ಕೊಟ್ಟೂರು ಎಪಿಎಂಸಿಗೆ ಮುತ್ತಿಗೆ ಹಾಕಿದ ರೈತರು
ಮಾರಾಟಕ್ಕೆ ತಂದಿದ್ದ ಸೂರ್ಯಕಾಂತಿಗೆ ಮಂಗಳವಾರಕ್ಕಿಂತ ಕಡಿಮೆ ದರ ನಿಗದಿಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ರೈತರು ಕೊಟ್ಟೂರು ಎಪಿಎಂಸಿ ಕಾರ್ಯಾಲಯಕ್ಕೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ| ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಸೂರ್ಯಕಾಂತಿಯನ್ನು ಉತ್ತಮ ದರಕ್ಕೆ ಮಾರಾಟ ಮಾಡುವ ಕನಸು ಹೊತ್ತು ಬಂದಿದ್ದರು|
ಕೊಟ್ಟೂರು(ಅ.5): ಮಾರಾಟಕ್ಕೆ ತಂದಿದ್ದ ಸೂರ್ಯಕಾಂತಿಗೆ ಮಂಗಳವಾರಕ್ಕಿಂತ ಕಡಿಮೆ ದರ ನಿಗದಿಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ರೈತರು ಕೊಟ್ಟೂರು ಎಪಿಎಂಸಿ ಕಾರ್ಯಾಲಯಕ್ಕೆ ಶುಕ್ರವಾರ ಮಧ್ಯಾಹ್ನ ದಿಢೀರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೊಟ್ಟೂರು ಎಪಿಎಂಸಿಯಲ್ಲಿ ಮಂಗಳವಾರ ಮತ್ತು ಶುಕ್ರವಾರ ಸುರ್ಯಕಾಂತಿ ಮಾರಾಟ ನಡೆಸುವ ಪದ್ದತಿಯನ್ನು ಎಪಿಎಂಸಿ ಆಡಳಿತ ನಡೆಸುತ್ತ ಬಂದಿದೆ. ಅದರಂತೆ ಕೊಟ್ಟೂರು ಸುತ್ತಮುತ್ತಲಿನ ಕೋಗಳಿ, ಅಲಬೂರು, ಚಿನ್ನೆನಹಳ್ಳಿ, ಮತ್ತಿತರ ಗ್ರಾಮಗಳ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಸೂರ್ಯಕಾಂತಿಯನ್ನು ಉತ್ತಮ ದರಕ್ಕೆ ಮಾರಾಟ ಮಾಡುವ ಕನಸು ಹೊತ್ತು ಬಂದಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶುಕ್ರವಾರ ಇಲ್ಲಿನ ಮಾರುಕಟ್ಟೆಗೆ ಸುಮಾರು 1000ಕ್ಕೂ ಹೆಚ್ಚು ಕ್ವಿಂಟಲ್‌ನಷ್ಟು ಸೂರ್ಯಕಾಂತಿ ಮಾರಾಟಕ್ಕೆ ಬಂದಿತ್ತು. ಮಧ್ಯಾಹ್ನ 1. 30ರ ವೇಳೆಗೆ ಖರೀದಿದಾರರು ರೈತರು ತಂದಿದ್ದ ಸೂರ್ಯಕಾಂತಿಯನ್ನು ಖರೀದಿಸಲು ತಮ್ಮ ದರವನ್ನು ಪಟ್ಟಿಯಲ್ಲಿ ನಮೂದಿಸಿದ್ದರು. ಖರೀದಿದಾರರು ಇದರ ಪ್ರಕಾರ ಸೂರ್ಯಕಾಂತಿ ಬೆಳೆಯನ್ನು ಖರೀದಿಸಲು . 4089 ಗರಿಷ್ಠ ದರವೆಂತಲೂ, 2605 ಕನಿಷ್ಠ ದರ ಎಂದು ಮಾರಾಟ ಮಾಡಲು ನಮೂದಿಸಿದರು.
ಖರೀದಿದಾರರು ದರ ನಿಗದಿ ಮಾಡುತ್ತಿರುವ ಸಂಗತಿಯನ್ನು ತಿಳಿದ ರೈತರು ಒಮ್ಮೆಲೇ ಆಕ್ರೋಶಗೊಂಡು ಕಳೆದ ಮಂಗಳವಾರದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ 4490 ಗರಿಷ್ಠ, . 2811 ಕನಿಷ್ಠ ದರ ನಿಗದಿಗೊಂಡಿತ್ತು. ಆದರೆ ಇದೀಗ ಏಕಾಏಕಿ ದರ ಕಡಿಮೆ ಮಾಡುವುದರ ಹಿಂದೆ ದೊಡ್ಡ ಷಡಂತ್ರ್ಯ ನಡೆದಿದೆ ಎಂದು ಆರೋಪಿಸಿ ಎಪಿಎಂಸಿ ಕಾರ್ಯಾಲಯದತ್ತ ತೆರಳಿ ಮುತ್ತಿಗೆ ಹಾಕಿದರು. ಎಪಿಎಂಸಿ ಆಡಳಿತಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಕೊಟ್ಟೂರು ಪೊಲೀಸರು ಎಎಸ್‌ಐ ನಾಗರತ್ನಮ್ಮ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಇದಕ್ಕೆ ಸೊಪ್ಪು ಹಾಕದ ರೈತರು ಮತ್ತಷ್ಟು ಬಗೆಯಲ್ಲಿ ಗಲಾಟೆ ಮಾಡುತ್ತ ಘೋಷಣೆಗಳನ್ನು ಕೂಗುತ್ತ ಅಂಗಡಿಯೊಂದರ ಬಳಿ ನಡೆಯುತ್ತಿದ್ದ ವ್ಯಾಪಾರವನ್ನು ಸ್ಥಗಿತಗೊಳಿಸಲು ಮುಂದಾದರು. ಪರಿಸ್ಥಿತಿ ಮತ್ತಷ್ಟುವಿಕೋಪಕ್ಕೆ ತಿರುಗುವ ಸಾಧ್ಯತೆಯನ್ನು ಪರಿಗಣಿಸಿ ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ, ಕಾರ್ಯದರ್ಶಿ ವಿ.ಜಿ. ಹಿರೇಮಠ ಆಗಮಿಸಿ ರೈತರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಅಲ್ಲದೆ ಅವರ ಸಮಸ್ಯೆಯನ್ನು ಆಲಿಸಿದರು. ರೈತರು ತಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಒತ್ತಾಯಿಸಲು ಮುಂದಾದರು.
ಅಧ್ಯಕ್ಷ ಬೂದಿ ಶಿವಕುಮಾರ ಕಾರ್ಯದರ್ಶಿ ವಿ.ಜಿ. ಹಿರೇಮಠ, ಖರೀದಿದಾರರನ್ನು ಸಂಪರ್ಕಿಸಿ ಇನ್ನಷ್ಟುದರ ಹೆಚ್ಚಿಸಿ ಸೂರ್ಯಕಾಂತಿಯನ್ನು ಖರೀದಿಸುವಂತೆ ಸೂಚಿಸಿದರು. ಇದಕ್ಕೆ ಒಪ್ಪದ ಖರೀದಿದಾರರು ಇಡೀ ರಾಷ್ಟ್ರದಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಆನ್‌ಲೈನ್ ಪದ್ಧತಿಯಂತೆ ವಹಿವಾಟು ನಡೆಯುತ್ತಿದೆ. ನಾವು ನಿಗದಿ ಮಾಡಿರುವ ದರ ಉಳಿದೆಲ್ಲಾ ಮಾರುಕಟ್ಟೆಗಳಿಗಿಂತ ಹೆಚ್ಚಿದ್ದು, ಯಾವುದೇ ಕಾರಣಕ್ಕೂ ಮತ್ತಷ್ಟು ಹೆಚ್ಚು ನಮೂದಿಸಲು ತಯಾರಿಲ್ಲ. ಅಲ್ಲದೆ ರೈತರು ದರ ತೃಪ್ತಿ ತಂದರೆ ಮಾರಾಟ ಮಾಡಲಿ, ಇಲ್ಲದಿದ್ದರೆ ಬೇಡ ಎಂದು ಹೇಳಿದರು.
ಅಧ್ಯಕ್ಷ ಮತ್ತು ಕಾರ್ಯದರ್ಶಿ ಖರೀದಿದಾರರು ಸೂಚಿಸಿರುವಂತೆ ಸೂರ್ಯಕಾಂತಿ ಬೆಲೆ ತಮಗೆ ತೃಪ್ತಿಯಾದರೆ ಮಾರಾಟ ಮಾಡಲು ಮುಂದಾಗಿ. ಇಲ್ಲದಿದ್ದರೆ ತಿರಸ್ಕರಿಸಿ ಎಂದು ಹೇಳಿದರು. ಆಗ ಸಮಾಧಾನಗೊಂಡ ರೈತರು ತಮ್ಮ ತೀರ್ಮಾನ ನಂತರ ತಿಳಿಸುವುದಾಗಿ ಹೇಳಿ ಪ್ರತಿಭಟನೆ ಹಿಂಪಡೆದರು.
ಈ ಬಗ್ಗೆ ಮಾತನಾಡಿದ ಕೋಗಳಿತಾಂಡದ ಮಲ್ಲಿಕಾರ್ಜುನ ನಾಯ್ಕ ಅವರು, ಕೊಟ್ಟೂರು ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಖರೀದಿಸಲು ಕೇವಲ ನಾಲ್ವರು ಖರೀದಿದಾರರು ಬರುತ್ತಿದ್ದು, ಅವರು ನಿಗದಿಗೊಳಿಸಿದ ದರವೇ ಅಂತಿಮವಾಗಿದೆ. ಎಪಿಎಂಸಿ ಆಡಳಿತ ಬೇರೆ ಖರೀದಿದಾರರನ್ನು ಕರೆಯಿಸಿ ನಮಗೆ ತೃಪ್ತಿಯಾಗುವ ದರ ನಿಗದಿಗೊಳಿಸಬೇಕು. ಮಂಗಳವಾರದ ಮಾರುಕಟ್ಟೆಯಲ್ಲಿ ನಿಗದಿಗೊಂಡ ದರದಲ್ಲಿ ಸೂರ್ಯಕಾಂತಿ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೊಟ್ಟೂರು ಎಪಿಎಂಸಿಯಲ್ಲಿ ಸೂರ್ಯಕಾಂತಿಗೆ ನಿಗದಿಗೊಂಡ ದರ ರಾಜ್ಯದ ಇತರ ಎ.ಪಿ.ಎಂ.ಸಿ ಮಾರುಕಟ್ಟೆಗಿಂತ ಹೆಚ್ಚಿದೆ. ಇದರಲ್ಲಿ ಯಾವುದೇ ಮೋಸ, ಅನ್ಯಾಯವಾಗಿಲ್ಲ. ಆನ್‌ಲೈನ್ ಮೂಲಕ ದರ ನಿಗದಿ ಪಡಿಸಲಾಗಿದ್ದು, ರೈತರು ಉಳಿದ ಎಪಿಎಂಸಿಗಳಲ್ಲಿನ ಬೆಲೆ ಪರಿಶೀಲಿಸಬಹುದು ಮತ್ತು ತಮಗೆ ತೃಪ್ತಿಯಾದ ದರಕ್ಕೆ ಸೂರ್ಯಕಾಂತಿ ಮಾರಾಟ ಮಾಡಬಹುದು ಎಂದು ಕೊಟ್ಟೂರು ಎಪಿಎಂಸಿ ಕಾರ್ಯದರ್ಶಿ ವಿ.ಜಿ. ಹಿರೇಮಠ ಅವರು ತಿಳಿಸಿದ್ದಾರೆ.