಥರು ಹಾಗೂ ರೈತರಿಗೆ ನಿಜವಾಗಿಯೂ ಉಪಯೋಗವಾಗುವಂತೆ ರೈಲ್ವೆ ಅಂಡರ್‌ಪಾಸ್‌ಗಳು ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಬೆಟ್ಟಹಲಸೂರು, ಶೆಟ್ಟಿಗೆರೆ, ಚನ್ನಹಳ್ಳಿ, ಚಿಕ್ಕಸನ್ನೆ, ಐವಿಸಿ ರಸ್ತೆ, ಕೋಡಿಮಂಚನಹಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ನಿರ್ಮಿಸಲಾದ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ರೈಲ್ವೆ ಇಲಾಖೆಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಸಂಚಾಲಕ ಮಾವಳ್ಳಿಪುರ ಧನರಾಜ್ ಟಿ., ಪಿ. ಪ್ರಕಾಶ್ ಬಂಡಿ, ಟಿ.ಡಿ. ಅಂಬರೀಶ್, ಜೀರಿಗೆಬಾಬು ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.