* ಬೀಜ, ಗೊಬ್ಬರದ ಅಂಗಡಿ ಬಳಿ ಹೆಚ್ಚಿದ ಜನಸಂದಣಿ* ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಘಟನೆ* ಮಾಯವಾದ ಸಾಮಾಜಿಕ ಅಂತರ 

ಲಕ್ಷ್ಮೇಶ್ವರ(ಜೂ.03): ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿ ದಿನಸಿ ಮತ್ತು ತರಕಾರಿ ವ್ಯಾಪಾರ ವಹಿವಾಟಿಗೆ ಸರ್ಕಾರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಿದ್ದರಿಂದ ರೈತರು ಗೊಬ್ಬರ ಕೊಳ್ಳಲು ಒಮ್ಮೆಲೆ ಮುಗಿಬಿದ್ದಿದ್ದರಿಂದ ಸಾಮಾಜಿಕ ಅಂತರ ಬುಧವಾರ ಪಟ್ಟಣದಲ್ಲಿ ಮಾಯವಾಗಿತ್ತು.

ಮುಂಗಾರು ಹಂಗಾಮು ಆರಂಭವಾಗುವ ಜೂನ್‌ ಮತ್ತು ಜುಲೈ ತಿಂಗಳು ರೈತರ ಬಿತ್ತನೆಗೆ ಹೇಳಿ ಮಾಡಿಸಿದ ಅವಧಿಯಾಗಿದ್ದು, ರೈತರು ಬೀಜ ಮತ್ತು ಗೊಬ್ಬರ ಕೊಳ್ಳಲು ಅಂಗಡಿಗೆ ಧಾವಿಸಿದ್ದರಿಂದ ಗೊಬ್ಬರ ಅಂಗಡಿಗಳ ಮುಂದೆ ಜನ ಜಮಾಯಿಸಿ ಗೊಂದಲದ ಗೂಡಾಗಿರುವುದು ಕಂಡು ಬಂದಿತು. ಗೊಬ್ಬರ ಅಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುವುದರಿಂದ ಈ ವೇಳೆ ಗೊಬ್ಬರ ಕೊಳ್ಳಲು ಆಗಮಿಸುವ ರೈತರಿಗೆ ಪೊಲೀಸರು ಕಿರುಕುಳ ನೀಡುತ್ತಾರೆ ಎನ್ನುವ ಆರೋಪ ರೈತರಿಂದ ಕೇಳಿಬಂದಿತು.

ಲಾಕ್‌ಡೌನ್‌ ಎಫೆಕ್ಟ್‌: ಹೆಚ್ಚಿದ ಅಕ್ರಮ ಮದ್ಯದ ಹಾವಳಿ

ಅದಕ್ಕಾಗಿ ಗೊಬ್ಬರದ ಅಂಗಡಿಗಳ ಸಮಯ ಹೆಚ್ಚಳ ಮಾಡಿದಲ್ಲಿ ರೈತರು ಗದ್ದಲವಿಲ್ಲದೆ ಎಲ್ಲ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿ ಗೊಬ್ಬರ ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಬಹುತೇಕ ವ್ಯಾಪಾರಿಗಳ ಅಭಿಪ್ರಾಯವಾಗಿತ್ತು.
ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಿ-ರೈತರು ಗೊಬ್ಬರ ಕೊಳ್ಳಲು ಪಟ್ಟಣಕ್ಕೆ ಆಗಮಿಸುವ ವೇಳೆಯಲ್ಲಿ ಹಾಗೂ ಟ್ರ್ಯಾಕ್ಟರ್‌ಗಳಿಗೆ ಬೇಕಾಗುವ ಡೀಸೆಲ್‌ಕೊಳ್ಳಲು ಆಗಮಿಸುವ ರೈತರಿಗೆ ಪೊಲೀಸರು ಸುಖಾ ಸುಮ್ಮನೆ ಕಿರುಕುಳ ನೀಡುವುದು ಹಾಗೂ ದಂಡ ಹಾಕುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಬಡ ರೈತರು ದಂಡ ಹೇಗೆ ಕಟ್ಟಬೇಕು, ಬಿತ್ತನೆ ಸಮಯವಾಗಿದ್ದರಿಂದ ಸಾಲ ಸೋಲ ಮಾಡಿ ಬೀಜ, ಗೊಬ್ಬರ ಕೊಳ್ಳುವಲ್ಲಿ ಹೆಣಗುತ್ತಿರುವ ರೈತರಿಗೆ ದಂಡ ಹೊರೆಯಾಗುತ್ತದೆ. ಆದ್ದರಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಲ್ಲಿ ಗದಗ ಎಸ್‌ಪಿ ಅವರು ಇತ್ತ ಕಡೆಗೆ ಗಮನ ಹರಿಸುವಂತೆ ರಾಮಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ ಮನವಿ ಮಾಡಿದ್ದಾರೆ.