ಉಪಮುಖ್ಯಮಂತ್ರಿ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?: ಸತೀಶ್ ಜಾರಕಿಹೊಳಿ
ಅಸಮಾಧಾನ ಶಮನ ಮಾಡಲಿಕ್ಕೆ ಅಧ್ಯಕ್ಷರು, ಸಿಎಂ, ಡಿಸಿಎಂ ಇದ್ದಾರೆ. ಈಗಾಗಲೇ ಎರಡ್ಮೂರು ಬಾರಿ ಶಾಸಕರ ಸಭೆ ಮಾಡಿದ್ದಾರೆ, ಮೂರು ತಿಂಗಳಲ್ಲಿ ಯಾವುದೇ ಸರ್ಕಾರ ಟೇಕ್ ಆಫ್ ಆಗಲ್ಲ. ಟೇಕ್ ಆಫ್ ಆಗೋಕೆ ಕನಿಷ್ಠ ಆರು ತಿಂಗಳಾದರೂ ಬೇಕು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬಾಗಲಕೋಟೆ(ಸೆ.20): ಕನಿಷ್ಟ 20 ಸ್ಥಾನಗಳನ್ನಾದರೂ ನಾವು ಗೆಲ್ಲಲೇಬೇಕು. ಅಷ್ಟು ಗೆದ್ದರೆ ಮಾತ್ರ ನಮ್ಮ ಯೋಜನೆಗಳು, ಶಕ್ತಿ, ಸಾಮರ್ಥ್ಯಗಳು ಲಾಭ ಆದಂಗೆ. ಇಲ್ಲಾಂದ್ರೆ ಕಷ್ಟ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೀಡಿರುವ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಪ್ಲಸ್ ಆಗುತ್ತವಾ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಿಮ್ಮ ಪಕ್ಷಕ್ಕೆ ಯಾರಾದರೂ ಬರುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬರುವವರು ಮೊದಲು ಅವ್ರು ಜಿಲ್ಲಾಧ್ಯಕ್ಷರಿಗೆ ಕಾಂಟ್ಯಾಕ್ಟ್ ಮಾಡಬೇಕು. ನಾವು ಸ್ಪರ್ಧೆ ಮಾಡ್ತೀವಿ ಅಂತಾ ಅರ್ಜಿ ಕೊಡಬೇಕು. ನಾಯಕರು, ಅಧ್ಯಕ್ಷರು ಇದನ್ನ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನದ ಪ್ರಕಾರ ನಾವು ಸೀಟು ಘೋಷಣೆ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಹುದ್ದೆಗೆ ದೀನ-ದಲಿತರಿಗೂ ಅವಕಾಶ ಸಿಗಲಿದೆ: ಸತೀಶ್ ಜಾರಕಿಹೊಳಿ
ಬೆಂಗಳೂರು ಕಾರ್ಪೊರೇಟರ್‌ಗಳು ಬಹಳ ಜನ ಪಕ್ಷವನ್ನು ಸೇರುತ್ತಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರಾದರೂ ಸೇರ್ತಾರೆ ಅಂದರೆ ಮುಕ್ತವಾದ ಅವಕಾಶ ಇದೆ. ನಮ್ಮ ಪಕ್ಷ, ಸಿದ್ಧಾಂತವನ್ನು ಒಪ್ಪಿ ಬಂದರೆ ಸೇರಿಸಿಕೊಳ್ತಿವಿ ಎಂದು ತಿಳಿಸಿದರು.
ಮೂರು ತಿಂಗಳಲ್ಲಿ ಸರ್ಕಾರ ಟೇಕ್ ಆಫ್ ಆಗಲ್ಲ:
ಸರ್ಕಾರ ಬಂದು ಮೂರು ತಿಂಗಳಾದರೂ ಶಾಸಕರಲ್ಲಿ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸಮಾಧಾನ ಶಮನ ಮಾಡಲಿಕ್ಕೆ ಅಧ್ಯಕ್ಷರು, ಸಿಎಂ, ಡಿಸಿಎಂ ಇದ್ದಾರೆ. ಈಗಾಗಲೇ ಎರಡ್ಮೂರು ಬಾರಿ ಶಾಸಕರ ಸಭೆ ಮಾಡಿದ್ದಾರೆ, ಮೂರು ತಿಂಗಳಲ್ಲಿ ಯಾವುದೇ ಸರ್ಕಾರ ಟೇಕ್ ಆಫ್ ಆಗಲ್ಲ. ಟೇಕ್ ಆಫ್ ಆಗೋಕೆ ಕನಿಷ್ಠ ಆರು ತಿಂಗಳಾದರೂ ಬೇಕು ಎಂದರು.
ಇದನ್ನು ಯಡಿಯೂರಪ್ಪ ಸರ್ಕಾರ ಇದ್ದಾಗಲೂ ಕೇಳಿದ್ವಿ, ಆಗ ಬಿಜೆಪಿಯವರಿಗೆ ಆರು ತಿಂಗಳು ಅವಕಾಶ ಬೇಕು ಅಂತಾ ನಾವೇ ಹೇಳಿದ್ವಿ. ಈಗ ಅದನ್ನೇ ನಾವು ಹೇಳುತ್ತೇವೆ. ಕನಿಷ್ಠ ಆರು ತಿಂಗಳಾದರೂ ಟೇಕ್ ಆಫ್ ಆಗೋಕೆ ಬೇಕು. ಯಾವುದೇ ಪಕ್ಷದ ಇದ್ರೂ ಅಷ್ಟೇ, ಸರ್ಕಾರ ಯಾರದೇ ಇದ್ರೂ ಟೇಕ್ ಆಫ್ ಆಗಲಿಕ್ಕೆ ಆರು ತಿಂಗಳು ಬೇಕು. ಹಾಗಾಗಿ ನೀವಿನ್ನು ಮೂರು ತಿಂಗಳು ಕಾಯಬೇಕು ಎಂದು ಪತ್ರಕರ್ತರಿಗೆ ಮರುತ್ತರ ನೀಡಿದರು.
ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ತರುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇ ಮೊದಲು ಕಾಂಗ್ರೆಸ್. ಮನಮೊಹನ್ ಸಿಂಗ್ ಅವರು ಇದ್ದಾಗ ಮಾಡಿದ್ದು. ಈ ಕುರಿತು ಪಾರ್ಟಿ ಸ್ವಾಗತಿಸಿದೆ. ನಾವು ಅದನ್ನ ಸ್ವಾಗತ ಮಾಡುತ್ತೇವೆ ಎಂದರಲ್ಲದೇ ಬಿಜೆಪಿಗರು ಆ ತಂತ್ರ ಪ್ರಯೋಗಿಸಿದ್ದಾರೆ. ನಾವು ಅದನ್ನ ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಬಿಜೆಪಿಯವ್ರು ತಮಗೆ ಲಾಭ ಆಗುವ ನಿಟ್ಟಿನಲ್ಲಿ ಮಹಿಳಾ ಮೀಸಲಾತಿ ಮಾಡಿದ್ದಾರೆ. ನಾವು ಮಹಿಳಾ ಮೀಸಲಾತಿಯನ್ನ ಸ್ವಾಗತ ಮಾಡ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮೂವರು ಡಿಸಿಎಂ ಸ್ಥಾನದ ಬಗ್ಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಮುಂಚೆಯಿಂದಲೇ ಹೇಳುತ್ತಿದ್ದಾರೆ. ಅದು ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು, ಡಿಸಿಎಂ ಒಬ್ರು ಇರಬೇಕಾ, ಮೂವರು ಇರಬೇಕಾ, ನಾಲ್ಕು ಜನ ಇರಬೇಕಾ ಎಂದು ಪಕ್ಷ ನಿರ್ಧಾರ ಮಾಡಬೇಕು. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತ ಮಾಡಲು ಅವಕಾಶವಿದೆ. ಅಂತಿಮವಾಗಿ ಪಕ್ಷ ಅದನ್ನ ನಿರ್ಧಾರ ತಗೆದುಕೊಳ್ಳುತ್ತೆ. ಸಮಾಜಕ್ಕೆ ನ್ಯಾಯ ಒದಗಿಸಿಕೊಡಲಿಕ್ಕೆ ಡಿಸಿಎಂ ಸ್ಥಾನ ಹೆಚ್ಚಿಸುವ ಕೆಲಸ ಅಷ್ಟೆ. ಅದು ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಅವರನ್ನ ಕಟ್ಟಿಹಾಕಲಿಕ್ಕೆ ಡಿಸಿಎಂ ಸ್ಥಾನ ಸೃಷ್ಟಿಸುತ್ತಿರುವುದಲ್ಲ ಎಂದರು.
ನಮ್ಮ ಪಕ್ಷಕ್ಕೆ ಎಸ್ಸಿ,ಎಸ್ಟಿ ಕೆಳ ಹಂತದ ಜನ ಮತ ನೀಡಿದ್ದಾರೆ. ಆ ವರ್ಗಗಳಿಗೆ ನ್ಯಾಯ ಸಿಗಬೇಕು ಅನ್ನೋ ಆಸೆ ಬಹಳ ಜನರದ್ದು ಇದೆ. ಅದನ್ನ ಪಕ್ಷ ನಿರ್ಧಾರ ಮಾಡುತ್ತೆ. ನನಗೆ ಡಿಸಿಎಂ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ ಎಂದರು.
ಆಪರೇಷನ್ ಕಮಲ ಕುರಿತು ಯತ್ನಾಳ ನೀಡಿರುವ ಹೇಳಿಕೆಗೆ, ಯತ್ನಾಳ ಹೇಳ್ತಾರೆ ಜನವರಿನಲ್ಲಿ ನಾವೇ ಸಿಎಂ ಆಗ್ತಿವಿ ಅಂತಾ. ಇನ್ನು ಜನವರಿ ಬಹಳ ದೂರವಿದೆ. ಈಗ ಅದರ ಬಗ್ಗೆ ಆತಂಕ ಪಡಬೇಕಿಲ್ಲ. ಜನವರಿ ಬಂದಾಗ ನೋಡೋಣ ಎಂದು ವ್ಯಂಗ್ಯವಾಡಿದರು.
ರಿಪಬ್ಲಿಕ್ ಆಫ್ ಭಾರತ್, ಬಿಜೆಪಿಯರಿಗೆ ಲಾಭ ಆಗುತ್ತದೆ ಅಂದ್ರೆ ಏನು ಬೇಕಾದರೂ ಮಾಡ್ತಾರೆ, ಜಾರಕಿಹೊಳಿ
ಈಗ ಜೆಡಿಎಸ್ ಬಿಜೆಪಿಯವರು ಓಪನ್ ಆಗಿ ಭೇಟಿ ಆಗ್ತಿದ್ದಾರೆ. ಮೊದ್ಲು ಕದ್ದು ಮುಚ್ಚಿ ಸೇರುತ್ತಿದ್ದರು. ಲೋಕಾ ಚುನಾವಣೆಯಲ್ಲಿ ಅವರಿಬ್ಬರು ಒಂದಾಗಿ ಹೋಗಲು ತೀರ್ಮಾನಿಸಿದ್ದಾರೆ. ಈಗ ಅವರೆಲ್ಲ ಎಲ್ಲಕಡೆ ಸೇರುತ್ತಿದ್ದಾರೆ ಎಂದು ಹೇಳಿದರು.
ಅಭಿನವ ಹಾಲಶ್ರೀ ಅವರು ಜಿಲ್ಲೆಯ ಮುಗಳಖೋಡ ಗ್ರಾಮದ ಜೊತೆಗಿನ ನಂಟಿನ ಕುರಿತು ಮಾತನಾಡಿದ ಸಚಿವರು, ಈ ಕುರಿತು ಪೊಲೀಸ್ ತನಿಖೆ ಮಾಡುತ್ತೆ. ನಮಗೆ ಗೊತ್ತಿಲ್ಲದೆ ಹೇಳೋದು ಸರಿಯಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ ಮಾಡ್ಲಿ, ಅಂತಿಮವಾಗಿ ಏನು ರಿಪೋರ್ಟ್ ಕೊಡ್ತಾರೆ ನೋಡೋಣ ಎಂದರು.