Karnataka Rains: ಬೆಳಿ ನೀರುಪಾಲಾಗೇತ್ರಿ, ನಿರೀಕ್ಷೆ ನುಚ್ಚುನೂರಾಗೇತ್ರಿ, ರೈತರ ಗೋಳು ಕೇಳೋರೇ ಇಲ್ಲ..!
ಧಾರಾಕಾರ ಮಳೆಗೆ ಅಪಾರ ಬೆಳೆಹಾನಿ, ಕೆರೆಯಂತಾದ ಜಮೀನುಗಳು, ನೆಲಕಚ್ಚಿ, ಕೊಳೆತು ನಾರುತ್ತಿವೆ ಬೆಳೆಗಳು
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕೊಪ್ಪಳ(ಸೆ.08): ನಾವ್ ಲಕ್ಷಾಂತರ ರುಪಾಯಿ ಖಚ್‌ರ್ ಮಾಡಿ ಕಬ್ಬು ಹಾಕಿದ್ವಿ. ಬೆಳಿ ಭರ್ಜರಿ ಬರ್ತದ ಅಂಥಾ ಆಸೆ ಇಟ್ಟಕೊಂಡಿದ್ವಿ. ಆದರೆ ಕಲ್ಲು ಸುರಿದಂಗ್ ಮಳಿ ಆಗಿದ್ರಿಂದ ನಮ್ ಹೊಲಕ್ಕ ಹಿರೇಳ್ಳದ ನೀರು ನುಗ್ಗಿ ಕಬ್ಬಿನ ಬೆಳೆಯಲ್ಲ ನೀರುಪಾಲಾಗೇತ್ರಿ. ನಿರೀಕ್ಷೆ ನುಚ್ಚುನೂರಾಗೇತ್ರಿ... ಇದು ತಾಲೂಕಿನ ಹಿರೇಸಿಂಧೋಗಿ ಗ್ರಾಮದ ರೈತ ಟಿ. ಬಸವನಗೌಡ ಪೊಪಾ ಅಳಲು. ಹಿರೇಹಳ್ಳದ ನೀರು ಇವರ ಜಮೀನಿಗೆ ನುಗ್ಗಿದ್ದು, ಇಡೀ ಜಮೀನು ಜಲಾವೃತವಾಗಿದ್ದು, ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದ ಅವರಿಗೆ ಭಾರಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಅಪಾರ ಹಾನಿ:
ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ ಬಳಿಕ ಇಳಿಕೆಯಾಗಿದ್ದು, ಆದರೆ ವರುಣನ ಅಬ್ಬರದಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಹಲವೆಡೆ ರಸ್ತೆಗಳು ಕಿತ್ತುಹೋಗಿವೆ. ಕೆಲವೆಡೆ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಸಂಕಷ್ಟವಾಗಿದೆ.
ಮಳೆ ನೀರಲ್ಲಿ ಕೊಚ್ಚಿಹೋದ ಇಬ್ರು ಪೊಲೀಸ್ರು, ಓರ್ವ ಪೇದೆಯ ಶವ ಪತ್ತೆ
ಅರಕೇರಿಯ ಹಿರೇಹಳ್ಳದ ನೀರಿನ ಹರಿವು ಹೆಚ್ಚಿದ್ದರಿಂದ ನೀರನ್ನು ಹಿರೇಹಳ್ಳಕ್ಕೆ ಬಿಡಲಾಗಿತ್ತು. ಹಿರೇಹಳ್ಳಕ್ಕೆ ಒಳಪಡುವ ಗ್ರಾಮದಲ್ಲಿ ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಬೆಳೆಹಾನಿಯಾಗಿದೆ. ಇದರಿಂದ ಕೊಪ್ಪಳ ತಾಲೂಕಿನ ನಾನಾ ಹಳ್ಳಿಗಳಲ್ಲಿ ಅಪಾರ ಬೆಳೆನಷ್ಟವಾಗಿದೆ. ತಾಲೂಕಿನ ಮಂಗಳಾಪುರ, ವರ್ತಟನಾಳ, ಗುನ್ನಳ್ಳಿ, ಚಿಕ್ಕಸಿಂಧೋಗಿ, ಗೊಂಡಬಾಳ, ಡಂಬರಳ್ಳಿ, ಹಿರೇಸಿಂಧೋಗಿ, ಕಾಟ್ರಳ್ಳಿ, ಕೋಳೂರು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ನೀರಿನ ಪಾಲಾಗಿದೆ.
ಸಾವಿರಾರು ರು. ಖರ್ಚು ಮಾಡಿ ಬೆಳೆದಿದ್ದ ರೈತರ ಬೆಳೆ ನೀರಿಗೆ ನೆಲಕಚ್ಚಿದೆ. ಇನ್ನು ಈರುಳ್ಳಿ ಬೆಳೆಯಂತೂ ಗಬ್ಬು ನಾರುತ್ತಿದೆ. ಕೆಲವು ತೋಟದ ಮನೆಗಳಿಗೆ ನೀರು ಹೊಕ್ಕು ಜನರ ದಿನನಿತ್ಯದ ಬಳಕೆಯ ಸಾಮಾನು ಹಾಗೂ ದವಸ ಧಾನ್ಯಗಳು ನೀರುಪಾಲಾಗಿವೆ. ರೈತರ ಗೋಳು ಕೇಳೋರು ಇಲ್ಲದಂತಾಗಿದೆ.
ಬೆಳೆ ನಂಬಿ ಮಾಡಿದ ಸಾಲಕ್ಕೆ ಕೆಲವು ರೈತರು ಕೊರಗುತ್ತಿದ್ದಾರೆ. ಬೆಳೆ ಬರುತ್ತದೆ ಎಂಬ ನಂಬಿಕೆ ಸದ್ಯ ಹುಸಿಯಾಗಿದೆ. ಸದಾ ನೀರಿನಲ್ಲಿಯೇ ಬೆಳೆಯುತ್ತಿದ್ದ ಕಬ್ಬು ಸಹ ಮಳೆ ಹೊಡೆತಕ್ಕೆ ನೆಲಕಚ್ಚಿದೆ. ಬೆಳೆಹಾನಿಯಿಂದ ರೈತ ವರ್ಗ ಸುಧಾರಿಸಿಕೊಳ್ಳುವುದು ಕಷ್ಟಕರವಾಗಿದೆ. ಅಲ್ಲದೆ ಕೆಲವು ಕಡೆ ಜಮೀನಿನ ಸಮತಟ್ಟಿಗೆ ನಿರ್ಮಿಸಿದ್ದ ಬದುವುಗಳೆಲ್ಲವೂ ಕೊಚ್ಚಿ ಹೋಗಿ ಜಮೀನಿನ ಫಲವತ್ತತೆ ಮಣ್ಣು ಹರಿದು ಹೋಗಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ, ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಿ ರೈತ ವರ್ಗಕ್ಕೆ ಆಸರೆ ಆಗಬೇಕು. ಇದರ ಬಗ್ಗೆ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು, ಸಚಿವರು ವಿಶೇಷ ಗಮನ ಹರಿಸಬೇಕಾಗಿದೆ.
ಕೊಚ್ಚಿ ಹೋದ ರಸ್ತೆಗಳು
ಹಲವೆಡೆ ಮಳೆಯ ಆರ್ಭಟಕ್ಕೆ ರಸ್ತೆಗಳೆಲ್ಲ ಕೊಚ್ಚಿ ಹೋಗಿವೆ. ಇದರಿಂದ ಜನರು ಪ್ರಯಾಣ ಮಾಡುವುದು ಸದ್ಯ ಕಷ್ಟಕರವಾಗಿದೆ. ಅಲ್ಲದೆ ಕೆಲವು ಕಡೆ ಪ್ರಮುಖ ರಸ್ತೆಗಳಲ್ಲಿಯೇ ರಸ್ತೆಗಳು ಕೊಚ್ಚಿ ಹೋಗಿದ್ದು, ಅಧಿಕಾರಿ ವರ್ಗದವರು ಅವುಗಳನ್ನು ಗುರುತಿಸಿ ಅಲ್ಲಿ ಸೂಚನಾ ಫಲಕಗಳನ್ನು ಶೀಘ್ರ ಅಳವಡಿಸಬೇಕಿದೆ. ತಾಲೂಕಿನ ಚಿಕ್ಕಸಿಂಧೋಗಿ ಬಳಿಯ ಶಿಗ್ಗಾಂವಿ- ಕಲ್ಮಾಲ ರಸ್ತೆ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ.
Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ
ಬೆಳೆಹಾನಿ ಬಗ್ಗೆ ಶೀಘ್ರ ಅಧಿಕಾರಿ ವರ್ಗವದರು ಸಮೀಕ್ಷ ನಡೆಸಿ ಪರಿಹಾರ ನೀಡಬೇಕು. ರೈತ ವರ್ಗ ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಆದರೆ ಅವರಿಗೆ ಬೆಳೆನೂ ಇಲ್ಲ ಪರಿಹಾರನೂ ಇಲ್ಲ ಅನ್ನುವಂತಾಗಬಾರದು ಅಂತ ರೈತ ಈಶಪ್ಪ ಮಾದಿನೂರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಮಳೆಯಿಂದ ಅಪಾರ ಬೆಳೆಹಾನಿಯಾಗಿದೆ. ಸಮೀಕ್ಷೆ ಕಾರ್ಯರಂಭ ಮಾಡಿದ್ದೇವೆ. ಜಮೀನಿನಲ್ಲಿ ತೆರಳಲು ಅತಿಯಾದ ನೀರು ನಿಂತಿರುವುದರಿಂದ ನೀರು ತಗ್ಗಿದ ಮೇಲೆ ಕೆಲವು ಜಮೀನುಗಳ ಸಮೀಕ್ಷೆ ಮಾಡುತ್ತೇವೆ. ಈಗಾಗಲೇ 200 ಹೆಕ್ಟರ್‌ಗೂ ಹೆಚ್ಚು ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ಮುಂದುವರಿದಿದೆ ಅಂತ ಕೊಪ್ಪಳ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಸದಾಶಿವ ಹೇಳಿದ್ದಾರೆ.