Asianet Suvarna News Asianet Suvarna News

Tomato ಬಾಕ್ಸ್‌ಗೆ 1200 ರೂ. ಬಂಪರ್‌ ಬೆಲೆ, ರೈತರಿಗೆ ಸಂತಸ..!

*    ಹರಪನಹಳ್ಳಿಯಲ್ಲಿ ಹೋಲ್‌ಸೇಲ್‌ ದರ ಕೆಜಿಗೆ 50ರಿಂದ 60ರಂತೆ ಮಾರಾಟ
*    ಟೊಮೇಟೊ ಕೊಳ್ಳಲು ಮುಗಿಬೀಳುತ್ತಿರುವ ರಾಜ್ಯ ಹಾಗೂ ಹೊರರಾಜ್ಯದ ಖರೀದಿದಾರರು
*    ಅಕಾಲಿಕ ಮಳೆಗೆ ಭತ್ತ, ಹತ್ತಿ ಬೆಳೆ ಹಾನಿ
 

Farmers Happy for  Tomato Prices Rise at Harapanahalli in Vijayanagara grg
Author
Bengaluru, First Published Nov 18, 2021, 8:37 AM IST

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ನ.18):  ಟೊಮೇಟೊ(Tomato) ಬೆಲೆ ಕಳೆದ 4- 5 ದಿನಗಳಿಂದ ಗಗನಕ್ಕೇರಿದ್ದು, ರೈತರಿಗೆ(Farmers) ಸಂತಸ ತಂದಿದ್ದರೆ ಜನಸಾಮಾನ್ಯರು ಬೆಲೆಯೇರಿಕೆ ಬಿಸಿಯಿಂದ ಕಂಗಾಲಾಗಿದ್ದಾರೆ.
ಪಟ್ಟಣದ(Harapanahalli) ಕೋಟೆ ಆಂಜನೇಯ ದೇವಸ್ಥಾನದ ಬಳಿ ಇರುವ ಸಗಟು ಮಾರುಕಟ್ಟೆಯಲ್ಲಿ(Wholesale Market) ಪ್ರತಿ ನಿತ್ಯ ಸಂಜೆ ಟೊಮೇಟೊ ಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯದ ಖರೀದಿದಾರರು ಮುಗಿಬೀಳುತ್ತಿದ್ದಾರೆ.

ಟೊಮೇಟೊ ಒಂದು ಬಾಕ್ಸ್‌ಗೆ (26- 27ಕೆಜಿ) .1200ರಿಂದ 1500 ದರ ಆಗಿದೆ. ಒಂದೆರಡು ದಿನ .1600 ಆಗಿದ್ದುಂಟು. ಇಲ್ಲಿಯ ಟೊಮೇಟೊ ಹಣ್ಣುಗಳು ಆಂಧ್ರ(Andhra Pradesh), ತಮಿಳುನಾಡು(Tamil Nadu), ಕೇರಳ(Kerala) ಹಾಗೂ ರಾಜ್ಯದ ಹಾಸನ(Hasaan) ಇತರ ಸ್ಥಳಗಳಿಗೆ ರವಾನೆಯಾಗುತ್ತದೆ.

ಟೊಮೇಟೊಗೆ ಇಷ್ಟೊಂದು ಬೇಡಿಕೆ ಬರಲು ಕಾರಣ ಆಂಧ್ರ, ತಮಿಳುನಾಡು ಮುಂತಾದ ಕಡೆ ಚಂಡಮಾರುತದಿಂದ ವಿಪರೀತ ಮಳೆಯಾಗಿ ಟೊಮೇಟೊ ಬೆಳೆ ಹಾಳಾಗಿವೆ ಎಂದು ಖರೀದಿದಾರರ ಮಾತು.

Karnataka| ಭಾರೀ ಮಳೆಗೆ 7.31 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಹರಪನಹಳ್ಳಿ ತಾಲೂಕಿನಲ್ಲಿ ಕಳೆದ 1 ತಿಂಗಳ ಹಿಂದೆ ಟೊಮೇಟೊ ಕೇಳುವವರಿಲ್ಲದೆ ರೈತರು ನಷ್ಟ ಅನುಭವಿಸಿದ್ದರು. ಹಣ್ಣುಗಳನ್ನು ಗಿಡದಿಂದ ಹರಿಯದೆ ಹಾಗೆ ಬಿಟ್ಟು ಹರಗಿದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಡಿಮ್ಯಾಂಡ್‌ ಬಂದಿದೆ. ಆದರೆ ತಾಲೂಕಿನಲ್ಲಿ ಫಸಲಿನ ಪ್ರಮಾಣ ಕಡಿಮೆ ಇದೆ. ಹೊಲದಲ್ಲಿ(Land) ಟೊಮೇಟೊ ಇರುವ ರೈತರು ಖುಷಿಯಾಗಿದ್ದಾರೆ.

1 ತಿಂಗಳ ಹಿಂದೆ ನಷ್ಟಅನುಭವಿಸಿದ ರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಹೋಲ್‌ಸೇಲ್‌ ದರವೇ .50- 60 ಕೆಜಿ. ಇನ್ನು ದಿನವಹಿ ಸಂತೆಯಲ್ಲಿ ರಿಟೇಲ್‌ ದರ ದೊಡ್ಡ ಗಾತ್ರದವು .70- 80, ಚಿಕ್ಕ ಗಾತ್ರದವು .40- 50 ಪ್ರತಿ ಕೆಜಿಗೆ ದರವಿದೆ. ಇನ್ನು ಹಸಿಮೆಣಸಿನ ಕಾಯಿ ದರ ಕೆಜಿಗೆ .10 ಆಗಿ ಪಾತಾಳಕ್ಕೆ ಕುಸಿದಿದೆ. ಅಡುಗೆಗೆ ಬಳಸಲು ಸಾಮಾನ್ಯ ಜನರಿಗೆ ಟೊಮೇಟೊ ಬಿಸಿ ಮುಟ್ಟಿಸಿದೆ. ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೂ ಟೊಮೇಟೊ ಕೊಳ್ಳುವುದು ತ್ರಾಸದಾಯಕವಾಗಿದೆ ಎಂಬುದು ಶಿಕ್ಷಕರ(Teachers)  ಅಳಲಾಗಿದೆ.

ಒಂದು ಎಕರೆ ಟೊಮೇಟೊ ಹಾಕಿದ್ದೆ. ಎರಡನೆ ಸಲ ಟೊಮೇಟೊ ಹರಿದಿದ್ದೇನೆ. 1 ಬಾಕ್ಸ್‌ಗೆ .1420ರಂತೆ 62 ಬಾಕ್ಸ್‌ ಗೆ ಅಂದಾಜು .88 ಸಾವಿರ ಪಡೆದಿದ್ದೇನೆ. ಇನ್ನೂ ಕೆಲವರು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ನಾನು ಯಾವಾಗಲೂ ಇಷ್ಟುದರ ಕಂಡಿಲ್ಲ. ಖುಷಿಯಾಗೈತಿ ಎಂದು ಹರಪನಹಳ್ಳಿ ವಾಲ್ಮೀಕಿ ನಗರದ ರೈತ ಸಿ. ಚೌಡಪ್ಪ ತಿಳಿಸಿದ್ದಾರೆ. 

ತಮಿಳುನಾಡು, ಆಂಧ್ರದಲ್ಲಿ ಹೆಚ್ಚು ಮಳೆಯಾಗಿ ಟೊಮೇಟೊ ಬೆಳೆಹಾನಿ ಆಗಿದ್ದರಿಂದ ಕಳೆದ 5 ದಿನದಿಂದ ದಿಢೀರ್‌ ಎಂದು ಬೆಲೆ ಏರಿದೆ. ಪ್ರತಿದಿನ ಹರಪನಹಳ್ಳಿ ಮಾರುಕಟ್ಟೆಯಲ್ಲಿ 2 ಸಾವಿರ ಬಾಕ್ಸ್‌ಗಳು ಅಂದಾಜು .8- 10 ಲಕ್ಷ ವಹಿವಾಟು ನಡೆಯುತ್ತದೆ. ಇನ್ನೂ 20 ದಿವಸ ಹೀಗೆ ನಡೆಯುವ ವಿಶ್ವಾಸವಿದೆ ಎಂದು ಹರಪನಹಳ್ಳಿ ಸಗಟು ಖರೀದಿದಾರ ಎಚ್‌. ವೀರಣ್ಣ ಹೇಳಿದ್ದಾರೆ. 

ಅಕಾಲಿಕ ಮಳೆಗೆ ಭತ್ತ, ಹತ್ತಿ ಬೆಳೆ ಹಾನಿ

ಶಿಗ್ಗಾಂವಿ(ಹಾವೇರಿ): ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ(Premature Rain) ವರ್ಷವಿಡಿ ದುಡಿದು ಬೆಳೆದ ಬಿಟಿ ಹತ್ತಿ(BT Cotton) ಹಾಗೂ ಬತ್ತವನ್ನು(PAddy) ಕೈಗೆ ಬರದಂತಾಗಿದೆ. ವಿವಿಧ ಬ್ಯಾಂಕು ಹಾಗೂ ಕೈಗಡಾದ ರೂಪದಲ್ಲಿ ಲಕ್ಷಾಂತರ ಸಾಲ ಮಾಡಿ ಹತ್ತಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆ ಇತ್ತು. ಆದರೆ, ಅಕಾಲಿಕ ಮಳೆಯಿಂದಾಗಿ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನೊಂದೆಡೆ ಮಲೆನಾಡು ಪ್ರದೇಶದಲ್ಲಿ ಬತ್ತ ಕೊಯ್ಲಿಗೆ ಬರುವ ಹಂತದಲ್ಲಿ ಮಳೆಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

Bengaluru ಸುತ್ತಮುತ್ತ ಧಾರಾಕಾರ ಮಳೆ : ಗಗನಕ್ಕೇರಿದ ತರಕಾರಿ, ಹೂ ಬೆಲೆ!

ಬಿಟಿ ಹತ್ತಿ ಪ್ರತಿ ಕ್ವಿಂಟಲ್‌ಗೆ 8-10 ಸಾವಿರ ಮಾರುಕಟ್ಟೆದರವಿದ್ದು, ರೈತರು ಪ್ರತಿ ಎಕರೆಗೆ ಸುಮಾರು 10 ಕ್ವಿಂಟಲ್‌ ಇಳುವರಿ ನಿರೀಕ್ಷೆಯಲ್ಲಿದ್ದರು. ಶೇಂಗಾ ಮೆಣಸಿನಗಿಡ ಹೆಚ್ಚು ಬೆಳೆಯುವ ಅತ್ತಿಗೇರಿ, ಶಿಶುವಿನಹಾಳ, ಪಾಣಿಗಟ್ಟಿ, ಹಲಗೂರು, ಹಿರೇಮಲ್ಲೂರು, ಬನ್ನೂರು, ಹನುಮನಹಳ್ಳಿ, ಚಿಕ್ಕಮಲ್ಲೂರು, ಭಾಗದ ರೈತ ಸಮುದಾಯ ಕೂಲಿಕಾರ್ಮಿಕರ ಕೊರತೆಯಿಂದ ಮತ್ತು ಶೇಂಗಾ, ಮೆಣಸಿನಗಿಡ ಬೆಳೆಗಳಿಗೆ ಹೆಚ್ಚು ಖರ್ಚಾಗುವುದು ಎಂದು ಹತ್ತಿ ಬೆಳೆದಿದ್ದಾರೆ. ಉತ್ತಮ ಫಸಲೂ ಬಂದಿದೆ. ಆದರೆ, ಅಕಾಲಿಕ ಮಳೆಯಿಂದ ಕೈಗೆ ಸೇರದಂತಾಗಿದೆ.

ಶಿಗ್ಗಾಂವಿ ತಾಲೂಕಿನ ಕೃಷಿ ಅಧಿಕಾರಿ ಸುರೇಶಬಾಬು ದೀಕ್ಷಿತ್‌ ಅವರ ವರದಿ ಪ್ರಕಾರ ತಾಲೂಕಿನಾದ್ಯಂತ ಸುಮಾರು 6798 ಹೆಕ್ಟೇರ್‌ ಪ್ರದೇಶದಲ್ಲಿ ಬಿಟಿ ಹತ್ತಿ, 6500 ಹೆಕ್ಟೇರ್‌ನಲ್ಲಿ ಭತ್ತ, 13000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮಂಗಳವಾರ ಸುರಿದ ಮಳೆಗೆ ತಡಸ ಮತ್ತು ದುಂಡಸಿ ಹೋಬಳಿ ಭಾಗದಲ್ಲಿ 4000 ಹೆಕ್ಟೇರ್‌ ಭತ್ತ, 2500 ಹೆಕ್ಟೇರ ಮೆಕ್ಕೆಜೋಳ ಹಾನಿಯಾದ ವರದಿಯಾಗಿದೆ. ಬಿಟಿ ಹತ್ತಿ ಹಾನಿಯನ್ನು ಒಮ್ಮೆಲೆ ಅಂದಾಜಿಸಲು ಆಗುವುದಿಲ್ಲ. ಮಳೆ ನಿಂತು ಬಿಸಿಲು ಬಿದ್ದರೆ ಹಾನಿಯನ್ನು ಅಂದಾಜಿಸಬಹುದಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ(Department of Agriculture) ಅಧಿಕಾರಿಗಳು.
 

Follow Us:
Download App:
  • android
  • ios