ಕೊಡಗು: ಕಾಫಿ ಬೀಜ ರಕ್ಷಣೆಗೆ ಸಿಸಿ ಕ್ಯಾಮೆರಾ ಮೊರೆ ಹೋದ ರೈತರು..!
ಕಾಫಿಗೆ ಉತ್ತಮ ಬೆಲೆ ಬಂದಿರುವುದು ಕಳ್ಳ, ಕಾಕರ ಆತಂಕವೂ ಹೆಚ್ಚಿದೆ. ಕಳ್ಳರಿಂದ ಕಾಫಿ ಬೀಜಗಳನ್ನು ರಕ್ಷಿಸಿಕೊಳ್ಳಲು ರೈತರು ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಫೆ.07): ಕಾಫಿ ಬೀಜಕ್ಕೆ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಬೆಲೆ ಬಂದಿದ್ದು ಒಳ್ಳೆಯ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಕಾಫಿಗೆ ಉತ್ತಮ ಬೆಲೆ ಬಂದಿರುವುದು ಕಳ್ಳ, ಕಾಕರ ಆತಂಕವೂ ಹೆಚ್ಚಿದೆ. ಕಳ್ಳರಿಂದ ಕಾಫಿ ಬೀಜಗಳನ್ನು ರಕ್ಷಿಸಿಕೊಳ್ಳಲು ರೈತರು ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.
ಹೌದು, ಕೊಡಗು ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯಷ್ಟು ಮಳೆ ಬಾರಲಿಲ್ಲ. ಆದರೂ ಕಾಫಿ ಬೆಳೆ ಉತ್ತಮ ಫಸಲನ್ನೇ ನೀಡಿದೆ. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಕಾಫಿ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಕಳೆದ ಎರಡು ವರ್ಷಗಳಲ್ಲಿ 20 ರಿಂದ 30 ಪರ್ಸೆಂಟ್ ಕಾಫಿ ಬೆಲೆ ಜಾಸ್ತಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂರುವರೆ ಸಾವಿರದಿಂದ ನಾಲ್ಕುವರೆ ಸಾವಿರ ಇದ್ದ ಕಾಫಿ ಬೆಲೆ ಈ ವರ್ಷ ಬರೋಬ್ಬರಿ ಏಳುವರೆಯಿಂದ 8 ಸಾವಿರ ರೂಪಾಯಿಗೆ ಏರಿಕೆ ಕಂಡಿದೆ. ಹೀಗಾಗಿ ಉತ್ತಮ ಆದಾಯ ಗಳಿಕೆಯ ನಿರೀಕ್ಷೆಯಲ್ಲಿ ಕೊಡಗಿನ ಕಾಫಿ ಬೆಳೆಗಾರರಿದ್ದಾರೆ. ಇದು ಸಂತಸದ ವಿಷಯವಾದರೂ ಕಾಫಿಯನ್ನು ಕಳ್ಳರಿಂದ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!
ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲಿನಲ್ಲಿ ಕಾಫಿ ಬೆಳೆಗಾರರಾದ ಬೋಪಣ್ಣ ಅವರು ಉತ್ತಮ ಕಾಫಿ ಬೆಳೆ ಬೆಳೆದಿದ್ದು, ಸಾವಿರಾರು ಚೀಲ ಕಾಫಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಕೊಯ್ಲು ಮಾಡಿದ ಕಾಫಿಯನ್ನು ತಮ್ಮ ಗದ್ದೆಗಳಲ್ಲಿಯೇ ಕಣ ಮಾಡಿ ಕಾರ್ಮಿಕರನ್ನು ಬಳಸಿ ಒಣಗಿಸುತ್ತಿದ್ದಾರೆ. ಆದರೆ ಕಣದಿಂದ ಕಾಫಿ ಕಳ್ಳತನವಾಗಬಹುದು ಎಂಬ ಆತಂಕ ಶುರುವಾಗಿದೆ. ಹೀಗಾಗಿ ಗದ್ದೆಗಳಲ್ಲಿ ಮಾಡಿರುವ ಕಾಫಿ ಕಣಕ್ಕೆ ಬೋಪಣ್ಣ ಅವರು ಸಾವಿರಾರು ರೂಪಾಯಿ ವ್ಯಯಿಸಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಜೊತೆಗೆ ಹಗಲು ರಾತ್ರಿ ಕಾಫಿ ಕಾಯುವುದಕ್ಕಾಗಿಯೇ ಇಬ್ಬರು ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ.
ಈ ಕಾರ್ಮಿಕರು ಕಣದಲ್ಲಿಯೇ ತಂಗುತ್ತಿದ್ದು ಅದಕ್ಕಾಗಿ ಭತ್ತದ ಹುಲ್ಲಿನಿಂದ ಗುಡಿಸಲು ಮಾಡಿಕೊಂಡಿದ್ದಾರೆ. ಕಾರ್ಮಿಕರು ತೋಟಗಳಲ್ಲಿ ಕಾಫಿ ಗಿಡಗಳಿಂದ ಹಣ್ಣನ್ನು ಕೊಯ್ಲು ಮಾಡಿ ಕಣಗಳಿಗೆ ತಂದು ಹಾಕಿದರೆ, ಕಣದಲ್ಲಿ ಕಾಫಿ ಒಣಗಿಸಲಾಗುತ್ತಿದೆ. ಒಂದೆಡೆಯೇ ಕಾಫಿ ಬೀಜಗಳನ್ನು ಒಣಗಿಸಲು ರಾಶಿ ಹಾಕಿರುವುದರಿಂದ ಕಳ್ಳರು ಕಾಫಿ ಕದಿಯುವುದು ಸುಲಭ. ಒಂದು ವೇಳೆ ಕಾಫಿ ಕಳವಾದಲ್ಲಿ ವರ್ಷವಿಡೀ ಕಷ್ಟಪಟ್ಟು ಬೆಳೆದ ಕಾಫಿ ಬೆಳೆ ಇನ್ನೇನು ಬಾಯಿಗೆ ಬರಬೇಕು ಎನ್ನುವಾಗ ಲಕ್ಷಾಂತರ ಮೌಲ್ಯದ ಕಾಫಿ ಕೈತಪ್ಪಿ ಹೋದರೆ ಬಾರೀ ನಷ್ಟವಾಗುತ್ತದೆ. ಹೀಗಾಗಿಯೇ ಬೆಳೆಗಾರರು ಈ ಬಾರಿ ಸಿಸಿ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಬೆಳೆಗಾರರಾದ ಬೋಪಣ್ಣ ಅವರ ಮನೆಗೂ ಕಾಫಿ ಕಣಕ್ಕೂ ಸುಮಾರು ಒಂದು ಕಿಲೋ ಮೀಟರ್ ದೂರವಿದೆ. ಹೀಗಾಗಿ ದಿನದ 24 ಗಂಟೆಯೂ ಕಾಫಿ ಕಣದತ್ತಲೇ ಹೋಗಿ ನೋಡುವುದು ಕಷ್ಟ. ಇಬ್ಬರು ಕಾರ್ಮಿಕರನ್ನು ಅಲ್ಲಿಯೇ ಇರಲು ನೇಮಿಸಿಕೊಳ್ಳಲಾಗಿದೆ ಆದರೂ ಅವರು ಕಾಫಿ ಕುಡಿಯಲೋ ಅಥವಾ ನಿತ್ಯ ಕರ್ಮಗಳಿಗೋ ಹೋದಲ್ಲಿ ಆಗಲೂ ಕಾಫಿ ಕಳವು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಸಿಸಿ ಕ್ಯಾಮೆರಾಗಳಿಗೆ ಮೊರೆ ಹೋಗಿದ್ದಾರೆ.
ಸಿಸಿ ಕ್ಯಾಮೆರಾಗಳಿಂದ ನೇರವಾಗಿ ತಮ್ಮ ಮೂರ್ನಾಲ್ಕು ಮೊಬೈಲ್‌ಗಳಿಗೂ ಸಂಪರ್ಕ ಕಲ್ಪಿಸಿಕೊಂಡಿದ್ದು ಎಲ್ಲಿಂದಲಾದರೂ ಕಾಫಿ ರಕ್ಷಣೆ ಮೇಲೆ ಕಣ್ಣಿಡಬಹುದು. ಒಟ್ಟಿನಲ್ಲಿ ಈ ವರ್ಷ ಕಾಫಿಗೆ ಉತ್ತಮ ಬೆಲೆ ಬಂದಿರುವುದರಿಂದ ಬೆಳೆಗಾರರು ಕಣಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಕಾಫಿ ಕಾಯ್ದುಕೊಳ್ಳುತ್ತಿದ್ದಾರೆ.