Asianet Suvarna News Asianet Suvarna News

ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚಿದ ಕಾವೇರಿ ಕಿಚ್ಚು

ಒಂದು ತಾಸಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ್ದರಿಂದ ಎರಡೂ ರಾಜ್ಯಗಳ ವಾಹನಗಳು ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಂ ಉಂಟಾಗಿತ್ತು. ಬಳಿಕ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

Farmers Held Protest Against Kaveri Water to Tamil Nadu in Mandya and Chamarajanagara grg
Author
First Published Sep 14, 2023, 9:44 AM IST

ಮಂಡ್ಯ/ಚಾಮರಾಜನಗರ(ಸೆ.14): ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಬುಧವಾರವೂ ಪ್ರತಿಭಟನೆಗಳು ನಡೆದವು. ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ಕಾವೇರಿ ನೀರು ನಿರ್ವಹಣಾ ಸಮಿತಿಯ ನೀರು ಬಿಡುಗಡೆ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನಾಕಾರರು ಬೆಂ-ಮೈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.

ಮದ್ದೂರಿನಲ್ಲಿ ಪ್ರವಾಸಿ ಮಂದಿರ ಸಮೀಪದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಢೀರ್ ಪ್ರತಿಭಟನೆಗಿಳಿದ ರೈತರು, ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದರು. ಈ ಮಧ್ಯೆ, ಸರ್ವಪಕ್ಷಗಳ ಸಭೆಯಲ್ಲಿ ನೀರು ಬಿಡುಗಡೆ ಮಾಡದಿರಲು ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಕುವೆಂಪು ಪ್ರತಿಮೆ ಮುಂಭಾಗದ ಆವರಣದಲ್ಲಿ ಕಳೆದ 14 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್‌ ಪಡೆಯಲಾಯಿತು.

ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್‌ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ

ಇದೇ ವೇಳೆ, ಚಾಮರಾಜನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಕೆಲಕಾಲ ರಸ್ತೆ ತಡೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಮಂಡಳಿ ಸತ್ತಿದೆ ಎಂದು ಆರೋಪಿಸಿ ಕಡ್ಲೆ ಪುರಿ, ಬಿಡಗಾಸು, ಹೂವು ಅರಿಶಿನ, ಕುಂಕುಮ ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ, ಕಬ್ಬು ಬೆಳೆಗಾರರು ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್‌ ಬಳಿ ತಮಿಳುನಾಡು ಗಡಿ ಬಂದ್ ಮಾಡಿ, ಆಕ್ರೋಶ ಹೊರಹಾಕಿದರು. ಒಂದು ತಾಸಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ್ದರಿಂದ ಎರಡೂ ರಾಜ್ಯಗಳ ವಾಹನಗಳು ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಂ ಉಂಟಾಗಿತ್ತು. ಬಳಿಕ, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದೇ ವೇಳೆ, ಮೈಸೂರು ಹಾಗೂ ರಾಮನಗರ ಸಮೀಪದ ಕಣಿಮಣಿಕೆ ಟೋಲ್‌ ಪ್ಲಾಜಾ ಬಳಿಯೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದವು.

Follow Us:
Download App:
  • android
  • ios