ಚಿಕ್ಕಮಗಳೂರು: ಲೋಡ್ ಶೆಡ್ಡಿಂಗ್ ವಿರುದ್ಧ ಬೀದಿಗಳಿದ ಅನ್ನದಾತರು
ಅನಿಯಂತ್ರಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.17): ಅನಿಯಂತ್ರಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ತಾಲ್ಲೂಕು ಕಚೇರಿಯಿಂದ ಮೆಸ್ಕಾಂ ಕಚೇರಿ ವರೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದ್ದಲ್ಲದೆ ಕೂಡಲೇ ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ದೀಪ ಹಚ್ಚಲು ಸೀಮೆ ಎಣ್ಣೆ ಸಿಗುವುದಿಲ್ಲ :
ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ಮಾತನಾಡಿ, ಸಂಜೆ 7 ರಿಂದ 8.15 ರ ವರೆಗೆ ಒಂದು ಬಾರಿ ನಂತರ ರಾತ್ರಿ 9 ರಿಂದ 9.45 ರ ವರೆಗೆ ಮತ್ತೆ ರಾತ್ರಿ 10ರಿಂದ 11 ರ ವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರೈತರು, ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆ ಆಗುತ್ತಿದೆ ಎಂದು ದೂರಿದರು.ರಾತ್ರಿ ವೇಳೆ ಅಡುಗೆ, ಊಟ ಎಲ್ಲದ್ದಕ್ಕೂ ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ಮರ ಬಿದ್ದಿದೆ. ಕಂಬ ಬಿದ್ದಿದೆ. ಲೈನ್ ಟ್ರಿಪ್ ಆಗಿದೆ ಎನ್ನುತ್ತಿದ್ದರು. ಈಗ ವಿದ್ಯುತ್ ಕೊರತೆ ಉಂಟಾಗಿದೆ ಎನ್ನುತ್ತ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ ಎಂದು ದೂರಿದರು.ಲೋಡ್ ಶೆಡ್ಡಿಂಗ್ ಸಂದರ್ಭದಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆಗಳಿಲ್ಲದೆ ಕತ್ತಲಲ್ಲೇ ಕಾಲ ತಳ್ಳಬೇಕಾಗಿದೆ. ರೈತರು ಯುಪಿಎಸ್‌ಗಳನ್ನು ಕೊಂಡುಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ. ದೀಪ ಹಚ್ಚಲು ಸೀಮೆ ಎಣ್ಣೆ ಸಿಗುವುದಿಲ್ಲ. ಹಗಲಿನಲ್ಲೂ ಲೋಡ್‌ಶೆಡ್ಡಿಂಗ್ ಆರಂಭವಾಗಿರುವುದರಿಂದ ಕೃಷಿಗೂ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದರು.
ನಾನು ಸಂಘದ ಸ್ವಯಂ ಸೇವಕ, ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ ರವಿ
ವಿದ್ಯುತ್ ವಿತರಣೆಯಲ್ಲಿ ಸಂಪೂರ್ಣ ವಿಫಲ :
ರಾಜ್ಯದಲ್ಲಿ ಜಲವಿದ್ಯುತ್, ಪವನ ವಿದ್ಯುತ್, ಸೌರಶಕ್ತಿ, ಥರ್ಮಲ್ ವಿದ್ಯುತ್ ಹೀಗೆ ಅನೇಕ ಮೂಲಗಳಿಂದ ವಿದ್ಯುತ್ ಉತ್ಪಾಧಿಸಲಾಗುತ್ತಿದೆ. ಮಳೆ ಕೊರತೆ ಆಗಿದ್ದರೆ ಉಳಿದ ಮೂಲಗಳಿಂದ ವಿದ್ಯುತ್ ಉತ್ಪಾಧಿಸಿ ವಿರತಣೆ ಮಾಡಬೇಕು. ಮುಂಜಾಗ್ರತಾ ಕ್ರಮವಾಗಿ ಉದ್ಪಾಧನೆ ಹೆಚ್ಚು ಮಾಡಿ ಕೊರತೆ ನೀಗಿಸಿಕೊಳ್ಳಬೇಕು ಎಂದರು.ಗೃಹ ಜ್ಯೋತಿ ಹೆಸರಲ್ಲಿ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಆದರೆ ವಿದ್ಯುತ್ ವಿತರಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ಸರ್ಕಾರದ ಉಚಿತ ವಿದ್ಯುತ್ ಯೋಜನೆ ನಗೆಪಾಟೀಲಿಗೀಡಾಗುತ್ತಿದೆ ಎಂದರು.
ಮುಂಗಾರು ಮಳೆ ಪ್ರಾರಂಭದಿಂದಲೇ ಕೈಕೊಟ್ಟಿದೆ. ಆಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜಲ ವಿದ್ಯುತ್‌ಒಂದನ್ನೇ ನಂಬಿಕೊಳ್ಳದೆ ಉಳಿದ ಮೂಲಗಳಿಂದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕಿತ್ತು. ಅಥವಾ ಹೆಚ್ಚು ಉತ್ಪಾದನೆ ಮಾಡುವ ಬೇರೆ ರಾಜ್ಯದ ಗ್ರಿಡ್‌ಗಳಿಂದಾದರೂ ವಿದ್ಯುತ್ ಖರೀದಿಸಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಈ ವಿಚಾರದಲ್ಲಿ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಕೂಡಲೇ ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಡ್ ಶೆಡ್ಡಿಂಗ್‌ನಿಂದಾಗಿ ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ 15 ದಿನಗಳ ನಂತರ ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಮುಖಂಡರುಗಳಾದ ಎಂ.ಸಿ.ಬಸವರಾಜು, ಕೆ.ಬಿಲೋಕೇಶ್, ಪರ್ವತೇಗೌಡ, ಶಂಕರಪ್ಪ ಇತರರು ಭಾಗವಹಿಸಿದ್ದರು.