Karwar: ರೈತರಿಗೆ 'ಸೈನಿಕ' ಹುಳಗಳ ಕಾಟ: ಸಂಕಷ್ಟದಲ್ಲಿ ಅನ್ನದಾತ..!
* ಕೃಷಿ ಜಮೀನುಗಳಲ್ಲಿ ಕಾಣಿಸಿಕೊಂಡ ಸೈನಿಕ ಹುಳುಗಳು
* ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ ರೈತರು
* ಸೈನಿಕ ಹುಳುಗಳ ಕಾಟದಿಂದ ಕಂಗಾಲಾದ ರೈತರು
ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಮೇ.25): ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ಅಕಾಲಿಕ ಮಳೆ ಸದ್ಯ ಕೊಂಚ ಬಿಡುವು ನೀಡಿದೆ. ಇನ್ನೇನು ಮಳೆಗಾಲ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರೈತರು ಬಿತ್ತನೆ ಕಾರ್ಯ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಆದ್ರೆ, ಇದರ ನಡುವೆ ಇಲ್ಲೊಂದೆಡೆ ರೈತರಿಗೆ ಹೊಸ ತಲೆನೋವೊಂದು ಎದುರಾಗಿದೆ. ಅಷ್ಟಕ್ಕೂ ಇಂತಹದೊಂದು ಸಮಸ್ಯೆ ಎದುರಾಗಿರೋದಾದ್ರೂ ಎಲ್ಲಿ..? ರೈತರಿಗೆ ತೊಂದರೆ ಆಗ್ತಿರೋದಾದ್ರೂ ಯಾವುದ್ರಿಂದ ಅಂತೀರಾ... ಈ ಸ್ಟೋರಿ ನೋಡಿ...
ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡ ಹಿನ್ನೆಲೆ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಸದ್ಯ ವರುಣ ಕೊಂಚ ಬಿಡುವು ನೀಡಿದ್ದಾನೆ. ಆದರೆ, ಹೀಗೆ ಸುರಿದು ಹೋದ ಮಳೆ ಇದೀಗ ಹೊನ್ನಾವರ ಭಾಗದ ರೈತರಿಗೆ ಹೊಸ ಸಂಕಷ್ಟವನ್ನು ತಂದೊಡ್ಡಿದೆ. ಅಷ್ಟಕ್ಕೂ ರೈತರಿಗೆ ತಲೆನೋವಾಗಿರುವ ಸಂಕಷ್ಟವೆಂದರೆ ಸೈನಿಕ ಹುಳಗಳು. ಹೊನ್ನಾವರ ತಾಲ್ಲೂಕಿನ ಕಡ್ನೀರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸದ್ಯ ಸೈನಿಕ ಹುಳುಗಳ ಬಾಧೆ ರೈತರನ್ನು ಕಂಗಾಲಾಗಿಸಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಚಿಗುರುಕೊಂಡಿರುವ ಹುಲ್ಲಿಗೆ ಸೈನಿಕ ಹುಳಗಳು ಲಗ್ಗೆಯಿಟ್ಟಿವೆ. ಹೇರಳ ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವ ಹುಳಗಳು ಕೃಷಿ ಜಮೀನಿನಲ್ಲಿರುವ ಹುಲ್ಲು, ಸಸಿಗಳ ಎಲೆಗಳನ್ನು ತಿಂದುಹಾಕುತ್ತಿದ್ದು, ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಮಳೆಗಾಲ ಆರಂಭಕ್ಕೂ ಮುನ್ನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದ್ದ ರೈತರಿಗೆ ಇದೀಗ ಸೈನಿಕ ಹುಳುಗಳ ದಾಳಿ ತಲೆನೋವು ಉಂಟುಮಾಡಿದ್ದು, ಸಸಿಗಳ ನಾಟಿ ಬಳಿಕ ಇದೇ ರೀತಿ ದಾಳಿ ಮಾಡಿದಲ್ಲಿ ವರ್ಷದ ಕೂಳು ಕಳೆದುಕೊಳ್ಳಬೇಕಾದ ಆತಂಕ ಎದುರಾಗಿದೆ ಅಂತ ರೈತ ತಿಮ್ಮಪ್ಪ ನಾಯ್ಕ ತಿಳಿಸಿದ್ದಾರೆ.
ಭಟ್ಕಳದಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ
ಹೊನ್ನಾವರ ತಾಲ್ಲೂಕಿನ ಕಡ್ನೀರು, ಹೊದ್ಕೆ ಶಿರೂರು, ತೊರಗೋಡು, ಬಾಸಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಕೃಷಿ ಜಮೀನುಗಳಲ್ಲಿ ಸೈನಿಕ ಹುಳುಗಳು ಕಾಣಿಸಿಕೊಂಡಿವೆ. ಕೆಲವು ರೈತರು ತಮ್ಮ ಜಾನುವಾರುಗಳಿಗಾಗಿ ಬೆಳೆದಿದ್ದ ಹುಲ್ಲುಗಳು ಕೂಡಾ ಈ ಸೈನಿಕ ಹುಳುಗಳ ಪಾಲಾಗಿವೆ. ಎಕರೆಗಟ್ಟಲೇ ಪ್ರದೇಶದಲ್ಲಿ ಬೆಳೆಯಲಾದ ಹುಲ್ಲಿನ ಮೇಲೆ ದಾಳಿ ನಡೆಸಿದ ಸೈನಿಕ ಹುಳುಗಳು ತಮ್ಮ ಸಂಖ್ಯೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಕೃಷಿ ಇಲಾಖೆ ನೆರವಿಗೆ ಬರಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಇನ್ನು ಸೈನಿಕ ಹುಳುಗಳು ಪತ್ತೆಯಾದ ಪ್ರದೇಶಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕೀಟಗಳಿಗೆ ವಿಷಪ್ರಾಶನ ಮಾಡಬೇಕಾದ ಅಗತ್ಯತೆಯಿದೆ. ಜತೆಗೆ ಸೋಲಾರ್ ಲೈಟ್ ಟ್ರಾಪ್‌ಗಳನ್ನ ಅಳವಡಿಸುವ ಮೂಲಕ ಇವುವಳನ್ನು ನಿಯಂತ್ರಿಸಬಹುದು ಅಂತಾರೆ ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ನಿರ್ದೇಶಕ ಹೊನ್ನಪ್ಪ ಗೌಡ ಹೇಳಿದ್ದಾರೆ.
ಒಟ್ಟಿನಲ್ಲಿ ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿ ಸುಧಾರಿಸಿಕೊಳ್ಳುತ್ತಿರುವ ರೈತರಿಗೆ ಸೈನಿಕ ಹುಳುಗಳ ಬಾಧೆ ಕಂಗಾಲಾಗುವಂತೆ ಮಾಡಿದೆ. ಸದ್ಯ ಈ ಹುಳುಗಳು ಕೆಲವೇ ಭಾಗಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಅವು ಬೇರೆಡೆಗೆ ವ್ಯಾಪಿಸದಂತೆ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ.