ರೈತನ ಕೈ ಹಿಡಿಯುತ್ತಾ ರೋಹಿಣಿ ಮಳೆ?: ಭೂಮಿ ಹದಗೊಳಿಸಿ ಸಜ್ಜುಗೊಳಿಸಿದ ಅನ್ನದಾತ
ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆ ಆರಂಭ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಹುತೇಕ ಕೃಷಿ ಭೂಮಿಯಲ್ಲಿ ಎತ್ತುಗಳ ಮೂಲಕ ಗಳೆ ಹೊಡೆಯುತ್ತಿರುವ ರೈತ.
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಮೇ.27): ರೋಹಿಣಿ ಮಳೆ ನಂಬಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವುದರ ಜೊತೆಗೆ ಕೃಷಿ ಪರಿಕರಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ರೈತರ ನಂಬಿಗಸ್ತ ಮಳೆ ರೋಹಿಣಿ ಮೇ 25 ರಿಂದ ಪ್ರಾರಂಭವಾಗಿದ್ದು, ಈ ರೋಹಿಣಿ ಮಳೆ ಕೈ ಹಿಡಿದರೆ ಬದುಕು ಬಂಗಾರವಾಗುತ್ತದೆ ಎಂಬ ಪ್ರಬಲ ನಂಬಿಕೆ ರೈತರ ಜನಮಾಸದಲ್ಲಿ ಪ್ರತೀತಿಯಾಗಿದೆ. ಬೇರೆ ಕಡೆಗಳಲ್ಲಿ ರೋಹಿಣಿ ಮಳೆ ಸುರಿದಿದೆ. ಆದರೆ, ರಬಕವಿ-ಬನಹಟ್ಟಿತಾಲೂಕಿನಲ್ಲಿ ಮಾತ್ರ ಮುನಿಸಿಕೊಂಡಿದ್ದು, ಇನ್ನೂ ಕಾಲಾವಕಾಶ ಇರುವುದರಿಂದ ಪ್ರತಿ ಬಾರಿಯೂ ರೋಹಿಣಿ ಮಳೆಗಾಗಿ ಕಾಯುವ ರೈತರು ಬಿತ್ತನೆ ಬೀಜವನ್ನಿಟ್ಟುಕೊಂಡು ಆಕಾಶದತ್ತ ಮುಖ ಮಾಡಿರುವುದು ಸರ್ವೆ ಸಾಮಾನ್ಯ. ಈ ಬಾರಿ ಪೂರ್ವಭಾವಿಯಾಗಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಬೇಕಾದ ಕುಂಟೆ, ಪಲಗಾ, ಕೂರಿಗೆ, ನೊಗ, ಬುಕ್ಕಾ ಸಿದ್ಧತೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಡಿಗೇರ ಹಾಗೂ ಕಮ್ಮಾರರ ಬಳಿ ತಮ್ಮ ಪರಿಕರಗಳ ದುರಸ್ತಿ ಮಾಡಿಸಿಕೊಂಡು ಬಿತ್ತನೆಗೆ ಸಿದ್ಧವಾಗಿದ್ದಾರೆ. ತಾಲೂಕಿನ ರೈತರ ಜೀವಸೆಲೆಯಾಗಿರುವ ಕೆಲವು ಭಾಗÜ ಕೃಷ್ಣಾ ನದಿಯ ನೀರನ್ನು ಅವಲಂಬಿಸಿದ್ದರೆ ಇನ್ನು ಕೆಲವು ಭಾಗ ಮಳೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಯನ್ನು ಇಲ್ಲಿನ ರೈತರು ಅವಲಂಭಿಸಿದ್ದಾರೆ.
BAGALKOT: ಅಕ್ರಮ ಜಾನುವಾರು ಸಾಗಾಟ: ಮೂವರ ಬಂಧನ
ಮುಂಗಾರು ಪೂರ್ವ ಚಟುವಟಿಕೆ ಆರಂಭ:
ಮುಂಬರುವ ರೋಹಿಣಿ ಮಳೆಯನ್ನು ನಂಬಿ ಈ ಭಾಗದ ರೈತರ ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆಗಳನ್ನು ಭರದಿಂದ ನಡೆಸಿದ್ದಾರೆ. ಈ ಭಾಗದಲ್ಲಿ ಮುಂಗಾರು ನಿರೀಕ್ಷೆಯನ್ನಿಟ್ಟುಕೊಂಡು ಮುಂಗಾರು ಬೆಳೆಗಳಾದ ದ್ವಿದಳ ಧಾನ್ಯಗಳಾದ ಸೋಯಾಬೀನ್, ಬೇಳೆಕಾಳುಗಳು, ಉದ್ದು, ಹೆಸರು, ಮಡಿಕೆಕಾಳು ಸೇರಿದಂತೆ ವಿವಿಧ ಬೆಳೆಗಳ ಜೊತೆ ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಅರಿಶಿಣ ಬಿತ್ತನೆ ಮಾಡಲು ರೈತರು ತಮ್ಮ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.
ಕೂಲಿ ಕಾರ್ಮಿಕರ ಕೊರತೆ:
ಪ್ರತಿವರ್ಷದಂತೆ ಈ ಬಾರಿಯೂ ಕೃಷಿ ಕೂಲಿ ಕಾರ್ಮಿಕರ ಕೊರತೆ ತಾಲೂಕಿನಾದ್ಯಂತ ಕೃಷಿಕ ವಲಯದಲ್ಲಿ ಕಂಡುಬಂದಿದೆ. ಕೃಷಿ ಕೂಲಿಕಾರರ ಸಂಖ್ಯೆ ಕ್ಷೀಣಿಸುತ್ತಿದೆ. ಇದ್ದರಿಂದ ರೈತರು ಬಹುತೇಕ ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಕೂಲಿ ಕಾರ್ಮಿಕರ ಕೊರತೆಯ ನಡುವೆಯೂ ಉತ್ತಮ ಬೆಳೆ ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇತ್ತೀಚಿಗೆ ಯಾಂತ್ರಿಕ ಕೃಷಿ ಪದ್ಧತಿಯನ್ನು ಪ್ರತಿ ಗ್ರಾಮದಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ಸಲಕರಣೆ ಬಾಡಿಗೆ:
ಭೂಮಿ ಉಳುಮೆಗೆ ಟ್ರ್ಯಾಕ್ಟರ್ ಹಾಗೂ ಎತ್ತುಗಳಿಗೆ ಭಾರೀ ಬೇಡಿಕೆ ಬಂದಿದೆ. ಟ್ರ್ಯಾಕ್ಟರ್ ಉಳುಮೆ ಮಾಡಲು ಎಕರೆಗೆ .2100 ಹಾಗೂ ಎತ್ತುಗಳ ಉಳುಮೆಗೆ ಒಂದು ಎಕರೆಗೆ .1600ಗಳಷ್ಟುಬೇಡಿಕೆ ಇದೆ. ಒಂದು ಎಕರೆ ನೆಲ ಬೀಜ ನಾಟಿ ಮಾಡಲು ಸಿದ್ಧ ಮಾಡಲು ಸುಮಾರು .7000 ರಿಂದ 8000 ವರೆಗೆ ಬಾಡಿಗೆ ಆಗುತ್ತದೆ.
Karnataka Election 2023: 'ವಿಶ್ವಾಸ ದ್ರೋಹದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲು'
ರೋಹಿಣಿ ಮಳೆಗೆ ಯಾಕೇ ಮಹತ್ವ?
ರೋಹಿಣಿ ಮಳೆಗೆ ಬಿತ್ತಿದರೆ ಓಣಿಯಲ್ಲ ಕಾಳು ಎಂಬ ಮಾತಿನಂತೆ ರೋಹಿಣಿ ಮಳೆ ಸುರಿದರೆ ರೈತರ ಬಾಳು ಬಂಗಾರವಾಗುವುದು. ಸತತ ಆರೇಳು ತಿಂಗಳ ಬಿಸಿಲ ಧಗೆಗೆ ಬಾಯಿದೆರೆದು ನಿಂತ ಭೂತಾಯಿ ಒಲಡಲಿಗೆ ರೋಹಿಣಿ ಮಳೆ ಸುರಿದು ಸಂತೈಸುತ್ತಾದೆ. ಇದೇ ಕಾರಣಕ್ಕೆ ಈ ಮಳೆ ಸರಿಯಾಗಿ ಸುರಿದರೆ ಬೆಳೆಗೆ ಯಾವುದೇ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಅನ್ನದಾತರಲ್ಲಿದೆ. ಇನ್ನೂ ಉತ್ತಮ ಬೆಳೆ ಬಂದು ರೈತರು ಹೆಚ್ಚು ಲಾಭ ಪಡೆದುಕೊಳ್ಳುತ್ತಾರೆ. ಹೀಗಾಗಿ ರೈತರು ಇದೀಗ ಬಿತ್ತನೆ ಮಾಡಿ ರೋಹಿಣಿ ಮಳೆಗೆ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾನೆ.
ರೈತರು ಸದ್ಯ ರೋಹಿಣಿ ಮಳೆ ನಿರೀಕ್ಷೆಯಲ್ಲಿದ್ದಾರೆ. ಈ ಮಳೆ ಸಮೃದ್ಧಿಯಾಗಿ ಸುರಿದರೆ ರೈತನ ಬದುಕು ಬಂಗಾರವಾಗುವುದರಲ್ಲಿ ಎರಡು ಮಾತಿಲ್ಲ. ಈ ಮಳೆಯ ಕಾಲದಲ್ಲಿ ಯಾವುದೇ ಬೆಳೆಯ ಬೀಜ ಬಿತ್ತನೆ ಮಾಡಿದರೂ ಬೆಳೆಗಳಿಗೆ ಮುಂದೆ ಬರುವ ರೋಗಗಳು ಕಡಿಮೆ, ಬೆಳೆ ಸಮೃದ್ಧಿಯಾಗಿ ಬರುತ್ತದೆ ಅಂತ ಜಗದಾಳದ ಸಾವಯವ ಕೃಷಿಕರು ಸದಾಶಿವ ಬಂಗಿ ತಿಳಿಸಿದ್ದಾರೆ.