Asianet Suvarna News Asianet Suvarna News

River Alignment: ಕೃಷ್ಣೆ, ತುಂಗಭದ್ರಾ ಸೇರಿ​ದರೆ ಡ್ಯಾಂಗೆ ನೀರಿನ ಖಾತರಿ!

*  ಕೃಷ್ಣಾ ನದಿಯ ಹೆಚ್ಚುವರಿ ನೀರು ಮತ್ತು ತುಂಗಭದ್ರಾ ನೀರಿನಿಂದ ಜಲಾಶಯ ಭರ್ತಿ
*  ಕರ್ನಾಟಕ ಎಷ್ಟು ಪ್ರಮಾಣದ ನೀರನ್ನು ಪಡೆಯಬೇಕು? 
*  ಉಳಿದ ರಾಜ್ಯಗಳು ಎಷ್ಟು ಪ್ರಮಾಣದ ನೀರು ಪಡೆಯಬೇಕು? 

Farmers Get Advantage of Krishna Tungabhadra River Alignment in Karnataka grg
Author
Bengaluru, First Published Feb 15, 2022, 11:39 AM IST

ಕೃಷ್ಣ ಎನ್‌. ಲಮಾಣಿ 

ಹೊಸಪೇಟೆ(ಫೆ.15): ಕೃಷ್ಣಾ(Krishna), ತುಂಗಭದ್ರಾ(Tungabhadra)  ನದಿ ಜೋಡಣೆಯಿಂದ ತುಂಗಭದ್ರಾ ಜಲಾಶಯ ನೆಚ್ಚಿರುವ ರೈತರಿಗೆ(Farmers) ಪೂರಕವಾಗಲಿದೆ ಎಂಬ ಅಂಶ ಈಗ ಚರ್ಚಿತವಾಗುತ್ತಿದೆ. ಈ ಮಧ್ಯೆ ಸಂಬಂಧಿತ ರಾಜ್ಯಗಳ ಒಪ್ಪಿಗೆ ಮೇರೆಗೆ ಈ ಯೋಜನೆ ಕಾರ್ಯರೂಪಕ್ಕೆ ಬರುವುದರಿಂದ, ಯೋಜನೆಯ ಪ್ರಾಥಮಿಕ ಹಂತದಲ್ಲೇ ರಾಜ್ಯದ ಪಾಲಿನ ನೀರನ್ನು ಸಮರ್ಥವಾಗಿ ಪಡೆಯಲು ಕೇಂದ್ರಕ್ಕೆ ಪೂರಕ ದಾಖಲೆ ಒದಗಿಸಬೇಕೆಂಬ ವಾದವೂ ಕೇಳಿ ಬರತೊಡಗಿದೆ.

ಕೃಷ್ಣಾ ನದಿಯ ಉಪನದಿಯಾಗಿರುವ ತುಂಗಭದ್ರಾಕ್ಕೆ ಕೃಷ್ಣೆಯ ನೀರು ಹರಿದು ಬಂದರೆ, ತುಂಗಭದ್ರಾ ಜಲಾಶಯ(Tungabhadra Dam) ಬೇಗನೆ ಭರ್ತಿಯಾಗಲಿದೆ. ಇದರಿಂದ ರೈತರು ಬೇಗನೆ ಬೆಳೆ(Crop) ಬೆಳೆಯಬಹುದು. ಇನ್ನೊಂದೆಡೆಯಲ್ಲಿ ನೀರಿನ ಲಭ್ಯತೆಯೂ ಖಾತ್ರಿಯಾಗಲಿದೆ. ಕೃಷ್ಣಾ ನದಿಯ ಹೆಚ್ಚುವರಿ ನೀರು ಮತ್ತು ತುಂಗಭದ್ರಾ ನೀರಿನಿಂದ ಜಲಾಶಯ ಭರ್ತಿಯಾಗಲಿದೆ. ಇದರಿಂದ ವರ್ಷದುದ್ದಕ್ಕೂ ಜಲಾಶಯದಲ್ಲಿ ನೀರು ಲಭ್ಯವಾಗಲಿದೆ.

River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ

ರಾಜ್ಯಗಳ ಒಪ್ಪಿಗೆ ಮುಖ್ಯ:

ತುಂಗಭದ್ರಾ ಜಲಾಶಯದಿಂದ ಕರ್ನಾಟಕ(Karnataka), ತೆಲಂಗಾಣ(Telangana), ಆಂಧ್ರಪ್ರದೇಶ(Andhra Pradesh) ರಾಜ್ಯಗಳು ನೀರು ಪಡೆಯುವುದರಿಂದ ಈ ರಾಜ್ಯಗಳ ಮುಖ್ಯಮಂತ್ರಿಗಳು ನದಿ ಜೋಡಣೆಗೆ(River Alignment) ಸಹಮತ ವ್ಯಕ್ತಪಡಿಸಬೇಕಿದೆ.

ಗೋದಾವರಿ, ಕೃಷ್ಣಾ, ತುಂಗಭದ್ರಾ, ಕಾವೇರಿ, ಪೆನ್ನಾರ್‌ನದಿಗಳ ಜೋಡಣೆ ಅಂಶ ಅಡಗಿರುವುದರಿಂದ ಸಂಬಂಧಿತ ರಾಜ್ಯಗಳ ಒಪ್ಪಿಗೆಯೂ ಬಹುಮುಖ್ಯವಾಗಿದೆ. ಒಂದು ವೇಳೆ ಕೃಷ್ಣೆಯಿಂದ ಹರಿಯುವ ಹೆಚ್ಚುವರಿ ನೀರು ತುಂಗಭದ್ರೆ ಒಡಲು ಸೇರಿದರೆ ವಾಡಿಕೆಯಂತೆ ಆಗಸ್ಟ್‌ಇಲ್ಲವೆ ಸೆಪ್ಟೆಂಬರ್‌ನಲ್ಲಿ ಭರ್ತಿಯಾಗುವ ತುಂಗಭದ್ರಾ ಜಲಾಶಯ ಬೇಗನೆ ಭರ್ತಿಯಾಗಲಿದೆ. ಇದರ ಜತೆಗೆ ಪ್ರತಿ ವರ್ಷ ನೀರಿನ ಖಾತ್ರಿ ದೊರೆಯಲಿದೆ.

ನೀರಾವರಿಗೆ ಅನುಕೂಲ:

ತುಂಗಭದ್ರಾ ಜಲಾಶಯದಿಂದ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 9.3 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿಯಾಗುತ್ತಿದೆ. ಜಲಾಶಯದ ನಿರ್ಮಾಣದ ಆಶಯದಂತೆ ನೀರಾವರಿಯಾಗಿದೆ. ಆದರೆ, ರಾಯಚೂರು, ಮಾನ್ವಿ ಭಾಗದ 2 ಲಕ್ಷ ಎಕರೆಗೆ ಇನ್ನೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಈವೆಲ್ಲ ಸಮಸ್ಯೆಗಳಿಗೂ ನದಿಜೋಡಣೆ ಪರಿಹಾರ ಒದಗಿಸಲಿದೆ.

ಈ ಮಧ್ಯೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತುಂಗಭದ್ರಾ ಜಲಾಶಯ ಮತ್ತು ನದಿನೀರನ್ನು ಬಳಕೆ ಮಾಡಿಕೊಂಡು ಅಂದಾಜು 6 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಆದರೂ ಆಂಧ್ರಪ್ರದೇಶದಲ್ಲೂ ನೀರಾವರಿ ಸಮಸ್ಯೆ ಇದೆ. ಹಾಗಾಗಿ ನದಿ ಜೋಡಣೆ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎಂದು ನಿವೃತ್ತ ಎಂಜನಿಯರ್‌ರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಸಮಾ​ನಾಂತರ ಜಲಾಶ ಮಹ​ತ್ವ​ದ್ದು:

ನವಲಿ ಬಳಿ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಸಮನಾಂತರ ಜಲಾಶಯದ ಡಿಪಿಆರ್‌ಕೂಡ ಸಿದ್ಧಗೊಂಡಿದೆ. 30 ಟಿಎಂಸಿಯಷ್ಟುನೀರು ಸಂಗ್ರಹವಾಗಲಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿಕೊಳ್ಳಬಹುದು. ಇನ್ನೂ ನದಿ ಜೋಡಣೆಯಿಂದ ದೊರೆಯುವ ನೀರನ್ನು ಸಂಗ್ರಹ ಮಾಡಿಕೊಳ್ಳಬಹುದು.

ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತದೆ. ಆಲಮಟ್ಟಿ ಜಲಾಶಯ(Almatti Dam) ಭರ್ತಿಯಾದ ಬಳಿಕ ಹರಿದು ಹೋಗುವ ನೀರಿನಲ್ಲಿ ಎಷ್ಟು ಪ್ರಮಾಣದ ನೀರು ತುಂಗಭದ್ರೆಗೆ ಒದಗಿಸಬೇಕು? ಇನ್ನು ನದಿ ಜೋಡಣೆಯಿಂದ ಆಗುವ ಸಾಧಕ-ಬಾಧಕಗಳು, ಕರ್ನಾಟಕ ಎಷ್ಟು ಪ್ರಮಾಣದ ನೀರನ್ನು ಪಡೆಯಬೇಕು? ಜತೆಗೆ ಉಳಿದ ರಾಜ್ಯಗಳು ಎಷ್ಟು ಪ್ರಮಾಣದ ನೀರು ಪಡೆಯಬೇಕು? ಎಂಬುದು ಸ್ಪಷ್ಟವಾದ ಬಳಿಕವೇ ನದಿ ಜೋಡಣೆ ಕಾರ್ಯ ಆಗಬೇಕಿದೆ ಎಂದು ಹೇಳುತ್ತಾರೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ.

ಈ ಭಾಗದ ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಮತ್ತು ಕೃಷ್ಣಾ ನದಿ ಜೋಡಣೆ ಆಗಬೇಕು ಅಂತ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

River Alignment Project: ನದಿ ಜೋಡಣೆ ಮಾಡಿದ್ರೆ ರಾಜ್ಯಕ್ಕೂ ಪಾಲು ಬೇಕು: ಸಿಎಂ ಬೊಮ್ಮಾಯಿ

ನದಿ ಜೋಡಣೆ ಪ್ರಸ್ತಾಪ ಇನ್ನೂ ಚರ್ಚೆ ಹಂತದಲ್ಲಿದೆ. ನದಿಜೋಡಣೆಯ ಸಾಧಕ-ಬಾಧಕದ ಬಗ್ಗೆ ಚರ್ಚಿಸಿ ನಮ್ಮ ರಾಜ್ಯದ ಪಾಲನ್ನು ಖಾತ್ರಿಪಡಿಸಿಕೊಂಡೇ ಮುಂದುವರೆಯಬೇಕಿದೆ ಅಂತ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಹೇಳಿದ್ದಾರೆ.  

ನದಿಜೋಡಣೆ ಪೂರಕ ಅಂಶವಾದರೂ ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಲೇಬೇಕು. ಇದರಿಂದ ಕೃಷ್ಣೆ ಹಾಗೂ ಭದ್ರೆಯಿಂದ ದೊರೆಯುವ ನೀರನ್ನು ಸಂಗ್ರಹಿಸಿಡಬಹುದು. ಹೂಳಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ ಅಂತ ನಿವೃತ್ತ ಎಂಜನಿಯರ್‌ ಮಂಜಪ್ಪ ತಿಳಿಸಿದ್ದಾರೆ.  

ಗೋದಾವರಿ, ಕೃಷ್ಣೆ, ತುಂಗಭದ್ರಾ, ಕಾವೇರಿ, ಪೆನ್ನಾರ್‌ ನದಿಗಳ ಜೋಡಣೆ ಬಗ್ಗೆ ಆಯಾ ರಾಜ್ಯಗಳ ಒಪ್ಪಿಗೆ ಬಹುಮುಖ್ಯ. ಕೃಷ್ಣೆ ಮತ್ತು ತುಂಗಭದ್ರಾ ನದಿಗಳ ಜೋಡಣೆಯಿಂದ ತುಂಗಭದ್ರಾ ಜಲಾಶಯಕ್ಕೆ ಅನುಕೂಲವಾಗಲಿದೆ. ಜಲಾಶಯ ಬೇಗನೆ ಭರ್ತಿಯಾಗಲಿದೆ. ಈ ಬಗ್ಗೆ ವಿಸ್ತತ ಚರ್ಚೆಯಾಗಬೇಕಿದೆ ಅಂತ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.  
 

Follow Us:
Download App:
  • android
  • ios