ಬಾಗಲಕೋಟೆ: ಲಕ್ಷ ಲಕ್ಷ ಆದಾಯ ತಂದಿದ್ದ ಟೊಮೆಟೋ ಈಗ ಕೇಳೋರೆ ಇಲ್ಲ, ರೈತರ ಬಾಳಲ್ಲಿ ಸಂಕಷ್ಟ..!
ಈಗ ಟೊಮೆಟೋ ಬೆಳೆಯನ್ನ ಕೇಳೋರಿಲ್ಲ, ರೈತರು ಬಿತ್ತನೆಗೆ ಮಾಡಿದ ಖರ್ಚು ಸಹ ಈಗ ರೈತರಿಗೆ ಟೊಮೆಟೋ ಬೆಳೆಯಿಂದ ಎಟಕುತ್ತಿಲ್ಲ. ಹೀಗಾಗಿ ಬಂಗಾರದ ಬೆಲೆಯನ್ನ ಕಂಡಿದ್ದ ಟೊಮೆಟೋ ಈಗ ಕೇಳೋರಿಲ್ಲದಂತಾಗಿದೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಸೆ.21): ಸಾಮಾನ್ಯವಾಗಿ ಟೊಮೆಟೋ ಅಂದ್ರೆ ಸಾಕು ಅದು ರೈತರಿಗೆ ನಿತ್ಯ ಲಕ್ಷ ಲಕ್ಷ ಆದಾಯ ತರುವ ಬೆಳೆ ಎನ್ನಲಾಗುತ್ತಿತ್ತು, ಆದ್ರೆ ಟೊಮೆಟೋಗೆ ಇದೀಗ ಬೆಂಬಲ ಬೆಲೆ ಸಿಗದೇ ರೈತರು ಕಂಗಾಲಾಗಿದ್ದು, ಕಣ್ಮುಂದೆ ಬೆಳೆದ ಟೊಮ್ಯಾಟೋ ಬೆಳೆಯನ್ನ ಟ್ರ್ಯಾಕ್ಟರ್ ಕಟರ್ ಮೂಲಕ ರೈತ ನಾಶಪಡಿಸುತ್ತಿದ್ದಾನೆ. ಅದೆಲ್ಲಿ? ಅದ್ಯಾಕೆ, ಅಂತೀರಾ, ಈ ಕುರಿತ ವರದಿ ಇಲ್ಲಿದೆ....
ಒಂದೆಡೆ ಟೊಮೆಟೋಗೆ ಬೆಂಬಲ ಬೆಲೆ ಸಿಗದೇ ಕಂಗಾಲಾಗಿರೋ ರೈತ್ರು, ಮತ್ತೊಂದೆಡೆ ಕಣ್ಮುಂದೆ ಹೊಲದಲ್ಲಿ ಬೆಳೆದಿದ್ದ ಟೊಮೆಟೋ ಬೆಳೆಯನ್ನ ಟ್ರ್ಯಾಕ್ಟರ್ ಕಟರ್ ಮೂಲಕ ನಾಶ ಮಾಡ್ತಿರೋ ರೈತ, ಇವುಗಳ ಮಧ್ಯೆ ಬೆಂಬಲ ಸಿಗದೇ ಅತಂತ್ರವಾಗಿರೋ ರೈತ ಕುಟುಂಬಗಳು, ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದ ಬಾಗಲಕೋಟೆ ಜಿಲ್ಲೆಯ ಬದ್ನೂರು ಗ್ರಾಮದಲ್ಲಿ.
ಉಪಮುಖ್ಯಮಂತ್ರಿ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?: ಸತೀಶ್ ಜಾರಕಿಹೊಳಿ
ಹೌದು. ಒಂದು ಕಾಲದಲ್ಲಿ ರೈತರಿಗೆ ಬಂಗಾರದ ಬೆಲೆಯನ್ನ ತಂದುಕೊಟ್ಟಿದ್ದ ಟೋಮೋಟೋ ಬೆಳೆ ಇದೀಗ ರೈತರು ಕಣ್ಣೀರಿಡುವಂತೆ ಮಾಡಿದ್ದು, ಬದ್ನೂರು ಗ್ರಾಮದ ರೈತ ಆನಂದ ಎಂಬುವವರು ತಮ್ಮ ಹೊಲದಲ್ಲಿ ಕಣ್ಮುಂದೆಯೇ ಬೆಳೆದಿದ್ದ ಬೆಳೆಯನ್ನ ಟ್ರ್ಯಾಕ್ಟರ್ ಕಟರ್ ಮೂಲಕ ಟೊಮೆಟೋ ಬೆಳೆ ನಾಶ ಮಾಡುತ್ತಿದ್ದು, ಮಮ್ಮಲ ಮರಗುವಂತೆ ಮಾಡಿದೆ. ಮುಖ್ಯವಾಗಿ ಟೋಮೋಟೋಗೆ ಕೆಜಿಗೆ 120ರೂಪಾಯಿ ಇದ್ದದ್ದು ಇದೀಗ ಬೆಲೆ ಸಿಗದೆ ಒಂದು ಕೆಜಿಗೆ 2.50 ರೂಪಾಯಿ ನೀಡುವಂತಹ ಪರಿಸ್ಥಿತಿ ಬಂದೊದಗಿದೆ. ಇದ್ರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದು, ಬೆಂಬಲ ಬೆಲೆಗೆ ಹಾತೊರೆಯುವಂತಾಗಿದೆ. ಇನ್ನು ಬದ್ನೂರು ಗ್ರಾಮದ ಯುವ ರೈತ ಆನಂದ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೋ ಬೆಳೆಯನ್ನ ಸಂಪೂರ್ಣ ಕಟರ್ ಮೂಲಕ ತೆಗೆದು ಹಾಕಿದ್ದು, ಟೊಮೆಟೋ ಬೆಳೆ ನಾಶಪಡಿಸುತ್ತಿದ್ದು ಎಂತವರನ್ನೂ ಮರುಗುವಂತೆ ಮಾಡಿತ್ತು. ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಮತ್ತು ಪರಿಹಾರ ನೀಡುವಂತಾಗಲಿ ಅಂತಾರೆ ರೈತರಾದ ಆನಂದ ಮತ್ತು ನೀಲನಗೌಡ.
ಹುನಗುಂದ: ಚಿಕನ್ ಕಬಾಬ್ ಕೊಡದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
ಲಕ್ಷ ಲಕ್ಷ ಆದಾಯ ನೀಡಿದ್ದ ಟೊಮ್ಯಾಟೊ ಈಗ ಕೇಳೋರಿಲ್ಲ...
ಇನ್ನು ಈಗಾಗಲೇ ಎಲ್ಲೆಡೆ ಬರಗಾಲ ಬಿದ್ದು ರೈತರು ತೀವ್ರ ಸಂಕಷ್ಟವನ್ನ ಎದುರಿಸುತ್ತಿದ್ದು, ಸರ್ಕಾರವು ಸಹ ಬರ ಘೋಷಣೆಯನ್ನ ಮಾಡಿದೆ. ಈ ಸಮಯದಲ್ಲಿ ಟೊಮೆಟೋ ಬೆಳೆ ಬೆಳೆದ ರೈತರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದ್ದು. ಇತ್ತೀಚಿಗಷ್ಟೇ ಟೊಮೆಟೋ ಹೊಲಕ್ಕೆ ದುಡ್ಡು ಕೊಟ್ಟು ಕಾವಲುಗಾರರನ್ನ ಇಟ್ಟ ಉದಾಹರಣೆಗಳಿದ್ದವು, ಆದ್ರೆ ಈಗ ಟೊಮೆಟೋ ಬೆಳೆಯನ್ನ ಕೇಳೋರಿಲ್ಲ, ರೈತರು ಬಿತ್ತನೆಗೆ ಮಾಡಿದ ಖರ್ಚು ಸಹ ಈಗ ರೈತರಿಗೆ ಟೊಮೆಟೋ ಬೆಳೆಯಿಂದ ಎಟಕುತ್ತಿಲ್ಲ. ಹೀಗಾಗಿ ಬಂಗಾರದ ಬೆಲೆಯನ್ನ ಕಂಡಿದ್ದ ಟೊಮೆಟೋ ಈಗ ಕೇಳೋರಿಲ್ಲದಂತಾಗಿದೆ. ಹೀಗಾಗಿ ಸರ್ಕಾರ ಈ ಸಂಬಂಧ ಪರಿಹಾರ ನೀಡುವಂತಾಗಬೇಕು ಅಂತಾರೆ ರೈತ ಮಹಿಳೆಯರಾ ಭಾರತಿ ಮತ್ತು ಗಂಗೂಬಾಯಿ.
ಒಟ್ಟಿನಲ್ಲಿ ರೈತರ ಪಾಲಿಗೆ ವರದಾನವಾಗಿದ್ದ ಟೊಮೆಟೋ ಬೆಳೆ ಈಗ ರೈತರಿಗೆ ಸಂಕಷ್ಟಕ್ಕೆ ಕಾರಣವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.