ಕಳಸಾ-ಬಂಡೂರಿಗಾಗಿ ಸಿಎಂ ಭೇಟಿಯಾದ ರೈತರು

*   ಕೂಡಲೇ ಅನುಷ್ಠಾನ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ 
*   ಕಳಸಾ- ಬಂಡೂರಿ ಹೋರಾಟದಿಂದಲೇ ನಾವು ಕೂಡ ಅಧಿಕಾರಕ್ಕೆ ಬಂದಿದ್ದೇನೆ
*   ಯೋಜನೆ ಅನುಷ್ಠಾನಕ್ಕೆ ಬದ್ಧ: ಸಿಎಂ ಬೊಮ್ಮಾಯಿ 

Farmers Met CM Basavaraj Bommai for Kalasa Banduri Mahdayi Plan grg

ಹುಬ್ಬಳ್ಳಿ(ಅ.06):  ಕಳಸಾ ಬಂಡೂರಿ ಹಾಗೂ ಮಹದಾಯಿ(Mahadayi) ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯ ರೈತರು ಮಂಗಳವಾರ ಬೆಂಗಳೂರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ(Basavaraj Bommai) ಮನವಿ ಸಲ್ಲಿಸಿದ್ದಾರೆ. 

ಜವಳಿ, ಕಬ್ಬು ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತ ಮುಖಂಡರು, ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದು 3 ವರ್ಷಗಳು ಮುಗಿದಿವೆ. ಆದರೂ ಈವರೆಗೂ ಮಹದಾಯಿ ಕೆಲಸ ಶುರುವಾಗಿಲ್ಲ. ಕೂಡಲೇ ಅನುಷ್ಠಾನ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಮಹದಾಯಿ ಉತ್ತರ ಕರ್ನಾಟಕದ(North Karnataka) ಬಹುವರ್ಷಗಳ ಬೇಡಿಕೆ. ಕಳಸಾ- ಬಂಡೂರಿ(Kalasa Banduri) ಹೋರಾಟದಿಂದಲೇ ನಾವು ಕೂಡ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ. ಕೆಲ ತಾಂತ್ರಿಕ ತೊಂದರೆಗಳಿಂದಾಗಿ ವಿಳಂಬವಾಗಿದೆ. ಆದಷ್ಟು ಬೇಗನೆ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.

ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ಕಳೆದ 2250 ದಿನಗಳಿಂದ ಮಹದಾಯಿಗಾಗಿ ಹೋರಾಟ ನಡೆದಿದೆ. ಕೇಂದ್ರ ಅಥವಾ ರಾಜ್ಯ ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ರೈತರ ತಾಳ್ಮೆಯನ್ನು ಪರೀಕ್ಷಿಸದೇ ಕಾಲ ಮಿತಿಯೊಳಗೆ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ರೈತ ಸಂಘಟನೆಗಳೆಲ್ಲ ಒಗ್ಗೂಡಿ ಮತ್ತೊಂದು ರೈತ ಬಂಡಾಯಕ್ಕೆ ಸಿದ್ಧತೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೋರಾಟ ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯನವರ, ಷಣ್ಮುಖ ಗುರಿಕಾರ, ಬಸಣ್ಣ ಬೆಳವಣಕಿ, ಅಡಿವೆಪ್ಪ ಮನಮಿ, ಸಿದ್ದಣ್ಣ ಕಿಟಗೇರಿ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios