ಕೊಪ್ಪಳ(ಏ.16): ಕೊರೋನಾ ಮಹಾಮಾರಿಯ ಅಟ್ಟಹಾಸದಿಂದ ರೈತರ ಪಾಡು ಹೇಳತೀರದಾಗಿದೆ. ಮಾರುಕಟ್ಟೆ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ರೈತರ ಚಿಂತೆ ಹೆಚ್ಚಾಗಿದೆ.

ಕೊಪ್ಪಳ ತಾಲೂಕಿನ ಓಜನಳ್ಳಿ ಗ್ರಾಮದ ಚಿನ್ನಪ್ಪ ಮೇಟಿ ಅವರ 3 ಎಕರೆ ಹೊಲದಲ್ಲಿ ಹಾಕಿದ್ದ ಹೂಕೋಸನ್ನು ಕೇಳುವವರೇ ಇಲ್ಲದಂತಾಗಿದೆ. ಮಾಡಿದ ಖರ್ಚು, ಕಟಾವು ಮಾಡಿದ ಕೂಲಿ ಹಣ ಬಂದರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದು. ಆದರೆ, ಕೂಲಿ ಹಣ ಸಹ ಬರುವುದಿಲ್ಲ, ಅದನ್ನು ಕೇಳುವವರೇ ಇಲ್ಲದಂತೆ ಆಗಿದೆ. ಹೀಗಾಗಿ, ವಿಧಿಯಿಲ್ಲದೆ ಕಟಾವು ಮಾಡಿದರೆ ಮೈಮೇಲೆಯಾಗುತ್ತದೆ ಎಂದು ಹೂಕೋಸು ಸಮೇತ ಹರಗಿದ್ದೇವೆ.

ಕೊಪ್ಪಳಕ್ಕೂ ಕಾಲಿಟ್ಟಿತೇ ಕೊರೋನಾ? ಆತಂಕದಲ್ಲಿ ಜನತೆ..!

ಇದರಿಂದ ಮೈದುಂಬಿ ಬೆಳೆದಿದ್ದ ಬೆಳೆ ಕಣ್ಣೆದುರಿಗೆ ಮಣ್ಣಾಗುವುದನ್ನು ಕಂಡು ರೈತರು ಕಣ್ಣೀರು ಹಾಕುವಂತಾಗಿದೆ. ಸುಮಾರು 1 ಲಕ್ಷ ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಹೂಕೋಸು ಒಳ್ಳೆ ಮಾರುಕಟ್ಟೆ ಸಿಕ್ಕಿದ್ದರೇ ಬರೋಬ್ಬರಿ ನಾಲ್ಕೈದು ಲಕ್ಷ ರುಪಾಯಿ ಆದಾಯ ಬರುತ್ತಿತ್ತು.

ರೈತರ ಗೋಳು:

ಇದು ಒಬ್ಬ ರೈತನ ಕತೆಯಲ್ಲ, ತರಕಾರಿ ಬೆಳೆದ ಬಹುತೇಕ ರೈತರ ಸ್ಥಿತಿ ಇದೇ ಆಗಿದೆ. ಬಹುತೇಕ ರೈತರು ಈಗಗಾಲೇ ತಮ್ಮ ಬೆಳೆಯನ್ನು ಹರಗಿ, ಮತ್ತೊಂದು ಬೆಳೆ ಬೆಳೆಯುವುದಕ್ಕೆ ಹದ ಮಾಡುತ್ತಿದ್ದಾರೆ. ಆದರೂ ಕೊರೋನಾ ಎಫೆಕ್ಟ್ ಇನ್ನು ತಣ್ಣಗಾಗದಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ. ಬಿತ್ತಬೇಕೋ ಬೇಡವೋ ಎನ್ನುವ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅದರಲ್ಲೂ ತರಕಾರಿಯನ್ನು ಬೆಳೆಯುವ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.